
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.30): ಯುಪಿಎಸ್ಸಿ ಮಾಡಬೇಕೆಂಬ ಕನಸು ಇರಲಿಲ್ಲ. ಆ ಬಗ್ಗೆ ಮೊದಲಿನಿಂದಲೂ ಪ್ರಯತ್ನವನ್ನೂ ಮಾಡಿರಲಿಲ್ಲ. ಎಲ್ಲಿಯೂ ತರಬೇತಿಯನ್ನೂ ಪಡೆದಿಲ್ಲ. ಹಾಗೆ ಒಂದು ಸಲ ನೋಡೋಣ ಎಂದುಕೊಂಡು ಅಭ್ಯಾಸ ಶುರು ಮಾಡಿದ ಇಶಿಕಾ ಸಿಂಗ್‌ಗೆ ಯುಪಿಎಸ್ಸಿ ಬಗ್ಗೆ ಆಸಕ್ತಿ ಬೆಳೆದಿದೆ. ಆನ್‌ಲೈನ್ ಕೋಚಿಂಗ್ ಪಡೆದು ಮೊದಲ ಪ್ರಯತ್ನದಲ್ಲೇ ಪ್ರಿಲಿಮ್ಸ್, ಮೇನ್ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿ ವೈವಾದಲ್ಲೂ ಉತ್ತಮ ಅಂಕ ಪಡೆದಿದ್ದಾರೆ. ದೇಶಕ್ಕೆ 206ನೇ ರ್‍ಯಾಂಕ್ ಇವರದು.
ಕುಟುಂಬ:
ಇವರ ತಂದೆ ಆರ್.ಕೆ. ಸಿಂಗ್, ಇಲ್ಲಿನ ಇಂಡಸ್ಟ್ರಿಯಲ್ ಎಸ್ಟೆಟ್‌ನಲ್ಲಿ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ಜೆಸಿಬಿ, ಟಾಟಾ ಹಿಟಾಚಿಯ ಸರ್ವೀಸ್ಸಿಂಗ್ ಇವರ ವೃತ್ತಿ. ತಾಯಿ ಹಿಂದಿ ಪ್ರಾಧ್ಯಾಪಕಿ. ಇವರ ಸಹೋದರ ಬೆಳಗಾವಿಯಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಐಐಟಿಯನ್ನರ ಹಳ್ಳಿ ಎಂದೇ ಹೆಸರಾದ ಈ ಗ್ರಾಮದ 40 ವಿದ್ಯಾರ್ಥಿಗಳು ಜೆಇಇ ಪಾಸ್!
ವಿದ್ಯಾಭ್ಯಾಸ:
ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯ ನಂ. 1ರಲ್ಲಿ 2015ರಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿರುವ ಇಶಿಕಾ ಸಿಂಗ್, ಇಲ್ಲಿನ ಗ್ಲೋಬಲ್ ಪಿಯು ಕಾಲೇಜ್‌ನಲ್ಲಿ ಪಿಯುಸಿ ಸೈನ್ಸ್, ಕೆಎಂಸಿಆರ್‌ಐನಲ್ಲಿ ಎಂಬಿಬಿಎಸ್ ಪಾಸಾಗಿದ್ದಾರೆ. 2023ರಲ್ಲಿ ಎಂಬಿಬಿಎಸ್ ಮುಗಿಯುತ್ತಿದ್ದಂತೆ, ಇವರ ತಂದೆಯ ಚಿಕ್ಕಪ್ಪ ಅಂದರೆ ಅಜ್ಜ, ಯುಪಿಎಸ್ಸಿ ಪರೀಕ್ಷೆ ಕಟ್ಟುವಂತೆ ಪ್ರೇರೆಪಿಸಿದ್ದಾರೆ. ಇದರಿಂದ ಹಾಗೆ ಒಂದು ಸಲ ನೋಡೋಣ ಎಂದುಕೊಂಡು ಪರೀಕ್ಷೆ ಕಟ್ಟಿದ್ದಾರೆ. ಜತೆಗೆ ಪರೀಕ್ಷೆ ತಯಾರಿಯನ್ನೂ ಶುರು ಮಾಡಿದ್ದಾರೆ.
ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೆ ಅಧ್ಯಯನದಲ್ಲಿ ತೊಡಗುತ್ತಿದ್ದರಂತೆ. ಹಾಗಂತ ನಿರಂತರ ಅಧ್ಯಯನವನ್ನೇನೂ ಮಾಡುತ್ತಿರಲಿಲ್ಲ. ಒಂದೆರಡು ಗಂಟೆ ಆನ್‌ಲೈನ್ ಕೋಚಿಂಗ್ ತೆಗೆದುಕೊಂಡು ಸ್ವಲ್ಪ ರೆಸ್ಟ್ ಮಾಡಿ ಮತ್ತೆ ಅಧ್ಯಯನ ಮಾಡುತ್ತಿದ್ದೆ. ಹೀಗೆ ಆಗಾಗ ವಿಶ್ರಾಂತಿ ಪಡೆಯುತ್ತಲೇ ಅಧ್ಯಯನ ಮಾಡುತ್ತಿದ್ದೆ. ಆದರೆ, ಕನಿಷ್ಠವೆಂದರೂ 8-10 ಗಂಟೆ ಅಧ್ಯಯನ ಮಾಡುತ್ತಿದ್ದೆ ಎಂದರು.
ಮಗಳ ಸಾಧನೆ ನೋಡಿ ತಂದೆ- ತಾಯಿ ಸೇರಿದಂತೆ ಕುಟುಂಬಸ್ಥರಿಗೂ ಸಂತಸವಾಗಿದೆ. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಏನೇ ಆಗಲಿ ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್‌ನಿಂದ ಯಶಸ್ಸು ಸಾಧ್ಯ ಎಂಬುದನ್ನು ತಮ್ಮ ಮೊದಲ ಪ್ರಯತ್ನದಲ್ಲಿ ತೋರಿಸುವ ಮೂಲಕ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸುತ್ತಿರುವ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: UPSC ಕೋಚಿಂಗ್ ಇಲ್ಲದೆ ಐಪಿಎಸ್ ಅಧಿಕಾರಿಯಾದ ಡ್ಯಾಶಿಂಗ್ ಲೇಡಿ ಅಂಶಿಕಾ ವರ್ಮಾ!
ಯುಪಿಎಸ್ಸಿ ಮಾಡಬೇಕು ಎಂದು ಕನಸು ಕಂಡವಳಲ್ಲ. ಅದು ಗೊತ್ತೂ ಇರಲಿಲ್ಲ. ನಮ್ಮ ಅಜ್ಜ ಎಂಬಿಬಿಎಸ್ ಮುಗಿದ ಮೇಲೆ ಸ್ವಲ್ಪ ಮಾಹಿತಿ ನೀಡಿದ್ದರು. ನೋಡೋಣ ಎಂದುಕೊಂಡು ಪರೀಕ್ಷೆ ಕಟ್ಟಿ ತಯಾರಿ ಆರಂಭಿಸಿದೆ. ಆಸಕ್ತಿ ಬಂತು, ಗಂಭೀರವಾಗಿ ಅಧ್ಯಯನ ನಡೆಸಿ ಪಾಸಾಗಿದ್ದೇನೆ ಅಷ್ಟೇ. ಆನ್‌ಲೈನ್‌ನಲ್ಲೇ ಕೋಚಿಂಗ್ ಪಡೆದಿದ್ದೇನೆ.
- ಇಶಿಕಾ ಸಿಂಗ್,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ