ರಾಜ್ಯ ಸರ್ಕಾರ ಮತ್ತೊಮ್ಮೆ ಜಾತಿ ಗಣತಿಗೆ ಬಿಜೆಪಿ ನಾಯಕರ ಆಕ್ರೋಶ

Published : Jun 12, 2025, 07:56 AM IST
karnataka bjp core committee meeting

ಸಾರಾಂಶ

ಕಾಂಗ್ರೆಸ್ ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಸದ್ಯ ಮಾಡಲಾಗಿರುವ ಜಾತಿ ಗಣತಿ ವರದಿಯನ್ನು ಕೈಬಿಟ್ಟು ಮರು ಸಮೀಕ್ಷೆ ಮಾಡಲು ಮುಂದಾಗಿದೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

  ಬೆಂಗಳೂರು :  ಕಾಂಗ್ರೆಸ್ ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಸದ್ಯ ಮಾಡಲಾಗಿರುವ ಜಾತಿ ಗಣತಿ ವರದಿಯನ್ನು ಕೈಬಿಟ್ಟು ಮರು ಸಮೀಕ್ಷೆ ಮಾಡಲು ಮುಂದಾಗಿದೆ. ಈ ನಿರ್ಧಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣ ಮರೆಮಾಚಲು ಪುನಃ ಜಾತಿ ಗಣತಿ ವಿಷಯ ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ನಿಮಗೆ ನಿಜಕ್ಕೂ ಬದ್ಧತೆ, ಪ್ರಾಮಾಣಿಕತೆ ಇದ್ದರೆ ಜಾತಿ ಗಣತಿ ಸಮೀಕ್ಷೆ ಹೇಗಿರಬೇಕು ಎಂಬ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ನಡೆಸಬೇಕು. ಜತೆಗೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸುವ ತೀರ್ಮಾನದ ಮೂಲಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳಮೋಕ್ಷ ಮಾಡಿದ್ದು, ಇದು ಅವರ ಸೋಲು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗೆಲುವಾಗಿದೆ. ಈ ವರದಿಯನ್ನು ನಾವೆಲ್ಲರೂ ವಿರೋಧಿಸಿದ್ದೆವು‌. ಯಾರು ಏನೇ ಮಾಡಿದರೂ ವರದಿ ಜಾರಿ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದರು‌‌. ಈಗ ಅವರು ಹೇಳಿದಂತೆ ನಡೆದುಕೊಳ್ಳದೇ ಇರುವುದರಿಂದ ರಾಜೀನಾಮೆ ಕೊಡುವುದು ಸೂಕ್ತ. ಈಗಾಗಲೇ ₹165 ಕೋಟಿ ವ್ಯರ್ಥವಾಗಿದೆ. ಮರು ಸಮೀಕ್ಷೆ ನಡೆಸಲು ಇವರ ಬಳಿ ಹಣವಿಲ್ಲ ಎಂದರು.

ಸಿದ್ದರಾಮಯ್ಯ ಅವರು 90 ದಿನದಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಶಾಲೆಗಳು ಈಗಾಗಲೇ ಆರಂಭವಾಗಿದ್ದು ಸಮೀಕ್ಷೆಗೆ ಶಿಕ್ಷಕರನ್ನು ಬಳಸಿದರೆ ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಬುಡಮೇಲಾಗುತ್ತವೆ. ಮಕ್ಕಳ ಭವಿಷ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ಕಾಲ್ತುಳಿತ ದುರಂತ ಮರೆಮಾಚಲು ಮತ್ತೊಂದು ಬೃಹತ್ ನಾಟಕ ಆರಂಭಿಸಿರುವ ಅನುಮಾನಗಳು ದಟ್ಟವಾಗಿವೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಕ್ಷಮೆ ಕೇಳಲಿ: ಸುನೀಲ್‌ಕುಮಾರ್

ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ಕುಮಾರ್ ಅವರು, ಕೇಂದ್ರ ಸರ್ಕಾರವು ಜಾತಿ ಗಣತಿ ಮತ್ತು ಜನಗಣತಿ ಮಾಡಲು ಹೊರಟಿರುವಾಗ ರಾಜ್ಯ ಸರ್ಕಾರವೂ ಮತ್ತೊಂದು ಗಣತಿ ಮಾಡುವ ಅಗತ್ಯ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದು, ಜಾತಿ ಗಣತಿ ವಿಷಯದಲ್ಲಿ 10 ವರ್ಷ ತಪ್ಪು ದತ್ತಾಂಶವನ್ನು ಪದೇ ಪದೇ ರಾಜ್ಯದ ಜನರಿಗೆ ಹೇಳುತ್ತ ಬಂದಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಅಲ್ಲದೇ, ಮುಡಾ ಹಗರಣ, ವಾಲ್ಮೀಕಿ ಹಗರಣ, ಕಾಲ್ತುಳಿತದ ಪ್ರಕರಣ, ಅಬಕಾರಿ ಹಗರಣ, ಈಗ ಈ ಜಾತಿ ಗಣತಿ ಸೇರಿ ಸರಣಿ ವೈಫಲ್ಯ ಕಂಡ ನೀವು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಹಿಂದಿನ ಜಾತಿ ಸಮೀಕ್ಷೆಯನ್ನು ಕೈಬಿಟ್ಟಿದ್ದೇವೆ ಎಂದರೆ ₹165 ಕೋಟಿ ಖರ್ಚು ಮಾಡಿದ್ದಕ್ಕೆ ಯಾರು ಹೊಣೆಗಾರರು? ಹಿಂದಿನ ಸರ್ವೇಗೆ ಮಾಡಿದ ಖರ್ಚಿಗೆ ಯಾರನ್ನು ಹೊಣೆಯಾಗಿ ಮಾಡುತ್ತೀರಿ? ಹೊಸ ಸಮೀಕ್ಷೆಗೆ ತಗಲುವ ವೆಚ್ಚಕ್ಕೆ ಯಾರನ್ನು ಜವಾಬ್ದಾರರನ್ನಾಗಿ ಮಾಡುವಿರಿ? ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ತೆವಲಿಗೆ ಜಾತಿ ಬಳಕೆ: ರವಿ

ಚಿಕ್ಕಮಗಳೂರಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಂತರಾಜ್‌ ವರದಿಯನ್ನು ರಾಜ್ಯ ಸರ್ಕಾರ ವೈಜ್ಞಾನಿಕ ಎಂದು ಸಮರ್ಥನೆ ಮಾಡುತ್ತಿತ್ತು. ಈಗ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ರು. ಖರ್ಚು ಮಾಡಿ ಮಾಡಿದ ವರದಿ ಅವೈಜ್ಞಾನಿಕ ಎಂದು ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಸಂವಿಧಾನದತ್ತ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ, ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ ವಿಷಯಾಂತರ ಗೊಳಿಸಲು ಮತ್ತೆ ಜಾತಿಗಣತಿ ಎನ್ನುತ್ತಿದೆ. ಇಚ್ಛಾಶಕ್ತಿ ಇಲ್ಲದ ರಾಜಕೀಯ ತೆವಲಿಗೆ ಜಾತಿ ಜಾತಿ ಎತ್ತಿಕಟ್ಟಲು ಸರ್ಕಾರದ ಹಣ ಏಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದರು.

ತೆರಿಗೆ ಹಣದಿಂದ ನಡೆದ ಸಮೀಕ್ಷೆ ಮೂಲೆಗೆ: ಯದುವೀರ್‌

ಮೈಸೂರಲ್ಲಿ ಮಾತನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಕಾಲ್ತುಳಿತ ಪ್ರಕರಣವನ್ನು ಮುಚ್ಚಿಹಾಕಲು ಕಾಂತರಾಜ್‌ ವರದಿಯನ್ನು ಮೂಲೆಗೆ ಸರಿಸಿ, ಮತ್ತೆ ಮರು ಗಣತಿಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಈ ಮೂಲಕ ಹಿಂದುಳಿದ ವರ್ಗಗಳ ಹಿತ ಬಲಿಕೊಡಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಜನರ ತೆರಿಗೆಯ ₹165 ಕೋಟಿ ಹಣ ಖರ್ಚು ಮಾಡಿ ಸಿದ್ಧಪಡಿಸಿರುವ ವರದಿಸಯನ್ನು ತಿರಸ್ಕರಿಸಿದ್ದ, ಇದು ಸಿಎಂ ಸಿದ್ದರಾಮಯ್ಯ ಅವರ ಬೇಜಾವಾಬ್ದಾರಿ ಎಂದು ದೂರಿದರು.

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಬೇಕಾದ ನಿರ್ಣಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹೇಗೆ ಪ್ರಕಟಿಸಿದರು. ರಾಜ್ಯ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಹೈಕಮಾಂಡ್‌ ನಡೆಸುತ್ತಿದೆಯಾ?. ರಾಷ್ಟ್ರ ಮಟ್ಟದಲ್ಲಿ ರಾಜ್ಯ ಸಸರ್ಕಾರದ ಮರ್ಯಾದೆ ಹರಾಜಾಗಿದ್ದು, ಸರ್ಕಾರವನ್ನು ಉಳಿಸಲು ಹೈಕಮಾಂಡ್‌ ವಿಷಯಾಂತರ ಮಾಡುವ ನಿಟ್ಟಿನಲ್ಲಿ ವರದಿ ಕೈಬಿಟ್ಟಿದ್ದಾರೆ. ಇದು ಕಾಂತರಾಜ್ ವರದಿಯೋ? ಜಯಪ್ರಕಾಶ್ ಹೆಗ್ಡೆ ವರದಿಯೋ? ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯೋ? ಅಥವಾ ಜಾತಿ ಗಣತಿಯೋ? ಎಂದು 10 ವರ್ಷವಾದರೂ ಸಿದ್ದರಾಮಯ್ಯ ಸರ್ಕಾರಕ್ಕೆ ಗೊಂದಲ ಬಗೆಹರಿಸಿಲ್ಲ ಎಂದು ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌