ನಮ್ಮಿಂದ 1 ಕಿ.ಮೀ. ದೂರದಲ್ಲೇ ಹಮಾಸ್ ಉಗ್ರರು ಹಾರಿಸಿದ ರಾಕೆಟ್‌ ಬಿತ್ತು, ಉಡುಪಿ ನರ್ಸ್‌ ಬಿಚ್ಚಿಟ್ಟ ಭಯಾನಕ ದೃಶ್ಯ

By Kannadaprabha NewsFirst Published Oct 9, 2023, 10:28 AM IST
Highlights

ನಾವಿರುವ ಕೇವಲ 1 ಕಿ.ಮೀ. ದೂರದಲ್ಲಿ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಬಿದ್ದಿದೆ. ಪುಣ್ಯವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶನಿವಾರ ರಾತ್ರಿಯಿಡೀ ರಾಕೆಟ್ ದಾಳಿ ಆಗಿದೆ. ಉಡುಪಿ ಸಮೀಪದ ಹೆರ್ಗಾ ಗ್ರಾಮದ ಪ್ರಮಿಳಾ ಪ್ರಭು ಅವರು ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.

ಸುಭಾಶ್ಚಂದ್ರ ಎಸ್‌.ವಾಗ್ಳೆ 

ಉಡುಪಿ (ಅ.9): ನಾವಿರುವ ಕೇವಲ 1 ಕಿ.ಮೀ. ದೂರದಲ್ಲಿ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಬಿದ್ದಿದೆ. ಪುಣ್ಯವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶನಿವಾರ ರಾತ್ರಿಯಿಡೀ ರಾಕೆಟ್ ದಾಳಿ ಆಗಿದೆ. ನಾವು ಸುಮಾರು ನೂರಿನ್ನೂರು ರಾಕೆಟ್ ಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದೇವೆ. ಇವತ್ತು(ಭಾನುವಾರ) ಇನ್ನೂ ಇಲ್ಲಿ ಪೂರ್ತಿ ಕತ್ತಲಾಗಿಲ್ಲ, ಕತ್ತಲಾದ ಬಳಿಕ ಏನಾಗುತ್ತೋ ಗೊತ್ತಿಲ್ಲ!’ ಇಸ್ರೇಲ್‌ನ ರಾಜಧಾನಿ ಟೆಲ್‌ಅವೀವ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ಉಡುಪಿ ಸಮೀಪದ ಹೆರ್ಗಾ ಗ್ರಾಮದ ಪ್ರಮಿಳಾ ಪ್ರಭು ಅವರು ಹಮಾಸ್ ಉಗ್ರರ ದಾಳಿ ಬಳಿಕದ ಚಿತ್ರಣವನ್ನು ವಿವರಿಸಿದ್ದು ಹೀಗೆ. ಸದ್ಯ ಟೆಲ್ ಅವೀವ್‌ನಲ್ಲಿ ಸರ್ಕಾರ ರೆಡ್ ಅಲರ್ಟ್ ಘೋಷಿಸಿದ್ದು, ಇಡೀ ನಗರವೇ ನಿರ್ಜನವಾಗಿದೆ ಎಂದವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಹಮಾಸ್‌ ಉಗ್ರರ ದಾಳಿಗೆ 1000 ಕ್ಕೂ ಹೆಚ್ಚು ಬಲಿ, 4000 ದಾಟಿದ ಗಾಯಾಳುಗಳ ಸಂಖ್ಯೆ!

ದೂರವಾಣಿ ಮೂಲಕ ಪತ್ರಿಕೆ ಜೊತೆ ಮಾತನಾಡಿದ ಅವರು, ಶನಿವಾರ ರಾತ್ರಿ ನಾವಿರುವ ಪ್ರದೇಶದಿಂದ ಕೇವಲ 1 ಕಿ.ಮೀ. ದೂರದಲ್ಲಿ ರಾಕೆಟ್ ಬಿದ್ದಿದೆ. ಇವತ್ತು ಇನ್ನೂ ಇಲ್ಲಿ ಪೂರ್ತಿ ಕತ್ತಲಾಗಿಲ್ಲ (‘ಕನ್ನಡಪ್ರಭ’ದೊಂದಿಗೆ ಅವರು ಬಾನುವಾರ ರಾತ್ರಿ 8 ಗಂಟೆಗೆ ಮಾತನಾಡುವಾಗ ಅಲ್ಲಿ 6 ಗಂಟೆಯಾಗಿತ್ತು), ಯಾವ ಹೊತ್ತಿಗೆ ರಾಕೆಟ್ ಹಾರಿ ಬರ್ತವೋ ಗೊತ್ತಿಲ್ಲ, ಎಲ್ಲಿ ಬೀಳ್ತವೋ ಎಂದು ಆತಂಕದಲ್ಲಿ ಹೇಳಿದರು. ಆದರೆ, ಪ್ರತಿ ರಾಕೆಟ್ ಬರುವಾಗಲೂ 15 ಸೆಕೆಂಡ್‌ ಮುಂಚೆ ಸೈರನ್ ಮೊಳಗುವಂತಹ ತಾಂತ್ರಿಕ ವ್ಯವಸ್ಥೆ ಇಲ್ಲಿದೆ. ಇಲ್ಲಿನ ಪ್ರತಿ ನಗರದಲ್ಲೂ ಅಲ್ಲಲ್ಲಿ ಅಂಡರ್ ಗ್ರೌಂಡ್ ಬಂಕರ್‌ಗಳಿವೆ. ಆದ್ದರಿಂದ ಸೈರನ್ ಆದ ತಕ್ಷಣ ಮನೆಯಿಂದ ಹೊರಗೆ ಇರುವ ಜನ ಬಂಕರ್ ಸೇರಿಕೊಳ್ಳುತ್ತೇವೆ, ಇದು ನಮಗೆ ಅಭ್ಯಾಸ ಆಗಿದೆ ಎಂದು ವಿವರಿಸಿದರು.

ಈ ಹಿಂದೆ ಯಾವಾಗಲೋ ಒಮ್ಮೆ ರಾಕೆಟ್ ಗಳು ಆ ಕಡೆಯಿಂದ ಬರುತ್ತಿದ್ದವು, ಸೈರನ್ ಆಗುತ್ತಿತ್ತು, ನಾವು ಬಂಕರ್ ಸೇರಿಕೊಳ್ಳುತಿದ್ದೆವು. ಆದರೆ ನಿನ್ನೆ ಪ್ರಥಮ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ರಾಕೆಟ್ ಗಳು ಬಂದಿವೆ ಮತ್ತು ಇಲ್ಲಿನವರ ಅಪಹರಣ, ಹತ್ಯೆ ಕೂಡ ನಡೆದಿದೆ. ಇನ್ನೇನಾಗಲಿದೆಯೋ ಗೊತ್ತಿಲ್ಲ ಎಂದರು.

ಹಮಾಸ್‌ ಉಗ್ರರಿಗೆ ಇರಾನ್ ನೇರ ಬೆಂಬಲ, ಇಸ್ರೇಲ್‌ಗೆ 5000 ಯೋಧರ ತಂಡ ಕಳುಹಿಸಿದ ಅಮೆರಿಕ

ಪ್ರಭು ಅವರಿಗೆ ಸಿಕ್ಕಿರುವ ಮಾಹಿತಿಯಂತೆ ಈಗಾಗಲೇ ಸುಮಾರು 600ಕ್ಕೂ ಹೆಚ್ಚು ಮಂದಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರನ್ನು ಉಗ್ರರು ಕೊಂದಿದ್ದಾರೆ. 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 1-2 ವರ್ಷದ ಮಕ್ಕಳನ್ನೂ ಅಪಹರಿಸಿದ್ದಾರೆ. ಅವರನ್ನೆಲ್ಲ ಮತ್ತೆ ಜೀವಂತ ನೋಡುವ ಅವಕಾಶ ಬಹಳ ಕಡಿಮೆಯಂತೆ. ಹಮಾಸ್ ಉಗ್ರರಿಗೆ ಇಸ್ರೇಲ್‌ನ ಯಹೂದಿಗಳೇ ಟಾರ್ಗೆಟ್. ಅವರನ್ನೇ ಅಪಹರಿಸಿದ್ದಾರೆ. ಆದ್ದರಿಂದ ಇಲ್ಲಿರುವ ಭಾರತೀಯರಿಗೆ ಅಥವಾ ಬೇರೆ ದೇಶದವರಿಗೆ ಅಂಥ ತೊಂದರೆಯಾಗಲಿಕ್ಕಿಲ್ಲ ಎಂಬ ಭರವಸೆಯಲ್ಲಿದ್ದಾರೆ ಪ್ರಮೀಳಾ. 

ಸುರಕ್ಷಿತವಾಗಿದ್ದೇವೆ: ಗಡಿ ಪ್ರದೇಶದಲ್ಲಿ ಭಾರೀ ಹಾನಿಯಾಗಿರುವ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಬರುತ್ತಿದೆ. ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನಾವು ಭಾರತೀಯ ರಾಯಭಾರಿ ಕಚೇರಿಗೆ ನಮ್ಮೆಲ್ಲಾ ಮಾಹಿತಿಗಳನ್ನು ನೀಡಿದ್ದೇವೆ. ಒಟ್ಟಿನಲ್ಲಿ ಸುರಕ್ಷಿತವಾಗಿದ್ದೇವೆ. ಭಾರತ ಸರ್ಕಾರ ಇಸ್ರೇಲ್‌ಗೆ ಪೂರ್ಣ ಬೆಂಬಲ ನೀಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಆರು ವರ್ಷಗಳಿಂದ ಟೆಲ್ ಅವೀವ್‌ನ ಆಸ್ಪತ್ರೆಯಲ್ಲಿ ಕೇರ್‌ ಟೇಕರ್‌ ಆಗಿರುವ ಪ್ರಮೀಳಾ ಅವರ ಪತಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿದ್ದಾರೆ. ಮನೆಯವರು ಸತತವಾಗಿ ಅವರ ಸಂಪರ್ಕದಲ್ಲಿದ್ದಾರೆ. ಅವರ ತಂಗಿ ಪ್ರವೀಣಾ ಕೂಡ ಇಸ್ರೇಲ್‌ನ ಜೆರುಸೆಲಂನಲ್ಲಿ ನರ್ಸ್ ಆಗಿ ದುಡಿಯುತಿದ್ದಾರೆ. ಅಲ್ಲಿಯೂ ಪರಿಸ್ಥಿತಿ ಇಸ್ರೇಲ್‌ ನಿಯಂತ್ರಣದಲ್ಲಿದೆ ಎಂದು ಪ್ರಮೀಳಾ ಹೇಳಿದ್ದಾರೆ.

click me!