
ಬೆಂಗಳೂರು : ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಯಾವುದೇ ರೀತಿಯ ಕಿರುಕುಳ ನೀಡಲು ಮುಂದಾದರೆ ರಾಜ್ಯ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರ ಸಂಘಟನೆಗಳು, ಮುಖಂಡರು, ಚಿಂತಕರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಿರಂತರ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ ಎಂದಿದ್ದಾರೆ.
ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಸಂಘರ್ಷ ಪರಿಸ್ಥಿತಿಯನ್ನು ಹತೋಟಿಗೆ ತರುವ ಬದಲು ರಾಷ್ಟ್ರವಿದ್ರೋಹಿ ಮತೀಯ ಶಕ್ತಿಗಳನ್ನು ಓಲೈಸುವ ಸಲುವಾಗಿ ಸದ್ಯ ಕೋಮು ನಿಗ್ರಹ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.
ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವುದು ಪೊಲೀಸ್ ಇಲಾಖೆಯಿಂದ ಸೋರಿಕೆಯಾಗಿರುವ ದಾಖಲೆ ಹಾಗೂ ಆಡಿಯೋ ರೆಕಾರ್ಡ್ ಗಳಿಂದ ಸ್ಪಷ್ಟವಾಗುತ್ತಿದೆ. ಸೂಲಿಬೆಲೆ ಅವರಂತಹ ಚಿಂತಕರನ್ನೇ ಈ ಪರಿಯಾಗಿ ಗುರಿಯಾಗಿಸಿಕೊಂಡಿರುವಾಗ ಸಾಮಾನ್ಯ ಹಿಂದೂ ಪರ ಕಾರ್ಯಕರ್ತರನ್ನು ಯಾವ ಪರಿಯಲ್ಲಿ ಪೊಲೀಸ್ ಇಲಾಖೆ ಕಿರುಕುಳ ನೀಡಲು ಸಜ್ಜಾಗಿದೆ ಎನ್ನುವುದು ಸದ್ಯ ಸೋರಿಕೆಯಾಗಿರುವ ಆಡಿಯೋ ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರನ್ನು ಬಳಸಿಕೊಂಡು ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸಕ್ಕೆ ಕೈ ಹಾಕಿದರೆ ಅದನ್ನು ಪ್ರತಿಭಟಿಸಿ ಹಿಂದೂ ಸಮಾಜದ ಕಾರ್ಯಕರ್ತರು ಹಾಗೂ ಮುಖಂಡರ ರಕ್ಷಣೆಗೆ ಬಿಜೆಪಿ ಕಟಿಬದ್ಧವಾಗಿ ಹೋರಾಡಲಿದೆ ವಿಜಯೇಂದ್ರ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ