ಪೊಲೀಸರು, ಕ್ರಿಕೆಟ್‌ ಸಂಸ್ಥೆ, ರಾಜಕೀಯ ಕಾರ್‍ಯದರ್ಶಿ ಮೇಲಿನ ಕ್ರಮಕ್ಕೆ ಕಾರಣ ಏನು?

Published : Jun 10, 2025, 04:16 AM IST
RCB victory stampede

ಸಾರಾಂಶ

ಆರ್‌ಸಿಬಿ ವಿಜಯೋತ್ಸವ ವೇಳೆ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಲು ಮುಖ್ಯ ಕಾರಣಗಳು ಎಂಬ ಪ್ರಾಥಮಿಕ ಮಾಹಿತಿ ರಾಜ್ಯ ಸರ್ಕಾರಕ್ಕೆ ದೊರಕಿದೆ ಎನ್ನಲಾಗಿದೆ.

ಬೆಂಗಳೂರು : ಪೊಲೀಸ್‌ ಇಲಾಖೆ ಅದರಲ್ಲೂ ವಿಶೇಷವಾಗಿ ಪೊಲೀಸ್‌ ಆಯುಕ್ತರ ವೈಫಲ್ಯ, ಸಕಾಲಕ್ಕೆ ಸೂಕ್ತ ಮಾಹಿತಿ, ಮಾರ್ಗದರ್ಶನ, ಸಲಹೆ ನೀಡುವಲ್ಲಿ ಗುಪ್ತಚರ ಇಲಾಖೆ ಹಾಗೂ ರಾಜಕೀಯ ಕಾರ್ಯದರ್ಶಿ ನಿರ್ಲಕ್ಷ್ಯ ಮತ್ತು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ನ ಭಾರಿ ಬೇಜವಾಬ್ದಾರಿ ಹಾಗೂ ಆರ್‌ಸಿಬಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಕಾರ್ಯಕ್ರಮ ಆಯೋಜನೆ ವೇಳೆ ನಡೆಸಿದ ಸರಣಿ ಎಡವಟ್ಟುಗಳು..

- ಇವು ಆರ್‌ಸಿಬಿ ವಿಜಯೋತ್ಸವ ವೇಳೆ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಲು ಮುಖ್ಯ ಕಾರಣಗಳು ಎಂಬ ಪ್ರಾಥಮಿಕ ಮಾಹಿತಿ ರಾಜ್ಯ ಸರ್ಕಾರಕ್ಕೆ ದೊರಕಿದೆ ಎನ್ನಲಾಗಿದೆ.

ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ಕಾರ್ಯಕ್ರಮ ಬೇಡ ಎಂಬ ಮನಸ್ಥಿತಿ ಹೊಂದಿದ್ದರೂ ಸಮರ್ಪಕವಾಗಿ ಸಲಹೆ ನೀಡದಿರುವುದು ಮಾತ್ರವಲ್ಲದೆ, ಕೆಎಸ್‌ಸಿಎ ಪದಾಧಿಕಾರಿಗಳ ಜತೆ ಬಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುವ ಭರವಸೆ ನೀಡುವಾಗ ಜತೆಯಲ್ಲಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರು ತಮ್ಮ ಹುದ್ದೆಯ ಜವಾಬ್ದಾರಿ ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಲಾಗಿದೆ.

ಹೀಗಾಗಿಯೇ ರಾಜ್ಯ ಸರ್ಕಾರ ಪೊಲೀಸ್‌ ಆಯುಕ್ತ ಬಿ. ದಯಾನಂದ್, ಗುಪ್ತಚರ ಮುಖ್ಯಸ್ಥ ನಿಂಬಾಳ್ಕರ್, ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದ ರಾಜು ಹಾಗೂ ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಪೊಲೀಸರ ವೈಫಲ್ಯವೇನು?:

ಪೊಲೀಸರು ಅದರಲ್ಲೂ ಮುಖ್ಯವಾಗಿ ನಗರ ಪೊಲೀಸ್‌ ಆಯುಕ್ತರು ಸಂಭ್ರಮಾಚರಣೆ ಮೊದಲು ಹಾಗೂ ನಂತರ ಕೂಡ ಕರ್ತವ್ಯ ನಿಭಾಯಿಸಲು ಎಡವಿದ್ದಾರೆ.

ವಿಧಾನಸೌಧದ ಬಳಿ ಸನ್ಮಾನ ಕಾರ್ಯಕ್ರಮ ಹಾಗೂ ಕ್ರೀಡಾಂಗಣದಲ್ಲಿನ ಸಂಭ್ರಮಾಚರಣೆ ಎರಡಕ್ಕೂ ಅನುಮತಿ ನೀಡಲು ಸಾಧ್ಯವಿಲ್ಲ. ನಮ್ಮ ಬಳಿ ಸಿಬ್ಬಂದಿ ಕೊರತೆಯಿದೆ ಎಂದು ಮುಖ್ಯಮಂತ್ರಿ ಅಥವಾ ಗೃಹ ಸಚಿವರಿಗೆ ಸ್ಪಷ್ಟವಾಗಿ ತಿಳಿಸಿಲ್ಲ.

ಆರ್‌ಸಿಬಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಕೆಎಸ್‌ಸಿಎ ಪದಾಧಿಕಾರಿಗಳು ಮುಖ್ಯಮಂತ್ರಿಯವರ ಭೇಟಿ ಮಾಡಿ ತೀರ್ಮಾನ ಕೈಗೊಳ್ಳುವಾಗ ಪೊಲೀಸ್ ಆಯುಕ್ತರು ಸ್ಥಳದಲ್ಲಿ ಹಾಜರಿದ್ದರೂ ಸಮಾರಂಭಕ್ಕೆ ಅನುಮತಿ ಬೇಡ ಎಂಬ ವಾದವನ್ನೇ ಮಾಡಲಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಮುಖ್ಯಮಂತ್ರಿಯವರ ಬಳಿಯಾಗಲಿ ಅಥವಾ ಗೃಹ ಸಚಿವರ ಬಳಿಯಾಗಲಿ ಕಾರ್ಯಕ್ರಮ ಆಯೋಜನೆಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದಾಗಲಿ, ಸಿಬ್ಬಂದಿ ಕೊರತೆಯಿದೆ ಎಂದಾಗಲಿ ಮಾಹಿತಿ ನೀಡಲಿಲ್ಲ.

ನಂತರ ಸಮಾರಂಭಕ್ಕೆ ಪೂರ್ವಸಿದ್ಧತೆ, ಬಂದೋಬಸ್ತ್‌ ವ್ಯವಸ್ಥೆ ಸೂಕ್ತವಾಗಿ ಮಾಡಲಿಲ್ಲ. ಕಾಲ್ತುಳಿತ ಪ್ರಕರಣ ಆದಾಗಲೂ ಸಮರ್ಪಕವಾಗಿ ನಿಭಾಯಿಸಿಲ್ಲ. ಕಾಲ್ತುಳಿತ ಘಟನೆಯ ದಿನ ಮಧ್ಯಾಹ್ನ 3.50 ಗಂಟೆಗೆ 11 ಮಂದಿ ಸಾವಿಗೀಡಾಗಿರುವುದು ಆಸ್ಪತ್ರೆಯಲ್ಲಿ ವರದಿಯಾಗಿದೆ. ಇದು ಪೊಲೀಸರಿಗೂ ಗೊತ್ತಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರ ಪೊಲೀಸ್‌ ಆಯುಕ್ತರು ಮಾಹಿತಿಯನ್ನೇ ನೀಡಿರಲಿಲ್ಲ.

ಮುಖ್ಯಮಂತ್ರಿ ಅವರಿಗೆ ಬೇರೆ ಮೂಲದಿಂದ ಸಾವಿನ ಸುದ್ದಿ ಬಂದಿದೆ. ಸಂಜೆ 5 ಗಂಟೆಗೆ ಖುದ್ದು ಆಯುಕ್ತರಿಗೆ ಕರೆ ಮಾಡಿ ಅವರು ವಿಚಾರಿಸಿದ್ದಾರೆ. ಈ ವೇಳೆ ಆಯುಕ್ತರು ಒಬ್ಬರು ಮಾತ್ರ ಸಾವಿಗೀಡಾಗಿರುವುದಾಗಿ ತಿಳಿಸಿದ್ದರು. ಬಳಿಕ 5.30ಕ್ಕೆ ಪುನಃ ವಾಪಸ್‌ ಕರೆ ಮಾಡಿದ್ದ ಆಯುಕ್ತ ದಯಾನಂದ್ ನಾನು ಆಸ್ಪತ್ರೆ ಬಳಿಯೇ ಇದ್ದೇನೆ. ಆರು ಮಂದಿ ಮಾತ್ರ ಸತ್ತಿದ್ದಾರೆ ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿ ಮುಖ್ಯಮಂತ್ರಿ ಅವರು ದಯಾನಂದ್‌ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಕೆಎಸ್‌ಸಿಎ ಬೇಜವಾಬ್ದಾರಿ ಏನು?

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಬೇಜವಾಬ್ದಾರಿ ನಡವಳಿಕೆ ಕೂಡ ಪ್ರಕರಣಕ್ಕೆ ಮೂಲ ಕಾರಣ ಎಂದು ಹೇಳಲಾಗಿದೆ. ಜೂ.3 ರಂದು ರಾತ್ರಿ, ಇನ್ನೂ ಫೈನಲ್‌ ಪಂದ್ಯ ಮುಗಿಯುವ ಮೊದಲೇ ಸಂಭ್ರಮಾಚರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಕೆಎಸ್‌ಸಿಎ ಪತ್ರ ಬರೆದಿದೆ. ಅಲ್ಲದೆ, ಈ ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳುವರು ಎಂದು ಪತ್ರದಲ್ಲಿ ಹೇಳಿದೆ. ಪಂದ್ಯ ಮುಗಿಯುವ ಮುನ್ನವೇ ಹಾಗೂ ಸಿಎಂ ಹಾಗೂ ಡಿಸಿಎಂಗೆ ಅಧಿಕೃತ ಆಹ್ವಾನ ನೀಡುವ ಮೊದಲೇ ಭಾಗವಹಿಸುತ್ತಾರೆ ಎಂದು ಹೇಳಿದ್ದು ಹೇಗೆ?

ಜತೆಗೆ, ಕ್ರೀಡಾಂಗಣದ ಸಾಮರ್ಥ್ಯ 35,000. ಆದರೂ ಲಕ್ಷಾಂತರ ಮಂದಿ ಈ ವಿಜಯಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅಬ್ಬರದ ಪ್ರಚಾರ ನೀಡಿ ಅಭಿಮಾನಿಗಳು ಮೇರೆ ಮೀರಿ ಸೇರುವಂತೆ ಮಾಡಿತ್ತು. ಕ್ರೀಡಾಂಗಣದ ಒಳ ಹೋಗಲು ಪಾಸ್‌ಗಳನ್ನು ನೀಡಿದ್ದರೂ ಪ್ರವೇಶ ಎಲ್ಲರಿಗೂ ಉಚಿತ ಪ್ರವೇಶ ಎಂದು ಸುಳ್ಳು ಪ್ರಚಾರ ಮಾಡಲಾಗಿತ್ತು. ಜನದಟ್ಟಣೆ ತೀವ್ರ ಸ್ವರೂಪ ಪಡೆದಿದ್ದರೂ ಶೀಘ್ರ ದ್ವಾರಗಳನ್ನು ತೆರೆದು ಜನರಿಗೆ ಸುಗಮವಾಗಿ ಕ್ರೀಡಾಂಗಣಕ್ಕೆ ಹೋಗಲು ಅವಕಾಶ ನೀಡಿಲ್ಲ. ಆರ್‌ಸಿಬಿ ಜತೆಗೂಡಿ ಎಷ್ಟು ಜನರಾದರೂ ಬನ್ನಿ ಎಂದು ಹುರಿದುಂಬಿಸಿ ಗೇಟುಗಳ ಬಳಿ ಕಾಯಿಸಿ ಏಕಾಏಕಿ ಗೇಟು ತೆಗೆದಿದ್ದೇ ಕಾಲ್ತುಳಿತಕ್ಕೆ ನೇರ ಕಾರಣ.

ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡಲು ಒಪ್ಪಿರಲಿಲ್ಲ. ಅದೊಂದು ಖಾಸಗಿ ಫ್ರಾಂಚೈಸಿ. ಕರ್ನಾಟಕ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸುವ ತಂಡ ಅಲ್ಲ. ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿರುವ ಆಟಗಾರರು. ಹೀಗಾಗಿ ಅವರಿಗೆ ಸರ್ಕಾರದಿಂದ ಸನ್ಮಾನ ಮಾಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಆದರೆ, ಇದು ಸರ್ಕಾರದ ಕಾರ್ಯಕ್ರಮವಲ್ಲ, ಕೆಎಸ್‌ಸಿಎನವರು ಮಾಡುತ್ತಿದ್ದಾರೆ ಎಂದು ಗೋವಿಂದರಾಜು ಒತ್ತಡ ಹಾಕಿದ್ದರು.

ಜತೆಗೆ, ಕೆಎಸ್‌ಸಿಎ, ಆರ್‌ಸಿಬಿ ಹಾಗೂ ಡಿಎನ್‌ಎ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅನುಮತಿ ಕೊಡಿಸಿದ್ದರು ಎನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ಗೋವಿಂದರಾಜು ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆದಿರುವುವುದಾಗಿ ತಿಳಿದುಬಂದಿದೆ.

ಆರ್‌ಸಿಬಿ, ಡಿಎನ್‌ಎ ಎಡವಟ್ಟು:

ಆರ್‌ಸಿಬಿ ತಂಡವು ಸಾಮಾಜಿಕ ಜಾಲತಾಣದ ಪೇಜ್‌ ಮೂಲಕ ಅಭಿಮಾನಿಗಳು ಹೆಚ್ಚು ಮಂದಿ ಸೇರಲು ಪ್ರೇರೇಪಿಸಿತು. ತೆರೆದ ವಾಹನ ರ್‍ಯಾಲಿ, ಸಂಭ್ರಮಾಚರಣೆ ಬಗ್ಗೆ ಟ್ವೀಟ್‌ ಮಾಡುತ್ತಾ ಹೆಚ್ಚೆಚ್ಚು ಜನ ಸೇರಲು ಕರೆ ನೀಡಿತು. ಇದರಿಂದ ಬೆಂಗಳೂರಿನ ಹೊರಗಿನವರೂ ಆಗಮಿಸಿ ಅವರನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು.

ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರ ಜತೆ ಸೇರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅನುಮತಿ ಪಡೆದರು ಎನ್ನಲಾಗಿದೆ. ಹೀಗಾಗಿ ಆರ್‌ಎಸ್‌ಬಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಸಹ ಪ್ರಮುಖ ಕಾರಣ ಎನ್ನಲಾಗಿದೆ.

ಗುಪ್ತಚರ ವೈಫಲ್ಯ:

ಆರ್‌ಸಿಬಿ ಅಭಿಮಾನಿಗಳು ಅತ್ಯುತ್ಸಾಹದಿಂದ ಸೇರುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿಲ್ಲ. ಗುಪ್ತಚರ ಇಲಾಖೆ ಪ್ರತ್ಯೇಕವಾಗಿದ್ದರೂ ಬೆಂಗಳೂರು ನಗರದ ಗುಪ್ತಚರ ವಿಭಾಗ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಗುಪ್ತಚರ ಇಲಾಖೆ ವೈಫಲ್ಯಕ್ಕಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್‌ ಅವರನ್ನು ಅಮಾನತು ಮಾಡಿದ್ದು, ಗುಪ್ತಚರ ಎಡಿಜಿಪಿ ಆಗಿದ್ದ ಎಡಿಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ ಎಂಬ ಚರ್ಚೆ ಪೊಲೀಸ್‌ ವಲಯದಲ್ಲಿ ನಡೆಯುತ್ತಿದೆ.

1. ದಯಾನಂದ್‌, ಪೊಲೀಸ್‌ ಆಯುಕ್ತ

- ವಿಧಾನಸೌಧ, ಕ್ರೀಡಾಂಗಣ ಎರಡೂ ಕಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗದು. ನಮ್ಮ ಬಳಿ ಸಿಬ್ಬಂದಿ ಕೊರತೆ ಇದೆ ಎಂದು ಸಿಎಂ, ಗೃಹ ಸಚಿವರಿಗೆ ಸ್ಪಷ್ಟವಾಗಿ ಹೇಳಲಿಲ್ಲ

- ಆರ್‌ಸಿಬಿ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತು ಸಿಎಂ ತೀರ್ಮಾನ ಕೈಗೊಳ್ಳುವಾಗ ಸ್ಥಳದಲ್ಲಿದ್ದರೂ, ಅನುಮತಿ ಬೇಡ ಎಂದು ವಾದವನ್ನೇ ಮಾಡಲಿಲ್ಲ

- ಸರ್ಕಾರ ಅನುಮತಿ ಕೊಟ್ಟ ಬಳಿಕವೂ ಸಮಾರಂಭಕ್ಕೆ ಪೂರ್ವಸಿದ್ಧತೆ ಮಾಡಲಿಲ್ಲ, ಬಂದೋಬಸ್ತ್‌ಗೆ ಸೂಕ್ತವಾದ ಕ್ರಮ ಕೈಗೊಳ್ಳಲಿಲ್ಲ. ಕಾಲ್ತುಳಿತ ಬಳಿಕವೂ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲಿಲ್ಲ

- ಕಾಲ್ತುಳಿತ ಬಗ್ಗೆ ಸಿಎಂಗೆ ಮಾಹಿತಿ ನೀಡಲಿಲ್ಲ. ಬೇರೆಯವರಿಂದ ಮಾಹಿತಿ ಪಡೆದು ಸಿಎಂ ಸಂಜೆ 5ಕ್ಕೆ ಕರೆ ಮಾಡಿದಾಗಲೂ 1 ಸಾವಾಗಿದೆ ಎಂದಿದ್ದರು. ಬಳಿಕ 6 ಮಂದಿ ಮಾತ್ರ ಬಲಿಯಾಗಿದ್ದಾರೆ ಎಂದು ವಾದಿಸಿದ್ದರು

2. ಗೋವಿಂದರಾಜು, ಸಿಎಂ, ರಾಜಕೀಯ ಕಾರ್ಯದರ್ಶಿ

- ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡಲು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಅದು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವ ತಂಡವಲ್ಲ ಎಂದು ಹೇಳಿದ್ದರೂ ಒತ್ತಡ ಹೇರಿ ಒಪ್ಪಿಸಿದ್ದ ಗೋವಿಂದರಾಜು

- ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅನುಮತಿ ಕೊಡಿಸಿದ್ದರು. ಸರ್ಕಾರ ಅಲ್ಲ, ಆ ಸಂಸ್ಥೆಗಳು ಕಾರ್ಯಕ್ರಮ ಮಾಡಿಕೊಳ್ಳುತ್ತವೆ ಎಂದು ವಾದಿಸಿದ್ದರು

3. ರಾಜ್ಯ ಕ್ರಿಕೆಟ್‌ ಸಂಸ್ಥೆ

- ಜೂ.3ರ ರಾತ್ರಿ ಫೈನಲ್‌ ಪಂದ್ಯ ಮುಗಿಯುವ ಮೊದಲೇ ಸಂಭ್ರಮಾಚರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಈ ಸಂಸ್ಥೆ ಪತ್ರ ಬರೆದಿತ್ತು

- ಸಿಎಂ, ಡಿಸಿಎಂಗೆ ಅಧಿಕೃತ ಆಹ್ವಾನ ಕೊಡುವ ಮೊದಲೇ ಅವರಿಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿಕೊಂಡಿತ್ತು!

- ಕ್ರೀಡಾಂಗಣದ ಸಾಮರ್ಥ್ಯ 35000 ಇದ್ದರೂ, ಲಕ್ಷಾಂತರ ಮಂದಿ ವಿಜಯಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಪ್ರಚಾರ ಮಾಡಿತ್ತು

- ಕ್ರೀಡಾಂಗಣದ ಒಳಗೆ ಹೋಗಲು ಪಾಸ್‌ ನೀಡಿದ್ದರೂ, ಎಲ್ಲರಿಗೂ ಪ್ರವೇಶ ಉಚಿತ ಎಂದು ಸುಳ್ಳು ಪ್ರಚಾರಗಳನ್ನು ಮಾಡಿತ್ತು

- ಜನದಟ್ಟಣೆ ಹೆಚ್ಚಾದರೂ ಶೀಘ್ರ ಪ್ರವೇಶ ದ್ವಾರ ತೆರೆದು ಜನರು ಸುಗಮವಾಗಿ ಕ್ರೀಡಾಂಗಣದೊಳಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ

- ಎಷ್ಟು ಜನರಾದರೂ ಬನ್ನಿ ಎಂದು ಹುರಿದುಂಬಿಸಿ ಗೇಟುಗಳ ಬಳಿ ಅಭಿಮಾನಿಗಳನ್ನು ಕಾಯಿಸಿ, ಏಕಾಏಕಿ ಗೇಟು ತೆರೆದು ಕಾಲ್ತುಳಿತ ಸೃಷ್ಟಿಸಿತು

4. ಆರ್‌ಸಿಬಿ, ಡಿಎನ್‌ಎ

- ಆರ್‌ಸಿಬಿ ತಂಡವು ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿ ಅಭಿಮಾನಿಗಳು ಹೆಚ್ಚು ಜಮಾವಣೆಗೊಳ್ಳುವಂತೆ ಮಾಡಿತು

- ತೆರೆದ ವಾಹನದ ರ್‍ಯಾಲಿ, ಸಂಭ್ರಮಾಚರಣೆ ಮೆರವಣಿಗೆ ಬಗ್ಗೆ ಮಾಹಿತಿ ಪಸರಿಸಿ ಹೆಚ್ಚು ಹೆಚ್ಚು ಜನರು ಸೇರಲು ಕಾರಣವಾಯಿತು

- ಬೆಂಗಳೂರಿನ ಹೊರಗಿನವರೂ ಆಗಮಿಸಿ ನಿಯಂತ್ರಿಸಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿತು

- ಸಿಎಂ ರಾಜಕೀಯ ಕಾರ್ಯದರ್ಶಿ ಜತೆ ಸೇರಿ ಸಿಎಂ ಮೇಲೆ ಒತ್ತಡ ಹಾಕಿ ಕಾರ್ಯಕ್ರಮಕ್ಕೆ ಆರ್‌ಸಿಬಿ, ಡಿಎನ್‌ಎ ಅನುಮತಿ ಪಡೆದಿದ್ದವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!