ಚಂದ್ರಯಾನದಲ್ಲಿ ಯಶಸ್ವಿ ಕಂಡ ವಿಜ್ಞಾನಿಗಳೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು, ಮಿನಿ ಚಂದ್ರಯಾನ ತೆಗೆದುಕೊಂಡು ಹೋಗಿದ್ದು ವಿಪರ್ಯಾಸ ಎಂದು ಚಿತ್ರನಟ ಚೇತನ್ ಟೀಕಿಸಿದ್ದಾರೆ.
ಬಾಗಲಕೋಟೆ (ಆ.27): ಚಂದ್ರಯಾನದಲ್ಲಿ ಯಶಸ್ವಿ ಕಂಡ ವಿಜ್ಞಾನಿಗಳೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು, ಮಿನಿ ಚಂದ್ರಯಾನ ತೆಗೆದುಕೊಂಡು ಹೋಗಿದ್ದು ವಿಪರ್ಯಾಸ ಎಂದು ಚಿತ್ರನಟ ಚೇತನ್ ಟೀಕಿಸಿದ್ದಾರೆ. ಶನಿವಾರ, ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳೇ ತಮ್ಮ ಕೆಲಸದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ. ಅಂದರೆ ನಾವು ಹೇಗೆ ವಿಜ್ಞಾನಿಗಳ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು? ಎಂಬ ಪ್ರಶ್ನೆ ಕಾಡುತ್ತಿದೆ ಎಂದರು. ಚಂದ್ರಯಾನ-3 ಯಶಸ್ವಿಯಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಒಳ್ಳೇ ಹೆಸರು ಮಾಡಿದ್ದಾರೆ. ಅಮೆರಿಕ, ರಷ್ಯಾ, ಚೀನಾ ಆದಮೇಲೆ ಭಾರತ ಚಂದ್ರಯಾನ-3 ಸಾಧನೆ ಒಳ್ಳೆಯ ಬೆಳವಣಿಗೆ.
ಆದರೆ ವಿಜ್ಞಾನಿಗಳಿಂದ ನಾವು ವೈಜ್ಞಾನಿಕತೆ ನಿರೀಕ್ಷೆ ಮಾಡುತ್ತಿದ್ದೇವೆ. ವಿಜ್ಞಾನಿಗಳು ಧಾರ್ಮಿಕ ಅಥವಾ ಅವೈಜ್ಞಾನಿಕವಾಗಿ ಯೋಚನೆ ಮಾಡುವುದಕ್ಕಿಂತ ವೈಜ್ಞಾನಿಕತೆಗೆ ದಾರಿಯಾಗಬೇಕು ಎಂದು ಹೇಳಿದರು. ವೈಜ್ಞಾನಿಕತೆ ಯೋಚನೆಯಿಂದ ನಮ್ಮ ದೇಶವನ್ನ ಮುಂದೆ ತಗೆದುಕೊಂಡು ಹೋಗಬಹುದು ಅನಿಸುತ್ತದೆ. ನಮ್ಮ ವಿಜ್ಞಾನಿಗಳ ವೈಜ್ಞಾನಿಕತೆಯಿಂದ ಭಾರತದ ಹೆಸರು ಮಾಡಿದೆ ಎನ್ನಬೇಕೇ ಹೊರತು, ಅವೈಜ್ಞಾನಿಕ ಯೋಚನೆಯಿಂದಲ್ಲ ಎಂಬುದನ್ನು ವಿಜ್ಞಾನಿಗಳು ಸಾರಿ ಹೇಳಬೇಕು ಎಂದು ಪ್ರತಿಪಾದಿಸಿದರು. ಬದುಕು ಮತ್ತು ಉದ್ಯೋಗಕ್ಕಾಗಿ ವಿಜ್ಞಾನವನ್ನು ತೋರಿಸುವುದು ಅಲ್ಲ. ನಮಗೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಮತ್ತು ಆರ್ಟಿಕಲ್ 51ಎ ಹೆಚ್ಚು ವೈಜ್ಞಾನಿಕತೆಯ ಮನೋಭಾವ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಸಂವಿಧಾನದ ಆಶಯವಾಗಿದೆ ಎಂದರು.
ಚಂದ್ರನ ಮೇಲೆ ಓಡಾಡಿದ ರೋವರ್: ಐತಿಹಾಸಿಕ ಹೆಜ್ಜೆ!
ಪ್ರಕಾಶ್ ರೈ ಅವರೇ ಬಿಡಿಸಿ ಹೇಳಬೇಕು: ಚಂದ್ರಯಾನ 3ರ ಬಗ್ಗೆ ನಟ ಪ್ರಕಾಶ್ ರೈ ಅವರು ವ್ಯಂಗ್ಯ ಭಾವಚಿತ್ರ ಪೋಸ್ಟ್ ಮಾಡಿದ್ದರ ವಿಚಾರ. ಸಮಾಜದಲ್ಲಿ ಬೇರೆ ಬೇರೆ ಧ್ವನಿಗಳು ಬೇಕು, ವಾಕ್ ಸ್ವಾತಂತ್ರ್ಯ ಅನ್ನೋದು ಆರ್ಟಿಕಲ್ 19ರಲ್ಲಿ ಮುಖ್ಯ ಭಾಗ. ಹೇಟ್ ಸ್ಪೀಚ್ ಅಲ್ಲದೇ, ವೈಲೆನ್ಸ್ ಅಲ್ಲದೇ ಜನರಿಗೆ ತಮ್ಮ ಅಭಿಪ್ರಾಯ ಹೇಳೋ ಸಮಾಜ ಬೇಕಿದೆ. ಪ್ರಕಾಶ್ ರೈ ಅವರು ಹೇಳಿದ್ದು, ಅವರೇ ಅದನ್ನು ಬಿಡಿಸಿ ಹೇಳಬೇಕು. ಯಾರೇ ಮೂಲ ಚಂದ್ರಕ್ಕೆ ಹೋದರೂ ಮೂಲ ಮಲಯಾಳಿಗಳೇ ಇತ್ತಾರೆ ಎಂಬ ಜೋಕ್ ಇತ್ತು. ಆ ಜೋಕ್ ಮೂಲಕ ಹಾಗೆ ಹೇಳಿದ್ದಾರೋ.. ಏನೋ...? ನನಗೆ ಗೊತ್ತಿಲ್ಲ ಎಂದು ನಟ ಚೇತನ್ ಪ್ರತಿಕ್ರಿಯಿಸಿದರು.
ಚಂದ್ರನ ಮೇಲೆ ಭಾರತದ ನಡಿಗೆ ಆರಂಭ: ರೋವರ್ ಅಧ್ಯಯನ ಶುರು
ಮೋದಿ ಅವರ ಹಿಂದುತ್ವವನ್ನು ನಾನು ಒಪ್ಪಲ್ಲ: ಚಂದ್ರಯಾನ ಲ್ಯಾಂಡ್ ಆದ ಜಾಗಕ್ಕೆ ಮೋದಿ ಅವರಿಂದ ಶಿವಶಕ್ತಿ ಹೆಸರು ನಾಮಕರಣ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ನಟ ಚೇತನ್, ಎಷ್ಟೋ ಸೈದ್ಧಾಂತಿಕ ಸಮಸ್ಯೆಗಳನ್ನು ಕಾಣಬಹುದು. ಆದರೇ ಮೋದಿ ಅವರ ಹಿಂದುತ್ವ ಮತ್ತು ಸಿದ್ಧಾಂತವನ್ನು ನಾನು ಒಪ್ಪಲ್ಲ. ಅವರ ಆಲೋಚನೆಗಳಲ್ಲಿ ನನಗೆ ಬಹಳ ಭಿನ್ನಾಭಿಪ್ರಾಯ ಕಂಡುಬರುತ್ತದೆ ಎಂದು ಹೇಳಿದರು. ಮೋದಿ ಅವರು ಈ ಹಿಂದೆ ನಮ್ಮ ದೇಶದಲ್ಲೇ ಮೊದಲು ಪ್ಲಾಸ್ಟಿಕ್ ಸರ್ಜರಿ ಇತ್ತು ಅಂದರು. ಗಣೇಶನ ತಲೆ ಪ್ಲಾಸ್ಟಿಕ್ ಸರ್ಜರಿಯಿಂದ ಆಯಿತು. ಬೇರೆ ಬೇರೆ ಐವಿಎಫ್ ಇತ್ತು. ದ್ರೋಣನೂ ಐವಿಎಫ್ ನಿಂದ ಹುಟ್ಟಿದವರು ಎಂದು ಆಸ್ಪತ್ರೆಯೊಂದರ ಉದ್ಘಾಟನೆ ವೇಳೆ ಹೇಳಿದ ವ್ಯಕ್ತಿ ಅವರು, ಆ ವ್ಯಕ್ತಿಯಲ್ಲಿ ವೈಜ್ಞಾನಿಕತೆ ಇರುವ ನಂಬಿಕೆ ನನಗೂ ಇಲ್ಲ. ಆದರೆ ವಿಜ್ಞಾನಿಗಳಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ನಟ ಚೇತನ್ ತಿಳಿಸಿದರು.