ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯೇ ಸರಿ ಇಲ್ಲ ಅನ್ನೋದು ತಪ್ಪು: ಸಚಿವ ಸುಧಾಕರ್‌

By Govindaraj SFirst Published Dec 6, 2022, 3:20 AM IST
Highlights

ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳನ್ನೇ ದೊಡ್ಡದಾಗಿ ಬಿಂಬಿಸಿ ಇಡೀ ವ್ಯವಸ್ಥೆಯೇ ಸರಿಯಿಲ್ಲ ಎಂದು ವ್ಯಾಖ್ಯಾನಿಸುವುದು ಸಾವಿರಾರು ಪ್ರಾಮಾಣಿಕ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಆಂಬ್ಯುಲೆನ್ಸ್‌ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಡುವ ಅಪಮಾನ ಎಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬೆಂಗಳೂರು (ಡಿ.06): ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳನ್ನೇ ದೊಡ್ಡದಾಗಿ ಬಿಂಬಿಸಿ ಇಡೀ ವ್ಯವಸ್ಥೆಯೇ ಸರಿಯಿಲ್ಲ ಎಂದು ವ್ಯಾಖ್ಯಾನಿಸುವುದು ಸಾವಿರಾರು ಪ್ರಾಮಾಣಿಕ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಆಂಬ್ಯುಲೆನ್ಸ್‌ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಡುವ ಅಪಮಾನ ಎಂದು ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಕುರಿತು ವಿರೋಧಪಕ್ಷದ ಟೀಕೆಗೆ ಆರೋಗ್ಯ ಸಚಿವ ಡಾ.ಸುಧಾಕರ್‌ ಸೋಮವಾರ ಸರಣಿ ಟ್ವೀಟ್‌ ಮೂಲಕ ಸರ್ಕಾರ ಮತ್ತು ಆರೋಗ್ಯ ಇಲಾಖೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಂಬುದು ಯಾವುದೇ ದೇಶದ ಅಥವಾ ರಾಜ್ಯದ ಅತ್ಯಂತ ಪ್ರಮುಖ ಭಾಗ. ಆರೋಗ್ಯವಂತ ಪ್ರಜೆಗಳೇ ಒಂದು ದೇಶದ ನಿಜವಾದ ಆಸ್ತಿ. ಆರೋಗ್ಯ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾದಾಗ ಆ ದೇಶ ಪ್ರಗತಿ ಕಾಣಲು ಸಾಧ್ಯ. ನಮ್ಮ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನ್ಯೂನ್ಯತೆಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಆ ನ್ಯೂನ್ಯತೆಗಳನ್ನೇ ದೊಡ್ಡದಾಗಿ ಬಿಂಬಿಸಿ ಇಡೀ ವ್ಯವಸ್ಥೆಯೇ ಸರಿಯಿಲ್ಲ ಎಂದು ವ್ಯಾಖ್ಯಾನಿಸುವುದು ಸಾವಿರಾರು ಪ್ರಾಮಾಣಿಕ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ಆಂಬ್ಯುಲೆನ್ಸ್‌ ಚಾಲಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಡುವ ಅಪಮಾನ’ ಎಂದಿದ್ದಾರೆ.

ಸಮಾಜದ ಎಲ್ಲಾ ಕ್ಷೇತ್ರಗಳೂ ತಾಂತ್ರಿಕತೆ ಅವಲಂಬಿಸಿವೆ: ಸಚಿವ ಸುಧಾಕರ್‌

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರೋಗ್ಯ ವ್ಯವಸ್ಥೆ ಸಂಪೂರ್ಣ ಸುಧಾರಿಸಿದೆ ಎಂದು ನಾನು ಹೇಳುವುದಿಲ್ಲ. ಆದರೆ ಆ ದಿಕ್ಕಿನಲ್ಲಿ ಹಿಂದೆಂದಿಗಿಂತಲೂ ಸಾಕಷ್ಟುಹೆಜ್ಜೆಗಳನ್ನು ಇಟ್ಟಿದ್ದೇವೆ ಎನ್ನುವುದು ಮಾತ್ರ ವಾಸ್ತವ. ಇದರ ಬಗ್ಗೆ ವಸ್ತುನಿಷ್ಠ ವಿಮರ್ಶೆಯ ಅವಶ್ಯಕತೆ ಇದೆ. ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲದಿದ್ದರೆ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕವನ್ನೇ ಹಿಮ್ಮೆಟ್ಟಿಇಂದು ಜನಜೀವನ ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಿತ್ತೆ? ಕೆಲವೇ ತಿಂಗಳುಗಳಲ್ಲಿ 12 ಕೋಟಿ ಡೋಸ್‌ ಲಸಿಕೆ ವಿತರಿಸಲು ಸಾಧ್ಯವಾಗುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ರಾಜ್ಯದ 36.38 ಲಕ್ಷ ಜನ ಒಟ್ಟು 4,620.20 ಕೋಟಿ ರು. ಮೊತ್ತದ ಚಿಕಿತ್ಸೆ ಉಚಿತವಾಗಿ ಪಡೆದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಇಂಥದ್ದೊಂದು ಯೋಜನೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲು ಅಸಾಧ್ಯ. ಹಿಂದಿನ ಯಾವುದೇ ಸರ್ಕಾರಗಳು ಮಾಡದಷ್ಟುವೈದ್ಯರ ನೇಮಕಾತಿಯನ್ನು ನಮ್ಮ ಸರ್ಕಾರ ಮಾಡಿದೆ. ಕಳೆದ ವರ್ಷವಷ್ಟೇ 1,763 ವೈದ್ಯರು ಹಾಗೂ ವೈದ್ಯಾಧಿಕಾರಿಗಳನ್ನು ನೇರ ನೇಮಕಾತಿ ಮಾಡಲಾಗಿದೆ. ಇದರಲ್ಲಿ 715 ತಜ್ಞರು, 57 ಜನರಲ್‌ ಸರ್ಜನ್‌, 145 ಗೈನಕಾಲಜಿಸ್ಟ್‌ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ’’ ಎಂದಿದ್ದಾರೆ.

Chikkaballapur: ಮಹಾರಾಷ್ಟ್ರದವರು ಉದ್ಧಟತನ ಬಿಡಬೇಕು: ಸಚಿವ ಸುಧಾಕರ್‌

ಖಾಲಿ ಹುದ್ದೆಗಳ ಭರ್ತಿ, ಮೂಲಸೌಕರ್ಯಗಳು ಐದಾರು ಪಟ್ಟು ಹೆಚ್ಚಳ, ಸಿಬ್ಬಂದಿಗಳ ಶಿಸ್ತುಪಾಲನೆ, ಹೊಣೆಗಾರಿಕೆ ಹೆಚ್ಚಳ ಸೇರಿದಂತೆ ಪ್ರಾಥಮಿಕ, ದ್ವಿತೀಯ ಹಾಗು ತೃತೀಯ ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿ ಮಾಡಲು ಕಳೆದ ಎರಡೂವರೆ ವರ್ಷದಿಂದ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಾಗುತ್ತಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆಯನ್ನು ಉತ್ತಮಪಡಿಸಿದ್ದು, ದಿನಕ್ಕೆ 30,000 ಇದ್ದ ಸಾಮರ್ಥ್ಯವನ್ನು 60,000ಕ್ಕೆ ಏರಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

click me!