100 ಕೋಟಿ ಗೋಲ್ಡ್ ವಂಚನೆ: ಡಿಕೆಸು ಸುಳ್ಳು ತಂಗಿ ಐಶ್ವರ್ಯಾ ಗೌಡಗೆ ಬಂಧನ ಭೀತಿ, ಸ್ಯಾಂಡಲ್‌ವುಡ್‌ ನಟ ಧರ್ಮಗೂ ಸಂಕಷ್ಟ

Published : Mar 26, 2026, 12:02 PM IST
Aishwarya Gowda Gold Scam Case

ಸಾರಾಂಶ

ನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಗೋಲ್ಡ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾ ಗೌಡಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಎರಡು ಹೆಸರು ಬಳಸಿ, ರಾಜಕೀಯ ಪ್ರಭಾವವಿದೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪದ ಮೇಲೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ನಟ ಧರ್ಮ ಅವರನ್ನೂ ವಿಚಾರಣೆಗೊಳಪಡಿಸಿದೆ.

ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿರುವ ಹೈ-ಪ್ರೊಫೈಲ್ ‘ಗೋಲ್ಡ್ ವಂಚನೆ’ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಐಶ್ವರ್ಯಾ ಗೌಡಗೆ ಮತ್ತೆ ಸಿಐಡಿ ಸಂಕಷ್ಟ ಎದುರಾಗಿದೆ. ಹಲವು ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಸಿಲುಕಿರುವ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಕೆ.ಎನ್. ಹರೀಶ್ ವಿರುದ್ಧ ತನಿಖೆ ಚುರುಕುಗೊಂಡಿದ್ದು, ಬಂಧನ ಭೀತಿ ಮತ್ತಷ್ಟು ಗಂಭೀರವಾಗಿದೆ.

ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದ ನಿರಾಕರಣೆ

ಈ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿ, ಸೆಷನ್ಸ್ ನ್ಯಾಯಾಲಯವು ಐಶ್ವರ್ಯಾ ಗೌಡಗೆ ನಿರೀಕ್ಷಣಾ ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ. ಸಿಐಡಿ ಅಧಿಕಾರಿಗಳು ಸಲ್ಲಿಸಿದ ದಾಖಲೆಗಳು ಮತ್ತು ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಗಳ ಗಂಭೀರತೆಯನ್ನು ಗಮನಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದಾಗಿ ಐಶ್ವರ್ಯಾ ಹಾಗೂ ಅವರ ಪತಿಗೆ ಬಂಧನದ ಭೀತಿ ಎದುರಾಗಿದೆ.

ಎರಡು ಹೆಸರು, ಎರಡು ಗುರುತಿನ ಚೀಟಿ: ವಂಚನೆಗೆ ಸಂಚು

ಸಿಐಡಿ ತನಿಖೆಯಲ್ಲಿ ಐಶ್ವರ್ಯಾ ಗೌಡ ವಂಚನೆ ನಡೆಸಲು ಎರಡು ವಿಭಿನ್ನ ಹೆಸರನ್ನು ಬಳಸಿದ್ದಳು ಎಂಬ ಸಂಗತಿ ಬಹಿರಂಗವಾಗಿದೆ. ‘ಐಶ್ವರ್ಯಾ ಗೌಡ’ ಮತ್ತು ‘ನವ್ಯಾಶ್ರೀ’ ಎಂಬ ಎರಡು ಹೆಸರಿನಲ್ಲಿ ಪ್ರತ್ಯೇಕ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಹೊಂದಿದ್ದಳು. ಈ ಎರಡೂ ದಾಖಲೆಗಳಲ್ಲಿ ತಂದೆಯ ಹೆಸರು ಮತ್ತು ಜನ್ಮ ದಿನಾಂಕವೂ ಭಿನ್ನವಾಗಿ ನಮೂದಿಸಲಾಗಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.

ನೂರು ಕೋಟಿಗೂ ಅಧಿಕ ವಂಚನೆ ಆರೋಪ

2017ರಿಂದಲೇ ವಂಚನೆ ಕಾರ್ಯಾಚರಣೆ ಆರಂಭಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಹಲವರಿಗೆ ಚಿನ್ನ ಹೂಡಿಕೆ, ಲಾಭದಾಯಕ ಯೋಜನೆಗಳ ಹೆಸರಿನಲ್ಲಿ ಮೋಸ ಮಾಡಿ, ಸುಮಾರು ₹100 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.

ಡಿ.ಕೆ. ಸುರೇಶ್ ಸೋದರಿ ಎಂದು ಬಿಲ್ಡಪ್

ಐಶ್ವರ್ಯಾ ಗೌಡ ತಮ್ಮನ್ನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸೋದರಿ ಎಂದು ಸುಳ್ಳು ಹೇಳಿಕೊಂಡು ಹಲವರನ್ನು ನಂಬಿಸಿ ವಂಚನೆ ನಡೆಸಿದ್ದಾಳೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಾರ್ವಜನಿಕ ಕಾರ್ಯಕ್ರಮಗಳು, ರಾಜ್ಯೋತ್ಸವ ಸಮಾರಂಭಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ರಾಜಕಾರಣಿಗಳನ್ನು ಕರೆಸಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಳು ಎಂದು ಹೇಳಲಾಗಿದೆ.

ಐಶಾರಾಮಿ ಜೀವನ ಶೈಲಿ

ವಂಚನೆಯ ಹಣದಿಂದ ಐಶ್ವರ್ಯಾ ಗೌಡ ಐಶಾರಾಮಿ ಜೀವನ ನಡೆಸುತ್ತಿದ್ದಳು. ಮರ್ಸಿಡಿಸ್ ಬೆಂಜ್, ಜಾಗ್ವಾರ್, ಆಡಿ ಸೇರಿದಂತೆ ದುಬಾರಿ ಕಾರುಗಳನ್ನು ಹೊಂದಿದ್ದು, ಅವುಗಳಿಗೆ ಹಳದಿ ಬೋರ್ಡ್ ತೆಗೆದು ವೈಟ್ ಬೋರ್ಡ್ ಬಳಸಿ ಓಡಾಟ ನಡೆಸುತ್ತಿದ್ದಳು. ಖಾಸಗಿ ಗನ್‌ಮ್ಯಾನ್ ಮತ್ತು ಬಾಡಿಗಾರ್ಡ್‌ಗಳ ಭದ್ರತೆಯಲ್ಲಿ ಸಂಚರಿಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.

ಸಿಐಡಿ ತನಿಖೆಗೆ ಸಹಕರಿಸದ ಆರೋಪ

ಸಿಐಡಿ ಅಧಿಕಾರಿಗಳು ತನಿಖೆ ವೇಳೆ ಐಶ್ವರ್ಯಾ ಸಮರ್ಪಕವಾಗಿ ಸಹಕರಿಸಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕೆ ನಿರೀಕ್ಷಣಾ ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ನಟ ಧರ್ಮಗೂ ಸಂಕಷ್ಟ

ಈ ಪ್ರಕರಣದ ತನಿಖೆ ಸ್ಯಾಂಡಲ್‌ವುಡ್ ವಲಯಕ್ಕೂ ವಿಸ್ತರಿಸಿದ್ದು, ನಟ ಧರ್ಮ ಅವರಿಗೆ ಕೂಡ ಸಂಕಷ್ಟ ಎದುರಾಗಿದೆ. ವಂಚನೆ ವೇಳೆ ಡಿ.ಕೆ. ಸುರೇಶ್ ಅವರ ಧ್ವನಿಯಂತೆ ಮಿಮಿಕ್ರಿ ಮಾಡಿ ಮಾತನಾಡಲಾಗಿದೆ ಎಂಬ ಆರೋಪದ ಹಿನ್ನೆಲೆ, ನಟ ಧರ್ಮ ಅವರ ವಾಯ್ಸ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಈ ಮಾದರಿಯನ್ನು ಫರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.

ಒಟ್ಟಿನಲ್ಲಿ, ಬಹುಮುಖ ತಂತ್ರಗಳಿಂದ ನಡೆದ ಈ ಗೋಲ್ಡ್ ವಂಚನೆ ಪ್ರಕರಣ ರಾಜ್ಯದ ಪ್ರಮುಖ ಆರ್ಥಿಕ ಅಪರಾಧಗಳಲ್ಲಿ ಒಂದಾಗಿ ಪರಿಣಮಿಸಿದ್ದು, ಸಿಐಡಿ ತನಿಖೆ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಇನ್ನಷ್ಟು ಕಠಿಣವಾಗುವ ಸೂಚನೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋಟಾರು ವಾಹನಗಳ ತೆರಿಗೆ ಬಿಲ್‌ಗೆ ಚರ್ಚೆ ಇಲ್ಲದೆ ಅಂಗೀಕಾರ; ಹೊಸ ತಿದ್ದುಪಡಿಯಿಂದ ವಾಹನ ಮಾಲೀಕರಿಗೆ ಆಗುವ ಲಾಭವೇನು?
Karnataka Latest News: 100 ಕೋಟಿ ಗೋಲ್ಡ್ ವಂಚನೆ - ಡಿಕೆಸು ಸುಳ್ಳು ತಂಗಿ ಐಶ್ವರ್ಯಾ ಗೌಡಗೆ ಬಂಧನ ಭೀತಿ, ಸ್ಯಾಂಡಲ್‌ವುಡ್‌ ನಟ ಧರ್ಮಗೂ ಸಂಕಷ್ಟ