
ಬೆಂಗಳೂರು (ಮಾ.18): ನಗರದ ಹೆಬ್ಬಗೋಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿ ಬಂಧನಕ್ಕೆ ಒಳಗಾಗಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆಗೆ ಹೈಕೋರ್ಟ್ ಜಾಮೀನು ನೀಡಿದೆ.
ಜಾಮೀನು ಕೋರಿ ಸದ್ಯ ಆನೇಕಲ್ ತಾಲೂಕಿನ ಹುಲಿಮಂಗಲ ಪೊಡು ಗ್ರಾಮದಲ್ಲಿ ನೆಲೆಸಿರುವ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ದೂರಿನ ಸಾರಾಂಶ ಪರಿಶೀಲಿಸಿದರೆ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸುತ್ತಿದ್ದರು. ಆ ಸಮಯದಲ್ಲಿ ವ್ಯಕ್ತಿಯೊಬ್ಬರು ಅರ್ಜಿದಾರೆಯನ್ನು ‘ಜೈ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರು. ಈ ವೇಳೆ ‘ಜೈ ಬಾಂಗ್ಲಾ’ ಎಂದು ಕೂಗಿದ ಮಹಿಳೆ ಆ ನಂತರ ಮೂರು ಬಾರಿ ‘ಜೈ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ.
ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳಿವೆ. ಆ ಮಕ್ಕಳನ್ನು ಅರ್ಜಿದಾರೆಯೇ ನೋಡಿಕೊಳ್ಳಬೇಕಿದೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭಗಳನ್ನು ಪರಿಗಣಿಸಿದರೆ ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ