ಹಣದುಬ್ಬರ ಕಡಿಮೆಯಾಗಿಲ್ಲ, ಗಗನಕ್ಕೇರಿರುವ ಬೆಲೆಗಳನ್ನು ನಿಯಂತ್ರಿಸಲಾಗದ ಬಿಜೆಪಿ ಸರ್ಕಾರಗಳು ಜನರಿಗೆ ಶಾಪವಾಗಿ ಬದಲಾಗಿವೆ: ಸಿದ್ದರಾಮಯ್ಯ
ಬೆಂಗಳೂರು(ನ.18): ಕೇಂದ್ರವು ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಸುಳ್ಳು ಹೇಳಿ ಅದನ್ನು ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡಿದೆ. ಹಣದುಬ್ಬರ ಕಡಿಮೆಯಾಗಿಲ್ಲ, ಗಗನಕ್ಕೇರಿರುವ ಬೆಲೆಗಳನ್ನು ನಿಯಂತ್ರಿಸಲಾಗದ ಬಿಜೆಪಿ ಸರ್ಕಾರಗಳು ಜನರಿಗೆ ಶಾಪವಾಗಿ ಬದಲಾಗಿವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
‘ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ರಾಜನಿಗೆ ಬೇಕಾದಂತಹ ವರದಿಗಳನ್ನು ವಾಸ್ತವಕ್ಕೆ ವಿರುದ್ಧವಾಗಿ ಸಿದ್ಧ ಮಾಡಿಕೊಟ್ಟಂತೆ ಕಾಣುತ್ತಿದೆ. ಇದರಿಂದ ಬಿಜೆಪಿ ಎಂಬುದು ‘ದಿಲ್ಲಿಯಿಂದ ಹಳ್ಳಿವರೆಗೆ ಬೊಗಳೆ ಬಿಡುವ ಪಕ್ಷ’ ಎಂದು ಸಾಬೀತಾಗಿದೆ. ಹೀಗಾಗಿ ಜನರನ್ನು ಇದನ್ನು ‘ಸುಳ್ಳನ್ನು ಉತ್ಪಾದಿಸಿ ಮಾರುವ ಫ್ಯಾಕ್ಟರಿ’ ಎನ್ನುತ್ತಾರೆ ಎಂದು ಟೀಕಿಸಿದ್ದಾರೆ.
ಹಣದುಬ್ಬರ ತಗ್ಗಿದ್ರೂ ಸಾಲಗಾರರಿಗೆ ತಪ್ಪಿಲ್ಲ ಟೆನ್ಷನ್; ರೆಪೋ ದರ 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ನಿರೀಕ್ಷೆ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು,‘ಬಿಜೆಪಿ ಹೇಳಿರುವುದು ಸತ್ಯವಾದರೆ ದೇಶದಲ್ಲಿ ಹೆಚ್ಚಾಗಿರುವ ಬೆಲೆಗಳೆಲ್ಲ ಕಡಿಮೆಯಾಗಿದೆಯೇ? ಜನರು ಬೆಲೆಗಳು ಕಡಿಮೆಯಾಗಿವೆಯೆಂದು ಖುಷಿಯಾಗಿದ್ದಾರೆಯೇ? ಜನರ ಖರೀದಿಯ ಸಾಮರ್ಥ್ಯ ಹೆಚ್ಚಾಗಿದೆಯೇ? ದೇಶದಲ್ಲಿ ಅಗತ್ಯ ವಸ್ತುಗಳ ಆಮದು ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.