
ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಮಾರ್ಚ್ 28ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಪಂದ್ಯದ ಟಿಕೆಟ್ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿವೆ. ಇನ್ನು ಇದೆಲ್ಲದರ ನಡುವೆ ಇಂದು ವಿಧಾನಸೌಧದಲ್ಲೂ ಐಪಿಎಲ್ ಟಿಕೆಟ್ ಕುರಿತಾದ ಚರ್ಚೆ ಜೋರಾಗಿಯೇ ನಡೆದಿದೆ.
ನಮಗೆ ಐಪಿಎಲ್ ಮ್ಯಾಚ್ ನೋಡಲು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅಸಮಾಧಾನ ಹೊರಹಾಕಿದ್ದಾರೆ. 'ಕ್ರಿಕೆಟ್‌ನವರಿಗೆ ದುಡ್ಡಿಗೇನು ಕೊರತೆನಾ? ಶಾಸಕರಾದ ನಮಗೆ ಅಲ್ಲಿ ಒಂದು ಪಾಸ್ ಕೊಡಲ್ಲ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಕ್ರಿಕೆಟ್ ಸ್ಟೇಡಿಯಂ ಕಟ್ಟೋಕೆ ಸರ್ಕಾರದ ಹಣ ಬೇಕು. ಜಾಗ ಕೊಟ್ಟಿರೋದು ಕ್ರಿಕೆಟ್ ಅಭ್ಯಾಸ ಮಾಡೋಕೆ ಹಾಗೂ ಕ್ರಿಕೆಟ್ ಆಡೋಕೆ. ಆದರೆ ಅಲ್ಲಿ ಎಣ್ಣೆ ಹೊಡಿಯೋಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಇದನ್ನೆಲ್ಲಾ ಟೈಟ್ ಮಾಡಿ, ಆಗ ಬಾಯಿ ಮುಚ್ಚಿಕೊಂಡು ಬರುತ್ತಾರೆ ಎಂದು ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅವರ ಬಳಿ ಸಾವಿರಾರು ಕೋಟಿ ದುಡ್ಡಿದೆ. ನಾವು ಒಂದು ಟಿಕೆಟ್‌ಗೆ ಅಂಗಲಾಚಬೇಕು. ನನ್ನ ಹೆಸರಲ್ಲೇ ಟಿಕೆಟ್ ಕಳಿಸಿಕೊಡುತ್ತಾರೆ. ಆ ಟಿಕೆಟ್‌ನಲ್ಲಿ ನನ್ನ ಹೆಂಡತಿ ಕಳಿಸೋಕೆ ಆಗಲ್ಲ, ಮಗನನ್ನೂ ಕಳಿಸೋಕೆ ಆಗಲ್ಲ ಎಂದು ಆರ್ ಅಶೋಕ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಶಕ ವಿಜಯಾನಂದ ಕಾಶಪ್ಪನವರ್, ಎಂಎಲ್‌ಎಗಳಿಗೆ ಒಂದು ಟಿಕೆಟ್ ಕೊಡ್ತಾರೆ. ಅದು ಸಾಮಾನ್ಯ ಗ್ಯಾಲರಿಯಲ್ಲಿ ಹೋಗಿ ಕುಳಿತುಕೊಳ್ಳಬೇಕು. ಮೊದಲೆಲ್ಲಾ ಎರಡು ಟಿಕೆಟ್ ಕೊಡುತ್ತಿದ್ದರು. ಎಂಎಲ್‌ಎಗಳು ಕೂರಲು ಒಂದು ಅವಕಾಶ ಮಾಡಿಕೊಡಿ. ನಮ್ಮ ಮಕ್ಕಳು, ನಮ್ಮ ಮನೆಯವರು ಹೋಗ್ತಾರೆ. ನಾವು ಅಲ್ಲಿಗೆ ಹೋದರೆ ಮರ್ಯಾದೆಯಿಲ್ಲ. ಶಾಸಕರು, ಸಚಿವರಿಗೆ ಪ್ರತ್ಯೇಕ ಗ್ಯಾಲರಿ ಮಾಡಿಸಿ ಎಂದು ಸ್ಪೀಕರ್ ಬಳಿ ಮನವಿ ಮಾಡಿದರು.
ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಮಾತುಗಳನ್ನು ಆಲಿಸಿದ ಸ್ಪೀಕರ್ ಯುಟಿ ಖಾದರ್, 'ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಕೆಎಸ್‌ಸಿಎ ಅವರನ್ನು ಕರೆದು ಮಾತನಾಡಬೇಕು. ಅಲ್ಲಿ ಹೋಗಿ ಶಾಸಕರಿಗೆ ಅಗೌರವಾಗುವುದು ಸರಿಯಲ್ಲ. ಶಾಸಕರ ಕುಟುಂಬಕ್ಕೆ ಕನಿಷ್ಠ 4 ಟಕೆಟ್ ಕೊಡಬೇಕು. ಅಲ್ಲಿ ಶಾಸಕರಿಗೆ ಗೌರವ ಸಿಗುವ ಕೆಲಸವಾಗಬೇಕು ಎಂದು ಸ್ಪೀಕರ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದರು. ಇದನ್ನೆಲ್ಲಾ ಗಂಭೀರವಾಗಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರ ಮನವಿಯನ್ನು ಅವರಿಗೆ ತಿಳಿಸಿ ಸೂಕ್ತ ಕ್ರಮ ವಹಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ