Karnataka Politics: ಜೈಲಿನಲ್ಲಿ ಉಗ್ರನ ಸಾವು: ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಗೃಹಸಚಿವ ಪರಮೇಶ್ವರ್

Published : Feb 08, 2026, 11:53 AM IST
Dr G Parameshwara

ಸಾರಾಂಶ

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನಿಗಮ-ಮಂಡಳಿ ನೇಮಕಾತಿ, ಗೃಹಲಕ್ಷ್ಮಿ ಯೋಜನೆ, ಮತ್ತು ಬಜೆಟ್ ನಿರೀಕ್ಷೆಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, ದ್ವೇಷ ಭಾಷಣ ತಡೆಗೆ ಎಐ ಸಾಫ್ಟ್‌ವೇರ್ ಖರೀದಿ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಬೆಂಗಳೂರು (ಫೆ.8): ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳು ಹಾಗೂ ಗೃಹ ಇಲಾಖೆಯ ಮಹತ್ವದ ನಿರ್ಧಾರಗಳ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಇಂದು ಮಾಧ್ಯಮಗಳೊಂದಿಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗಳ ಸಂಪೂರ್ಣ ವಿವರ ಇಲ್ಲಿದೆ.

ನಿಗಮ-ಮಂಡಳಿ ಅಧ್ಯಕ್ಷರ ಸ್ಥಾನಮಾನ

54 ಮಂದಿ ನಿಗಮ-ಮಂಡಳಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹಿಂದೆ ಮುಖ್ಯಮಂತ್ರಿಗಳು ಬೋರ್ಡ್ ಅಧ್ಯಕ್ಷರಿಗೆ ಯಾವ ರೀತಿ ಸ್ಥಾನಮಾನ ನೀಡುತ್ತಿದ್ದರೋ, ಅದೇ ಮಾದರಿಯನ್ನು ಈಗಲೂ ಅನುಸರಿಸಲಾಗಿದೆ. ಇದರಲ್ಲಿ ಹೊಸದೇನೂ ಇಲ್ಲ, ಹಿಂದಿನ ಪದ್ಧತಿಯಂತೆಯೇ ಸ್ಥಾನಮಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಲೈಫ್ ಸರ್ಟಿಫಿಕೇಟ್: ಸಚಿವರ ಸ್ಪಷ್ಟನೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಲೈಫ್ ಸರ್ಟಿಫಿಕೇಟ್ ಕಡ್ಡಾಯ ಮಾಡುವ ವಿಚಾರದ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಇಲಾಖೆಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಚಿವರು ಇದ್ದಾರೆ. ಅಲ್ಲದೆ, ಈ ವಿಷಯದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ (ಕ್ಯಾಬಿನೆಟ್) ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಜೈಲಿನಲ್ಲಿ ಉಗ್ರನ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆದೇಶ

ಜೈಲಿನಲ್ಲಿ ಭಯೋತ್ಪಾದಕ ಚಟುವಟಿಕೆಯಡಿ ಬಂಧಿತನಾಗಿದ್ದ ಕೈದಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಘಟನೆಯ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ಸಾವು ಯಾವ ಕಾರಣಕ್ಕೆ ಸಂಭವಿಸಿದೆ ಎಂಬ ಬಗ್ಗೆ ಅಧಿಕಾರಿಗಳು ವರದಿ ನೀಡಲಿದ್ದಾರೆ. ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಗೃಹ ಇಲಾಖೆಯ ನಿರೀಕ್ಷೆ, ಆಧುನೀಕರಣಕ್ಕೆ ಒತ್ತು

ಬಜೆಟ್ ಕುರಿತು ಮಾತನಾಡುತ್ತಾ, ಹೊಸ ನೇಮಕಾತಿಗಳಿಗೆ ಅನುಮತಿ ನೀಡುವಂತೆ ಹಾಗೂ ಸಂಚಾರಕ್ಕೆ ಹೊಸ ವಾಹನಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇವೆ. 15 ವರ್ಷ ಹಳೆಯದಾದ ವಾಹನಗಳನ್ನು ಬಳಸಬಾರದು ಎಂಬ ಕೇಂದ್ರದ ನಿಯಮದಂತೆ ಸಾವಿರಾರು ವಾಹನಗಳನ್ನು ಕೈಬಿಟ್ಟಿದ್ದೇವೆ. ಅವುಗಳ ಬದಲಿಗೆ ಹೊಸ ವಾಹನ ಖರೀದಿಗೆ ಬೇಡಿಕೆ ಇಟ್ಟಿದ್ದೇವೆ. 'ಪೊಲೀಸ್ ಗೃಹ' ಯೋಜನೆಯಡಿ ಪೊಲೀಸರ ಮನೆಗಳ ನಿರ್ಮಾಣ ಮುಂದುವರಿಸಲು ಸಿಎಂ ಬೆಂಬಲ ನೀಡಿದ್ದಾರೆ. ಸೈಬರ್ ಕ್ರೈಮ್ ಮತ್ತು ಡ್ರಗ್ಸ್ ತಡೆಗೆ ಹೆಚ್ಚಿನ ಒತ್ತು ನೀಡಲು ಅನುದಾನ ಕೇಳಿದ್ದೇವೆ" ಎಂದರು.

ಮೆಟ್ರೋ ದರ ಜಟಾಪಟಿ: ಕೇಂದ್ರ-ರಾಜ್ಯ ಜಂಟಿ ನಿರ್ಧಾರ

ಮೆಟ್ರೋ ಟಿಕೆಟ್ ದರ ಏರಿಕೆ ಗೊಂದಲದ ಬಗ್ಗೆ ಮಾತನಾಡಿದ ಪರಮೇಶ್ವರ್, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ತೆಗೆದುಕೊಳ್ಳುವ ನಿರ್ಧಾರ. ಸದ್ಯಕ್ಕೆ ಕೇಂದ್ರ ಸರ್ಕಾರ ದರ ಏರಿಕೆಗೆ ತಡೆ ನೀಡಿದೆ. ದರ ನಿಗದಿ ಸಮಿತಿಗೆ ಸ್ವಾಯತ್ತತೆ ಇರುವುದರಿಂದ ರಾಜ್ಯದ ನಿಯಂತ್ರಣ ಕಷ್ಟ. ಕೇಂದ್ರದ ನಿರ್ದೇಶನಗಳೂ ಇಲ್ಲಿ ಮುಖ್ಯವಾಗುತ್ತವೆ. ಮುಂದಿನ ದಿನಗಳಲ್ಲಿ ಉಭಯ ಸರ್ಕಾರಗಳು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿವೆ ಎಂದು ವಿವರಿಸಿದರು.

ದ್ವೇಷ ಭಾಷಣ ತಡೆಗೆ 67 ಕೋಟಿ ರೂ. ಮೊತ್ತದ ಎಐ ಸಾಫ್ಟ್‌ವೇರ್

67 ಕೋಟಿ ರೂ. ವೆಚ್ಚದಲ್ಲಿ ಎಐ ಸಾಫ್ಟ್‌ವೇರ್ ಖರೀದಿ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡ ಸಚಿವರು, 'ಸೈಬರ್ ಕ್ರೈಮ್ ಹಾಗೂ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದೆ. ದ್ವೇಷದ ಸಂದೇಶಗಳಿಂದ ಸಾವುಗಳು ಸಂಭವಿಸುತ್ತಿವೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ಸಿಗುತ್ತಿದೆ. ಇದನ್ನು ತಡೆಯಲು ಆಧುನಿಕ ತಂತ್ರಜ್ಞಾನ ಅಗತ್ಯ. ಬೇರೆ ರಾಜ್ಯಗಳಲ್ಲಿ 200-300 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಮೊಹಾಂತಿಯವರು 1000 ಕೋಟಿ ರೂ. ಪ್ರಪೋಸಲ್ ನೀಡಿದ್ದಾರೆ. ನಿಯಂತ್ರಣ ಮಾಡಬೇಕೆಂದರೆ ಹಣ ಖರ್ಚು ಮಾಡಲೇಬೇಕು ಎಂದರು.

ಸಿಎಂ ಬದಲಾವಣೆ ಚರ್ಚೆ: ಹೈಕಮಾಂಡ್ ನಿರ್ಧಾರವೇ ಅಂತಿಮ

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ. ಅಧಿಕಾರ ಒಪ್ಪಂದದ ಬಗ್ಗೆ ಹೈಕಮಾಂಡ್ ಏನೂ ಹೇಳಿಲ್ಲ. ಸಿಎಂ-ಡಿಸಿಎಂ ಹಾಗೂ ಹೈಕಮಾಂಡ್ ನಡುವೆ ಏನು ನಡೆದಿದೆ ಎಂಬುದು ಅವರಿಗೆ ಮಾತ್ರ ಗೊತ್ತು. ಡಿ ಕೆ ಶಿವಕುಮಾರ್ ಅವರು ಹೇಳಿರುವುದು ಅವರ ಅಭಿಪ್ರಾಯವಿರಬಹುದು. ಹೈಕಮಾಂಡ್ ಸುಮ್ಮನಿದೆ ಎಂದರೆ ಅದರ ಅರ್ಥ ಅವರಿಗೆ ಪರಿಸ್ಥಿತಿ ಮ್ಯಾನೇಜ್ ಮಾಡುವುದು ಗೊತ್ತಿದೆ ಎಂದರ್ಥ. ಅಂತಿಮವಾಗಿ ಹೈಕಮಾಂಡ್ ಕರೆ ಬಂದರೆ ಮಾತ್ರ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಧಾನಸಭೆ ಗಲಾಟೆ: ನಾನು ಹಾಗೆ ಮಾತನಾಡಲು ಬಿಜೆಪಿ ಶಾಸಕರ ಪ್ರಚೋದನೆ ಕಾರಣ ಎಂದ ಶಿವಲಿಂಗೇಗೌಡ
ರಾಜ್ಯ ಸರ್ಕಾರದಿಂದ ಜನರಿಗೆ ಸ್ವಾಭಿಮಾನಿ ಬದುಕು: ಸಚಿವ ಪ್ರಿಯಾಂಕ್ ಖರ್ಗೆ