
ಬೆಂಗಳೂರು : ಐಟಿ-ಬಿಟಿ ಸೇರಿ ಉದ್ಯಮ ಸ್ಥಾಪನೆಗೆ ಪೂರಕವಾದ ನೀತಿಗಳು, ಪರವಾನಗಿ ಸರಳೀಕರಣ, ಅಗತ್ಯ ಮೂಲಸೌಕರ್ಯ, ಕೌಶಲ್ಯಯುತ ಮಾನವ ಸಂಪನ್ಮೂಲ ಒಳಗೊಂಡ ಪೂರಕ ವಾತಾವರಣದಿಂದ ಕರ್ನಾಟಕವು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ಎರಡನೇ ಹಂತದ ನಗರಗಳಲ್ಲೂ ಐಟಿ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳು ಸಮಾನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.
ಮಂಗಳವಾರ ನಗರದ ಬಿಐಇಸಿಯಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಪ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಬೆಂಗಳೂರು ವತಿಯಿಂದ ಆಯೋಜಿಸಿದ್ದ 3 ದಿನಗಳ ‘ಬೆಂಗಳೂರು ಟೆಕ್ ಸಮ್ಮಿಟ್’ 28ನೇ ಆವೃತ್ತಿ ಉದ್ಘಾಟಿಸಿ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಅಗ್ಗದ 18,999 ರು. ಬೆಲೆಯ ಎಐ ‘ಕಿಯೋ’ ಕಂಪ್ಯೂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030 ಮತ್ತು ಸ್ಟಾರ್ಟ್ಅಪ್ ನೀತಿ 2025-2030 ಸೇರಿ ಮೂರು ನೀತಿ ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ದತ್ತಾಂಶ ಚಾಲಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿಯಿಂದ, ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್‌ಗಳಿಗೆ ಜಾಗತಿಕ ತಾಣವಾಗಿಸುವ ಗುರಿ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
2034ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾನ ನೀತಿ ಸಹಕಾರಿ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ನೆರವಾಗುವ ಗುರಿ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾರತದ ಐಟಿ ರಫ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42 ಇದೆ. ಅಂದರೆ 3.2 ಲಕ್ಷ ಕೋಟಿ ರು.ಗಿಂತ ಹೆಚ್ಚು ರಫ್ತಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಶೇ.27ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ರಾಜ್ಯ 550 ಜಿಸಿಸಿ ಕೇಂದ್ರಗಳನ್ನು ಹೊಂದಿದೆ. ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಆ್ಯನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್-ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬುನಾದಿ ಬಲವಾಗಿದ್ದರೆ ತಂತ್ರಜ್ಞಾನ, ನಾವೀನ್ಯತೆ ಅಭಿವೃದ್ಧಿಯಾಗಿ ಹೂಡಿಕೆಗಳು ಹುಡುಕಿಕೊಂಡು ಬರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲು 1 ಲಕ್ಷ ಕೋಟಿ ರು. ವಿನಿಯೋಗಿಸುತ್ತಿದೆ. 2ನೇ ಏರ್‌ಪೋರ್ಟ್ ಯೋಜನೆ ಮಾಡಲಾಗುತ್ತಿದೆ. ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಎಲ್ಲಾ ರೀತಿಯಿಂದ ನೆರವು ನೀಡಲು ಸಿದ್ಧ ಎಂದು ಹೇಳಿದರು.==
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಆಧುನಿಕ ಕೈಗಾರಿಕೋದ್ಯಮಗಳ ಮಹತ್ವ ಅರಿತಿರುವ ರಾಜ್ಯ ಸರ್ಕಾರ 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ. ಕಂಪನಿಗಳಿಗೆ ಬೇಕಾಗುವ ಸಕಲ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಮಂಜುಳಾ.ಎನ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್‌ನ ಕ್ರಿಸ್ ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.
ಬೆಂಗಳೂರಿಗೆ 1 ಲಕ್ಷ ಕೋಟಿ ಹೂಡಿಕೆ
ಬುನಾದಿ ಬಲವಾಗಿದ್ದರೆ ತಂತ್ರಜ್ಞಾನ, ನಾವೀನ್ಯತೆ ಅಭಿವೃದ್ಧಿಯಾಗಿ ಹೂಡಿಕೆಗಳು ಹುಡುಕಿಕೊಂಡು ಬರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲು 1 ಲಕ್ಷ ಕೋಟಿ ರು. ವಿನಿಯೋಗಿಸುತ್ತಿದೆ. 2ನೇ ಏರ್‌ಪೋರ್ಟ್ ಯೋಜನೆ ಮಾಡಲಾಗುತ್ತಿದೆ. ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಎಲ್ಲಾ ರೀತಿಯಿಂದ ನೆರವು ನೀಡಲು ಸಿದ್ಧ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ