ವಿಧಾನಸಭೆ ಗಲಾಟೆ: ನಾನು ಹಾಗೆ ಮಾತನಾಡಲು ಬಿಜೆಪಿ ಶಾಸಕರ ಪ್ರಚೋದನೆ ಕಾರಣ ಎಂದ ಶಿವಲಿಂಗೇಗೌಡ

Published : Feb 08, 2026, 10:38 AM IST
Assembly Clash MLA Shivalinge Gowda Blames BJP MLAs Provocation for His Harsh Remarks

ಸಾರಾಂಶ

ವಿಧಾನಸಭೆಯ ಗಲಾಟೆಗೆ ಬಿಜೆಪಿ ಶಾಸಕರ ಪ್ರಚೋದನೆಯೇ ಕಾರಣ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದ್ದಾರೆ. ಮಾಧ್ಯಮಗಳು ಘಟನೆಯನ್ನು ತಿರುಚಿವೆ ಎಂದು ಹೇಳಿದ ಅವರು, ತಮ್ಮ ಬಳಿಯಿದ್ದ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು.

ಅರಸೀಕೆರೆ (ಫೆ.8): ವಿಧಾನಸಭೆಯಲ್ಲಿ ನಡೆದ ಇತ್ತೀಚಿನ ಗಲಾಟೆಗೆ ಬಿಜೆಪಿ ಶಾಸಕರ ಅವ್ಯಾಚ್ಯ ಭಾಷೆ ಮತ್ತು ನಿರಂತರ ಪ್ರಚೋದನೆಯೇ ಮೂಲ ಕಾರಣವಾಗಿದ್ದು, ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ನೈಜ ಅಂಶಗಳನ್ನು ಮರೆಮಾಚಿ ತಿರುಚಿದ ಚಿತ್ರಣ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು. ನಗರದ ಹೊರವಲಯದ ಅವರ ಫಾರಂ ಹೌಸ್ ಹಾಗೂ ನಂತರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಘಟನಾವಳಿಗಳ ಕುರಿತು ತಮ್ಮ ಬಳಿ ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದರು.

ಸದನದಲ್ಲಿ ಭಾಷಣ ಮಾಡುವ ವೇಳೆ ವಿರೋಧ ಪಕ್ಷದ ಶಾಸಕರು ಪದೇ ಪದೇ ಅಡ್ಡಿಪಡಿಸಿ, ಅವ್ಯಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸುವುದರ ಮೂಲಕ ನನ್ನನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದರು. ಆ ಸಂದರ್ಭದಲ್ಲಿನ ವಾಸ್ತವ ಸ್ಥಿತಿ ಸಂಪೂರ್ಣವಾಗಿ ದಾಖಲಾಗದೇ, ನಾನು ಮಾತನಾಡಿದ ಭಾಗ ಮಾತ್ರ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂಬುದು ನೋವುಂಟು ಮಾಡಿದೆ ಎಂದರು. ವಿರೋಧ ಪಕ್ಷದ ಶಾಸಕರಾದ ವೇದವ್ಯಾಸ ಕಾಮತ್, ಶರಣು ಸಲಗಾರ್‌ ಹಾಗೂ ಸುರೇಶ್ ಗೌಡ ನೇತೃತ್ವದ ಗುಂಪು ಪ್ರತಿಬಾರಿ ನಾನು ಮಾತನಾಡುವಾಗ ತೀವ್ರ ಕಿರುಕುಳ ನೀಡುತ್ತಿತ್ತು. ಸದನದ ಕಲಾಪ ಮುಗಿದ ಬಳಿಕ ‘ಯಾಕೆ ಹೀಗೆ ವರ್ತಿಸುತ್ತೀರಿ’ ಎಂದು ಪ್ರಶ್ನಿಸಿದಾಗ, ‘ನಾವು ಆರ್‌ಎಸ್‌ಎಸ್‌ನವರು’ ಎಂಬ ಉತ್ತರ ದೊರಕಿತು. ಈ ಹಿನ್ನೆಲೆಯಲ್ಲೇ ನಾನು ಅವರನ್ನು ಆರ್‌ಎಸ್‌ಎಸ್ ಎಂದು ಉಲ್ಲೇಖಿಸಿದ್ದೇ ಹೊರತು, ಬೇರೆ ದುರುದ್ದೇಶ ನನ್ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ಅಬಕಾರಿ ಸಚಿವರ ವಿರುದ್ಧ ಪ್ರತಿಭಟನೆ ಮಾಡುವುದು ವಿರೋಧ ಪಕ್ಷದ ಹಕ್ಕು. ಆದರೆ ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಬೇಕೆಂದು ಸರ್ಕಾರದ ಭಾಗವಾಗಿ ಪ್ರಶ್ನಿಸುವುದು ತಪ್ಪೇ? ಆ ಪ್ರಕರಣ ಕೈಬಿಟ್ಟ ಬಳಿಕ ನನ್ನನ್ನೇ ಗುರಿಯಾಗಿಸಿಕೊಂಡಿರುವುದು ಏಕೆ ಎಂಬ ಪ್ರಶ್ನೆ ನನಗೆ ಇನ್ನೂ ಕಾಡುತ್ತಿದೆ ಎಂದು ಹೇಳಿದರು.

ಸದನದ ದೃಶ್ಯಾವಳಿಗಳನ್ನು ಸರ್ಕಾರವೇ ತನ್ನ ಚೌಕಟ್ಟಿನಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಅನೇಕ ನೈಜ ದೃಶ್ಯಗಳು ಜನರಿಗೆ ತಲುಪುತ್ತಿಲ್ಲ. ಖಾಸಗಿ ದೃಶ್ಯ ಮಾಧ್ಯಮಗಳಿಗೆ ಸಹ ಸದನದೊಳಗೆ ದೃಶ್ಯ ಸೆರೆಹಿಡಿಯಲು ಅವಕಾಶ ನೀಡಿದರೆ ಮಾತ್ರ ಸತ್ಯಾಂಶ ಬಹಿರಂಗವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಮಾರ್ಪಾಡು ಮಾಡಬೇಕು ಎಂದು ಅವರು ಒತ್ತಾಯಿಸಿದರು.ನನ್ನ ವಿರುದ್ಧ ಯಾವುದೇ ದಾಖಲೆಗಳಿದ್ದರೆ, ನಿಯಮಾವಳಿ ಪ್ರಕಾರ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಆದರೆ ಸಾಕ್ಷ್ಯವಿಲ್ಲದೆ ನನ್ನ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಅನ್ಯಾಯ. ನಾನು ಹಳ್ಳಿಯಿಂದ ಬಂದವನು, ನನ್ನ ಭಾಷೆ ಗ್ರಾಮೀಣ ಶೈಲಿಯದ್ದೇ. ಅದರಲ್ಲಿ ಸ್ವಾರ್ಥವಿಲ್ಲ, ದುರುದ್ದೇಶವೂ ಇಲ್ಲ. ನನ್ನ ಮಾತುಗಳನ್ನು ಆ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಅವರ ಪುತ್ರಿಯ ಕುರಿತು ಮಾತನಾಡಿದ್ದಕ್ಕೆ ನೇರವಾಗಿ ಕ್ಷಮೆ ಕೇಳುತ್ತೇನೆ. ಅದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ. ಆದರೆ ಈ ಪ್ರಕರಣದಲ್ಲಿ ನನಗೂ ನ್ಯಾಯ ಬೇಕು. ನನ್ನ ವಿರುದ್ಧ ನಡೆದ ಪ್ರಚೋದನೆಗಳು ಜನತಾ ನ್ಯಾಯಾಲಯದ ಮುಂದೆ ಬರುವಂತಾಗಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯ ಸರ್ಕಾರದಿಂದ ಜನರಿಗೆ ಸ್ವಾಭಿಮಾನಿ ಬದುಕು: ಸಚಿವ ಪ್ರಿಯಾಂಕ್ ಖರ್ಗೆ
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಗ್ಯಾರಂಟಿ ಯೋಜನೆ ಸದಸ್ಯನಿಂದಲೇ ಆರೋಪ!