
ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಇಸ್ರೇಲ್–ಇರಾನ್–ಅಮೆರಿಕಾ ನಡುವಿನ ಯುದ್ಧ ಭೀತಿ ತೀವ್ರಗೊಂಡಿರುವ ಹಿನ್ನೆಲೆ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ವಿಮಾನ ಸಂಚಾರ ಸ್ಥಗಿತ, ವಿಮಾನ ನಿಲ್ದಾಣಗಳ ಬಂದ್ ಹಾಗೂ ಭದ್ರತಾ ನಿರ್ಬಂಧಗಳ ಕಾರಣದಿಂದ ಪ್ರವಾಸಿಗರು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲಾಡಳಿತಗಳು ತಕ್ಷಣ ಸ್ಪಂದಿಸಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿ, ಸಿಲುಕಿರುವವರ ಸಂಬಂಧಿಕರು ಸಂಪರ್ಕಿಸುವಂತೆ ಮನವಿ ಮಾಡಿವೆ.
ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ, ವಿಶೇಷವಾಗಿ ದುಬೈನಲ್ಲಿ ಸಿಲುಕಿರುವ ಕಲಬುರಗಿ ಜಿಲ್ಲೆಯ ನಿವಾಸಿಗಳ ನೆರವಿಗಾಗಿ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ.
ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ: 08472-278677
ಪೊಲೀಸ್ ಕಂಟ್ರೋಲ್ ರೂಂ: 9480805500 / 08472-263604 / 08472-228112
ಸಂತ್ರಸ್ತರ ಕುಟುಂಬಸ್ಥರು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಸರ್ಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಕೋರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲಾಡಳಿತ ಕೂಡ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದೆ. ತುಮಕೂರು ಜಿಲ್ಲೆಯ ಯಾವುದೇ ನಿವಾಸಿಗಳು ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದರೆ, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇಸ್ರೇಲ್–ಅಮೆರಿಕಾ–ಇರಾನ್ ನಡುವಿನ ಭೀಕರ ಸಂಘರ್ಷದ ನಡುವೆ, ದುಬೈನಲ್ಲಿ ಎಂಎಲ್‌ಸಿ ಭೋಜೇಗೌಡ ಸಿಲುಕಿರುವುದು ತಿಳಿದುಬಂದಿದೆ. ಅವರ ಆರೋಗ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪರಮೇಶ್ವರ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು ದೂರವಾಣಿ ಮೂಲಕ ವಿಚಾರಿಸಿದರು. ಕುಮಾರಸ್ವಾಮಿ ಅವರು ದುಬೈನಲ್ಲಿ ಭೋಜೇಗೌಡರಿಗಾಗಿ ತಾಜ್ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿರುವುದರಿಂದ, ದುಬೈ ಪ್ರವಾಸಕ್ಕೆ ತೆರಳಿದ್ದ 50ಕ್ಕೂ ಹೆಚ್ಚು ಕನ್ನಡಿಗ ವಯೋವೃದ್ಧರು ಸಿಲುಕಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 15 ವಯೋವೃದ್ಧರು ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ 35ಕ್ಕೂ ಹೆಚ್ಚು ಕನ್ನಡಿಗರು ಫೆಬ್ರವರಿ 23ರಂದು ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಇವರಿಗೆ, ಫೆಬ್ರವರಿ 28ರ ರಾತ್ರಿ ವಾಪಸ್ ವಿಮಾನ ಬುಕ್ ಆಗಿದ್ದರೂ, ವಿಮಾನ ಸಂಚಾರ ಸ್ಥಗಿತದಿಂದ ವಾಪಸ್ಸು ಸಾಧ್ಯವಾಗಿಲ್ಲ. ಬಹುತೇಕರು 60 ವರ್ಷ ಮೇಲ್ಪಟ್ಟವರಾಗಿದ್ದು, ಬಿಪಿ ಹಾಗೂ ಶುಗರ್ ಸಮಸ್ಯೆ ಹೊಂದಿದ್ದಾರೆ. 12 ಗಂಟೆಗಳ ಕಾಲ ಲಾಡ್ಜ್ ಬುಕ್ ಮಾಡಲು ತಲಾ 10 ಸಾವಿರ ರೂ. ವೆಚ್ಚ ಮಾಡಬೇಕಾದ ಸ್ಥಿತಿ ಎದುರಾಗಿದೆ. ಸಹಾಯಕ್ಕಾಗಿ ವಯೋವೃದ್ಧರು ಮೊಬೈಲ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, “ಯಾರೂ ಆತಂಕಪಡಬೇಡಿ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಅಗತ್ಯ ಸಹಾಯ ಒದಗಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಯಾಳ್ಪಿ ಪಂಪನಗೌಡ ಕುಟುಂಬದ 15 ಸದಸ್ಯರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಫೆಬ್ರವರಿ 24ರಂದು ಪ್ರವಾಸಕ್ಕೆ ತೆರಳಿದ್ದ ಕುಟುಂಬ, ಫೆಬ್ರವರಿ 28ರಂದು ವಾಪಸ್ ಬರಬೇಕಿತ್ತು. ಆದರೆ ಏರ್‌ಪೋರ್ಟ್ ಬಂದ್ ಹಿನ್ನೆಲೆ ವಾಪಸ್ಸಾಗಲು ಸಾಧ್ಯವಾಗಿಲ್ಲ. ಕುಟುಂಬಸ್ಥರ ಪ್ರಕಾರ, ಸದ್ಯ ಎಲ್ಲರೂ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಸುರಕ್ಷಿತರಾಗಿದ್ದಾರೆ. ದುಬೈನಲ್ಲಿರುವ ಶಾಸಕ ಭರತ್ ರೆಡ್ಡಿ ಅವರ ಆಪ್ತರು ಸಂಪರ್ಕದಲ್ಲಿದ್ದು, ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಗಿರೀಶ್ ಕೆರೂರು ದುಬೈ ಮಾರ್ಗವಾಗಿ ಪ್ಯಾರಿಸ್‌ಗೆ ತೆರಳುವಾಗ ವಿಮಾನ ರದ್ದತಿಯಿಂದ ಅಬುಧಾಬಿಯಲ್ಲಿ ಸಿಲುಕಿದ್ದಾರೆ. ಅವರು ಬೆಂಗಳೂರಿನಿಂದ ಫೆಬ್ರವರಿ 28ರ ಬೆಳಗ್ಗೆ ಪ್ರಯಾಣ ಆರಂಭಿಸಿ, ದುಬೈ ತಲುಪಿದ ಬಳಿಕ ಪ್ಯಾರಿಸ್‌ಗೆ ಹಾರಾಟ ರದ್ದಾಗಿದೆ. ಹೋಟೆಲ್ ವ್ಯವಸ್ಥೆ ಮಾಡಲಾಗಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ. “ಪ್ಯಾರಿಸ್ ಟ್ರಿಪ್ ಕ್ಯಾನ್ಸಲ್ ಮಾಡಿ ಕನಿಷ್ಠ ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದೇವೆ” ಎಂದು ಗಿರೀಶ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 9 ಮಂದಿ ಪ್ರವಾಸಿಗರು ದುಬೈನಲ್ಲಿ ಹೋಟೆಲ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಪರಿಸ್ಥಿತಿ ಕೊರೋನಾ ಲಾಕ್‌ಡೌನ್‌ನಂತೆ ಕಾಣಿಸುತ್ತಿದ್ದು, ರಸ್ತೆಗಳು ಖಾಲಿಯಾಗಿವೆ. ಇದೇ ವೇಳೆ, ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಹರೈನ್ ರಾಜಧಾನಿ ಮನಾಮದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಐವರು ಹಾಗೂ ಮೈಸೂರಿನ ಒಬ್ಬರು ಸೇರಿ ಆರು ಕನ್ನಡಿಗರು ಸಿಲುಕಿದ್ದಾರೆ. ತಮ್ಮ ಕಟ್ಟಡದ ಸಮೀಪವೇ ಬಾಂಬ್ ಸಿಡಿಯುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದು, ಕುಟುಂಬಸ್ಥರು ರಕ್ಷಣೆಗೆ ಸರ್ಕಾರದ ಮೊರೆ ಹೋಗಿದ್ದಾರೆ.
ಅಮೆರಿಕಾ–ಇರಾನ್ ಯುದ್ಧ ಹಿನ್ನೆಲೆ, ದುಬೈನಲ್ಲಿ 75ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಎಲ್ಲಾ ವಿಮಾನ ಹಾರಾಟ ಬಂದ್ ಆಗಿರುವುದರಿಂದ ಪರದಾಟ ಮುಂದುವರಿದಿದೆ. ಸಿಂಧನೂರಿನ ಸಹನಾ ಆಸ್ಪತ್ರೆಯ ವೈದ್ಯರೊಬ್ಬರು ದುಬೈನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಸರ್ಕಾರದ ಸೂಚನೆಯಂತೆ ಹೊರಗೆ ತಿರುಗಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯ ಮತ್ತು ಜಿಲ್ಲಾಡಳಿತಗಳು ಸಿಲುಕಿರುವವರ ನೆರವಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾರೂ ಆತಂಕಪಡಬಾರದು, ಅಧಿಕೃತ ಸಹಾಯವಾಣಿ ಸಂಖ್ಯೆಗಳ ಮೂಲಕ ಮಾತ್ರ ಮಾಹಿತಿ ನೀಡಬೇಕು ಹಾಗೂ ನಕಲಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ