Bengaluru News: ವಿಧಾನಸೌಧದ ಜತೆಗೆ ಲಾಲ್‌ಬಾಗ್‌ನಲ್ಲೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆ

By Ravi Nayak  |  First Published Sep 1, 2022, 6:33 PM IST

ಒಂದೆರಡು ತಿಂಗಳಲ್ಲಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.


ಬೆಂಗಳೂರು (ಸೆ.1) : ಒಂದೆರಡು ತಿಂಗಳಲ್ಲಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ(Nadaprabhu Kempegowda) 108 ಅಡಿ ಎತ್ತರದ ಕಂಚಿನ ಪ್ರತಿಮೆ(bronze statue)ಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj S Bommai) ಗುರುವಾರ ಚಾಲನೆ ನೀಡಿದರು.

ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ

Tap to resize

Latest Videos

ಇದರ ಅಂಗವಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತನಾಡಿ, 'ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ರಾಜ್ಯ ಸರಕಾರವು ವಿಧಾನಸೌಧ(Vidhansoudha)ದ ಆವರಣದಲ್ಲೂ 50 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಜೊತೆಗೆ ಲಾಲ್ ಬಾಗ್(Lalbaagh) ಆವರಣದಲ್ಲೂ ನಾಡಪ್ರಭುವಿನ ಪ್ರತಿಮೆ ಮೈದಾಳಲಿದೆ" ಎಂದು ಘೋಷಿಸಿದರು.

ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಮತ್ತು ಥೀಮ್ ಪಾರ್ಕ್(Theme park) ಸ್ಥಾಪನೆಗೆ ಸರಕಾರವು 84 ಕೋಟಿ ರೂ. ವಿನಿಯೋಗಿಸುತ್ತಿದೆ. ಈ ಪ್ರತಿಮೆಗೆ ಕೆಂಪೇಗೌಡರ ಆಶಯಗಳನ್ನು ಸಂಕೇತಿಸುವಂತೆ 'ಪ್ರಗತಿ ಪ್ರತಿಮೆ' (Statue of Prosperity ) ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ಅವರು ನುಡಿದರು. ಅಭಿಯಾನವು ರಾಜ್ಯದ ಎಲ್ಲರನ್ನೂ ಒಳಗೊಳ್ಳಲಿದ್ದು, ನವ ಕರ್ನಾಟಕ ನಿರ್ಮಾಣದ ದೊಡ್ಡ ಹೆಜ್ಜೆಯಾಗಿದೆ. ಇದು ಸರಕಾರದ ಸಮಗ್ರ ಅಭಿವೃದ್ಧಿ ಸಂಕಲ್ಪದ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದರು.

ಕೆಂಪೇಗೌಡರ ದೂರದೃಷ್ಟಿಯ ಹಿರಿಮೆ:

ಸಚಿವ ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ತಾಣಗಳ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಸಿ ಎನ್ ಅಶ್ವತ್ಥ ನಾರಾಯಣ(Dr.C.N.Ashwath Narayan) ಮಾತನಾಡಿ,
'ಬೆಂಗಳೂರಿನ ಇಂದಿನ ಕೀರ್ತಿಗೆ ಈ ನಗರಕ್ಕೆ ಬುನಾದಿ ಹಾಕಿದ ಕೆಂಪೇಗೌಡರೇ ಕಾರಣ. ಅವರ ಪ್ರತಿಮೆ ಉದ್ಘಾಟನೆಗೆ ಪೂರ್ವಭಾವಿಯಾಗಿ ಇಂದಿನಿಂದ 45 ದಿನಗಳ ಕಾಲ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಎಲ್ಲ ಹಳ್ಳಿಗಳ ವ್ಯಾಪ್ತಿಯ ಕೆರೆಕಟ್ಟೆಗಳು ಮತ್ತು ನದಿಗಳಿಂದ ಪವಿತ್ರವಾದ ಮಣ್ಣು ಮತ್ತು ಜಲ ಸಂಗ್ರಹಿಸಲಾಗುವುದು. ಬಳಿಕ ಪ್ರಧಾನಿ ಮೋದಿ(PM Narendra Modi) ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿಯವರ ಸಮಯ ನೋಡಿಕೊಂಡು ನವೆಂಬರ್ 1ರಂದು ಅನಾವರಣ ಮಾಡುವ ಉದ್ದೇಶ ಇದೆ'' ಎಂದರು.

ಕೆಂಪೇಗೌಡರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು. ಅವರಿಂದ ಬೆಂಗಳೂರು ಸುರಕ್ಷಿತ ಮತ್ತು ಸುಭದ್ರವಾಗಿದೆ. ಅಂತಹ ಮಹಾಪುರುಷನ ನೆನಪನ್ನು ರಾಜ್ಯ ಸರಕಾರ ಅಜರಾಮರಗೊಳಿಸುತ್ತಿದೆ ಎಂದರು. ಅಭಿಯಾನದ ಅಂಗವಾಗಿ 31 ಜಿಲ್ಲೆಗಳಿಗೂ ತಲಾ ಒಂದು ಎಲ್ಇಡಿ ಅಲಂಕೃತ ವಾಹನ ಹೋಗಲಿದೆ. ಇದರಲ್ಲಿ ಪುಣ್ಯಪುರುಷರ ಸಂದೇಶಗಳು ಇರಲಿದ್ದು, ಕೆಂಪೇಗೌಡರನ್ನು ಕುರಿತ ಸಾಕ್ಷ್ಯಚಿತ್ರ ಪ್ರಸಾರವೂ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಕಾಮಗಾರಿ ಇನ್ನು ಒಂಬತ್ತು ತಿಂಗಳಲ್ಲಿ‌ ಮುಗಿಯಲಿದೆ. ಇದಕ್ಕಾಗಿ ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ(Heritage Sites Development Authority)ವು ಕೆಂಪೇಗೌಡರ ಜೀವನಕ್ಕೆ ಸಂಬಂಧಿಸಿದ 46 ಸ್ಥಳಗಳಿಗೆ ಕಾಯಕಲ್ಪ ನೀಡುತ್ತಿದೆ. ಮಾಗಡಿ ತಾಲ್ಲೂಕಿನ ಕೆಂಪಾಪುರ(Kempapura)ವನ್ನು ವೀರಸಮಾಧಿ(Veera Samadhi) ತಾಣವನ್ನಾಗಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಐವತ್ತು ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರ ಬೆಂಗಳೂರು ವಿವಿ ಆವರಣದಲ್ಲಿ ತಲೆಎತ್ತಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ(D.V.Sadanand Gowda), ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್(K.Sudhakr), ಸಚಿವರಾದ ಆರ್.ಅಶೋಕ(R.Ashok),  ಎಸ್ ಟಿ ಸೋಮಶೇಖರ್(S.T.Somashekhar), ಮುನಿರತ್ನ(Muniratna), ನಾರಾಯಣಗೌಡ(NarayanGowda), ಗೋಪಾಲಯ್ಯ(Gopalaiah), ಸಂಸದರಾದ ಪಿ.ಸಿ.ಮೋಹನ್(P.C.Mohan), ಜಗ್ಗೇಶ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಎಸ್ ಆರ್ ವಿಶ್ವನಾಥ, ಎಲ್ ಎನ್ ನಾರಾಯಣಸ್ವಾಮಿ, ಅ.ದೇವೇಗೌಡ ಇದ್ದರು.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾ, ಪ್ರಾಧಿಕಾರದ ಆಯುಕ್ತ ಆರ್. ವಿನಯ್ ದೀಪ್ ಮುಂತಾದವರು ಉಪಸ್ಥಿತರಿದ್ದರು.

ಕೆಂಪೇಗೌಡರು ಎಂದರೇ ಒಗ್ಗಟ್ಟು, ಕೆಂಪೇಗೌಡರು ಎಂದರೇ ಪ್ರಗತಿ. ಕೆಂಪೇಗೌಡರ ಪ್ರತಿಮೆಗೆ Statue Of Prosperity, ಪ್ರಗತಿಯ ಪ್ರತಿಮೆ ಎಂದು ನಾಮಕರಣ ಮಾಡಲಾಗುವುದು.ನಾವೆಲ್ಲರೂ ಒಂದಾಗಿ ಕೆಂಪೇಗೌಡರ ಆಶಯದಂತೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯೊಣ. pic.twitter.com/dFN4qSxDjS

— Basavaraj S Bommai (@BSBommai)

 

ಥೀಮ್ ಪಾರ್ಕ್: ಕೆಂಪೇಗೌಡರ ಜೀವನ, ಸಾಧನೆ ಮತ್ತು ಭಾವೈಕ್ಯದ ಸಂದೇಶಗಳ ಪ್ರತಿಕೃತಿಯಾಗಲಿರುವ ಥೀಮ್ ಪಾರ್ಕ್ ಅಭಿವೃದ್ಧಿಗೆ 30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದು ಜಾಗತಿಕ ಮಟ್ಟದ ಪ್ರವಾಸಿ ಆಕರ್ಷಣೆಯ ತಾಣ ಆಗಲಿದೆ ಎಂದು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ವಿವರಿಸಿದರು.

ಒಟ್ಟು 23 ಎಕರೆ ಜಾಗದ ಪೈಕಿ ಮೊದಲ ಹಂತದಲ್ಲಿ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಥೀಮ್ ಪಾರ್ಕ್ ತಲೆಯೆತ್ತಲಿದೆ. ಇದಕ್ಕೆ ಮುಖ್ಯಮಂತ್ರಿಗಳು 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಇದು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಮುಂಭಾಗದಲ್ಲಿ ಮೈದಾಳಲಿದೆ ಎಂದು ಅವರು ಹೇಳಿದರು.

2ನೇ ಹಂತದ ಕಾಮಗಾರಿ ಒಂಬತ್ತು ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೆ ಉಳಿದ 10 ಕೋಟಿ ರೂಪಾಯಿ ವಿನಿಯೋಗಿಸ ಲಾಗುವುದು ಎಂದು ಅವರು ವಿವರಿಸಿದರು. ಇದರಲ್ಲಿ ಗುಣಮಟ್ಟದ ಆ್ಯಂಪಿ ಥಿಯೇಟರ್, ಪಾತ್ ವೇ, ಸುರಂಗ ನಿರ್ಮಾಣ, ಎವಿ ಎಕ್ಸಿಬಿಷನ್ ವ್ಯವಸ್ಥೆ,  ತ್ರೀ-ಡಿ ಪ್ರೊಜೆಕ್ಷನ್, ಚಕ್ರಾಕಾರದ ಕಾರಂಜಿ, ಹೂದೋಟ, ವಿಐಪಿ ಲಾಂಜ್, ಕಿಯೋಸ್ಕ್, ವಿಶ್ರಾಂತಿ ಕೊಠಡಿಗಳು, ಅತ್ಯುತ್ತಮ ಹಾಸುಗಲ್ಲುಗಳು, ಪೆವಿಲಿಯನ್ ಗಳು, ಕಾಂಕ್ರೀಟ್ ತಡೆಗೋಡೆ ಇರಲಿವೆ ಎಂದು ಅವರು ಮಾಹಿತಿ ನೀಡಿದರು.

Kempegowda Theme Park : ಎಲ್ಲ ಜಿಲ್ಲೆಗಳಿಂದ ಮಣ್ಣು ಪವಿತ್ರ ಮಣ್ಣು ಸಂಗ್ರಹಿಸಲು ತೀರ್ಮಾನ

ಬೆಂಗಳೂರನ್ನು ಐಟಿ-ಬಿಟಿ ನಗರದ ಜತೆಗೆ ಪರಂಪರೆಯೊಂದಿಗೆ ಬೆಸೆಯಬೇಕಾಗಿದೆ. ಈ ಥೀಮ್ ಪಾರ್ಕ್ ಮತ್ತು ಪ್ರತಿಮೆ ಸ್ಥಾಪನೆಯು ಅಂತಹ ಒಂದು ಉಪಕ್ರಮವಾಗಿದೆ. ವಿಶ್ವದ ಎಲ್ಲೆಡೆಯಿಂದ ಮತ್ತು ಭಾರತದ ನಾನಾ ಭಾಗಗಳಿಂದ ಬರುವವರಿಗೆ ಬೆಂಗಳೂರಿನಲ್ಲಿ ಇಳಿದ ಕೂಡಲೇ ಇದು ವಿಶಿಷ್ಟ ಅನುಭವ ಕೊಡುವಂತಹ ವಿಶಿಷ್ಟ ಪರಿಕಲ್ಪನೆ ಆಗಿದೆ 
-ಡಾ.ಸಿ.ಎನ್.ಅಶ್ವತ್ಥ್ ನಾರಾಯಣ,  ಉನ್ನತ ಶಿಕ್ಷಣ ಸಚಿವ

click me!