ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್‌ ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ

Published : Mar 18, 2026, 07:05 AM IST
Hindu Marriage

ಸಾರಾಂಶ

Bengaluru: ಜಾತಿ ಬೇರೆ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಪ್ರೇಮಿಗಳಿಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ, ಪೊಲೀಸರು ದೇವಸ್ಥಾನದಲ್ಲಿ ನಡೆದ ಅವರ ವಿವಾಹಕ್ಕೆ ಭದ್ರತೆ ಒದಗಿಸಿದ್ದಾರೆ. 

ಬೆಂಗಳೂರು: ಜಾತಿ ಬೇರೆ ಎಂಬ ಕಾರಣಕ್ಕೆ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಹೈಕೋರ್ಟ್‌ ಮೊರೆ ಹೋಗಿ ತಮ್ಮ ಮದುವೆಗೆ ಪೊಲೀಸ್‌ ಭದ್ರತೆ ಪಡೆದು, ದೇವಸ್ಥಾನದಲ್ಲಿ ವಿವಾಹವಾದ ಘಟನೆ ಇತ್ತೀಚೆಗೆ ನಡೆದಿದೆ.

ಅತ್ತಿಗುಪ್ಪೆ ಯುವಕ ರವಿ ಮತ್ತು ವಿಜಯನಗರದ ರಮ್ಯಾ (ಹೆಸರು ಬದಲಿಸಲಾಗಿದೆ) ಮದುವೆಯಾದ ನವ ಜೋಡಿ. ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮದುವೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪೊಲೀಸರು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ರವಿ ಮತ್ತು ರಮ್ಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮದುವೆಗೆ ಭದ್ರತೆ ಒದಗಿಸುವಂತೆ ಕೋರ್ಟ್ ಸೂಚನೆ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮೊಗದಂ ಅವರ ಪೀಠ, ಅರ್ಜಿದಾರರ ಮದುವೆಗೆ ಭದ್ರತೆ ಒದಗಿಸುವಂತೆ ಚಂದ್ರಾಲೇಔಟ್‌ ಠಾಣಾ ಪೊಲೀಸರಿಗೆ ಮಾ.9ರಂದು ನಿರ್ದೇಶಿಸಿತ್ತು. ಹೈಕೋರ್ಟ್‌ ನಿರ್ದೇಶನದಂತೆ ಪೊಲೀಸರು ಮಾ.13ರಂದು ನಗರದ ದೇವಸ್ಥಾನವೊಂದರಲ್ಲಿ ನಡೆದ ರವಿ ಮತ್ತು ರಮ್ಯಾ ಮದುವೆಗೆ ಭದ್ರತೆ ಒದಗಿಸಿದ್ದಾರೆ. ಜೊತೆಗೆ, ನವ ಜೋಡಿಯ ಪೋಷಕರನ್ನು ಕರೆದು, ಹೈಕೋರ್ಟ್‌ ಆದೇಶವಿರುವ ಹಿನ್ನೆಲೆಯಲ್ಲಿ ದಂಪತಿಗೆ ತೊಂದರೆ ಕೊಡಬಾರದು ಎಂದು ಸೂಚಿಸಿ ಅವರಿಂದ ಮುಚ್ಚಳಿಕೆ ಸಹ ಬರೆಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಮೋಹನ್‌ ಕುಮಾರ್‌, ಅರ್ಜಿದಾರರು ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಕುರಿತು ಮಾಹಿತಿ ತಿಳಿದ ಪೋಷಕರು ಮದುವೆಗೆ ಒಪ್ಪಿರಲಿಲ್ಲ. ಇಬ್ಬರೂ ಬೇರೆ-ಬೇರೆ ಜಾತಿಗೆ ಸೇರಿರುವ ಕಾರಣಕ್ಕೆ ಮದುವೆಗೆ ಪೋಷಕರು ಒಪ್ಪುತ್ತಿರಲಿಲ್ಲ. ಇನ್ನೂ ಮದುವೆ ತಡೆಯಲು ಯತ್ನಿಸುತ್ತಿದ್ದಾರೆ. ಇದರಿಂದ ಮದುವೆಗೆ ಭದ್ರತೆ ನೀಡುವಂತೆ ಕೋರಿ ಅರ್ಜಿದಾರರು ಫೆ.19ರಂದು ಸಲ್ಲಿಸಿದ ಮನವಿ ಪತ್ರವನ್ನು ನಗರದ ಚಂದ್ರಾಲೇಔಟ್‌ ಠಾಣಾ ಪೊಲೀಸರು ಪರಿಗಣಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ವಾದ ಪರಿಗಣಿಸಿದ ಹೈಕೋರ್ಟ್‌, ಮದುವೆಗೆ ಯಾರಿಂದಲೂ ಬೆದರಿಕೆ ಅಥವಾ ಮಧ್ಯಪ್ರವೇಶ ಎದುರಾಗದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಾ.9ರಂದು ಚಂದ್ರಾಲೇಔಟ್‌ ಠಾಣಾ ಪೊಲೀಸರಿಗೆ ನಿರ್ದೇಶಿಸಿತ್ತು. ಮಾ.13ರಂದು ಪೊಲೀಸರ ಭದ್ರತೆಯಲ್ಲಿ ದೇವಸ್ಥಾನದಲ್ಲಿ ಅರ್ಜಿದಾರರು ಮದುವೆಯಾಗಿದ್ದರು.

ಪೋಷಕರಿಂದ ಮುಚ್ಚಳಿಕೆ ಪತ್ರ! 

ಇತ್ತೀಚೆಗೆ ಮರ್ಯಾದೆ ಹತ್ಯೆ ಹೆಚ್ಚುತ್ತಿವೆ. ಇಂತಹ ಸಮಯದಲ್ಲಿ ಪ್ರೇಮಿಗಳು ಮದುವೆಯಾಗುವುದಕ್ಕೆ ಭದ್ರತೆ ಒದಗಿಸಲು ಪೊಲೀಸರಿಗೆ ಹೈಕೊರ್ಟ್‌ ಸೂಚಿಸಿರುವುದು ನಿಜಕ್ಕೂ ವಿಶೇಷ ಸಂಗತಿ. ನ್ಯಾಯಾಲಯದ ಸೂಚನೆಯಂತೆ ರವಿ ಮತ್ತು ರಮ್ಯಾ ಮದುವೆಗೆ ಪೊಲೀಸರು ಭದ್ರತೆ ನೀಡಿದ್ದರು. ಪೊಲೀಸರು ಪೋಷಕರನ್ನು ಕರೆಯಿಸಿ, ನವ ಜೋಡಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಎಂದು ಸೂಚಿಸಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ ಎಂದು ವಕೀಲ ಡಿ.ಮೋಹನ್‌ ಕುಮಾರ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ ತೈಲ ಘಟಕಕ್ಕೆ ಅಂಬಾನಿ ಹೂಡಿಕೆ: ಭಾರತಕ್ಕೆ ಆಗುವ ಲಾಭಗಳೇನು? | ದಿವ್ಯಾ ಹೆಗಡೆ ಕಬ್ಬಿನಗದ್ದೆ ಅಂಕಣ
Karnataka News Live: ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್‌ ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ