
ಬೆಂಗಳೂರು/ಚಿಕ್ಕಮಗಳೂರು : ಕಾಲ್ತುಳಿತ ಆಗಿರುವುದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಅಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಸಿದ್ದರಾಮಯ್ಯ ಅವರೇ ನೀವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧದ ಮೆಟ್ಟಿಲುಗಳಿಗೆ ಮಾತ್ರ ಮುಖ್ಯಮಂತ್ರಿಯೋ ಎಂದು ಕೇಂದ್ರದ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ದುರಂತದ ಹೊಣೆಯನ್ನು ಪೊಲೀಸರ ಮೇಲಷ್ಟೇ ಎತ್ತಿಹಾಕಿ ''ಕೈ'' ತೊಳೆದುಕೊಳ್ಳುವುದು ಎಷ್ಟು ಸರಿ? ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ? ‘ಸಿದ್ದರಾಮಯ್ಯ ಅವರೇ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೋ? ದಯವಿಟ್ಟು ಹೇಳುವಿರಾ?’ ಎಂದು ಕಾಲೆಳೆದಿದ್ದಾರೆ.
ವಿಧಾನಸೌಧದ ಮೆಟ್ಟಿಲಿಗೆ ಮಾತ್ರ:
ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಮುಖ್ಯಮಂತ್ರಿ ಎಂದು ನಾನು ತಿಳಿದಿದ್ದೆ. ಆದರೆ ಸಿದ್ದರಾಮಯ್ಯ ಅವರು ತಾನು ವಿಧಾನಸೌಧದ ಮೆಟ್ಟಿಲಿಗೆ ಮಾತ್ರ ಮುಖ್ಯಮಂತ್ರಿ ಎಂದು ಭಾವಿಸಿದ್ದಾರೆ ಎಂದು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ನನ್ನ ಜವಾಬ್ದಾರಿ ಮೇರೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ರಾಜ್ಯದ ಬೇರೆ ಕಡೆ ಜನ ಸಾವನ್ನಪ್ಪಿದರೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ಗೆ ಜವಾಬ್ದಾರಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಎರಡು ಕಡೆ ಆಯೋಜಿಸಿದ ಕಾರಣ ಪೊಲೀಸರು ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸುರಕ್ಷತೆ ಬಗ್ಗೆ ಪೊಲೀಸರು ಗಮನಹರಿಸಿದರು. ಇದೆ ವೇಳೆ ಜನಸಾಮಾನ್ಯರು ಸಾವನ್ನಪ್ಪಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ