ಚಿತ್ರದುರ್ಗ ಮುರುಘಾ ಮಠ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೂಡಲೇ ಶ್ರೀಗಳನ್ನ ಅರೆಸ್ಟ್ ಮಾಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಇನ್ನು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪತ್ರ ಬರೆಯಲಾಗಿದೆ.
ಚಿತ್ರದುರ್ಗ, (ಸೆಪ್ಟೆಂಬರ್.01): ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಗಳು ಕೇಳಿಬಂದಿವೆ.
ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಗೆ ನೈಜ ಹೋರಾಟಗಾರರ ವೇದಿಕೆಯ ಹೆಚ್ಎಂ ವೆಂಕಟೇಶ್ ಪತ್ರ ಬರೆದಿದ್ದಾರೆ.
undefined
ಮುರುಘಾ ಶ್ರೀ ಪ್ರಕರಣ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ರಾಜಕಾರಣಿಗಳ ಹಸ್ತಕ್ಷೇಪ ಹಿನ್ನಲೆ ಪ್ರಕರಣ ಹಾದಿ ತಪ್ಪಿದೆ. ಹೀಗಾಗಿ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.ಅಲ್ಲದೇ ಪ್ರಕರಣ ಸಿಬಿಐಗೆ ವಹಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ವೆಂಕಟೇಶ್ ಅವರು ಬರೆದ ಪತ್ರ ಈ ಕೆಳಗಿನಂತಿದೆ ನೋಡಿ.
ಗೆ
ರಿಜಿಸ್ಟರ್ ಜನರಲ್
ಹೈ ಕೋರ್ಟ್ ಆಫ್ ಕರ್ನಾಟಕ
ಹೈಕೋರ್ಟ್ ಬೆಂಗಳೂರು ಇವರ ಮೂಲಕ
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಗಳು
ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ನಮಸ್ಕಾರಗಳು
ವಿಷಯ: ಚಿತ್ರದುರ್ಗ ಮುರುಗರಾಜೇಂದ್ರ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐದು ಜನರ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಾದ ಬಗ್ಗೆ
ಉಲ್ಲೇಖ : ಮೈಸೂರು ಕಮಿಷನರೇಟ್ ವ್ಯಾಪ್ತಿಯ ನಜರಾಬಾದ್ ಪೊಲೀಸ್ ಠಾಣೆಯ ಎಫ್ಐಆರ್ ಸಂಖ್ಯೆ 0155/22 ದಿನಾಂಕ 26/08/22
ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖದ ಅನ್ವಯ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲ ಮಾಡಿಕೊಂಡ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಾರ್ಥಮಿಕ ತನಿಖೆಯನ್ನು ಮಾಡದೆ ಪ್ರಕರಣವನ್ನು ಚಿತ್ರದುರ್ಗ ವ್ಯಾಪ್ತಿಗೆ ಬರುವುದೆಂದು ವರ್ಗಾಯಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜೂರುಪಡಿಸಿ CRPC164 ಹೇಳಿಕೆಯನ್ನು ಪಡೆದು ನಂತರ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾಗಿತ್ತು. ಆರೋಪಿಗಳು ಅತ್ಯಂತ ಪ್ರಭಾವವುಳ್ಳವರಾಗಿದ್ದ ಕಾರಣ ಪ್ರಾಥಮಿಕ ತನಿಖೆಯನ್ನು ಮಾಡದೆ ಪ್ರಕರಣವನ್ನು ವರ್ಗಾವಣೆಮಾಡಿ ಕೈ ತೊಳೆದುಕೊಂಡಿದ್ದಾರೆ.
ನಂತರ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ಮೈಸೂರಿನ CWS ಮತ್ತು ಮಕ್ಕಳ ರಕ್ಷಣೆಗಾಗಿಯೇ ಕಾರ್ಯನಿರ್ವಹಿಸುತ್ತಿರುವ ಒಡನಾಡಿ ಸಂಸ್ಥೆ ಯ ಮಹಿಳಾ ಆಪ್ತ ಸಮಾಲೋಚಕರೊಂದಿಗೆ ಚಿತ್ರದುರ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕರಣದ ಆರೋಪಿಯನ್ನು ಬಂಧಿಸದೆ, ಆರೋಪಿಯು ತಲೆ ಮರೆಸಿಕೊಳ್ಳಲು ಬೇರೆ ರಾಜ್ಯಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಗುರುತಿಸಿ ಹಿಡಿದು ವಾಪಸ್ ಚಿತ್ರದುರ್ಗದ ಮಠಕ್ಕೆ ಪೋಲಿಸ್ ರಕ್ಷಣೆಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಎಂಬ ಮಾಹಿತಿಯು ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗಿದೆ.
ದಿನಾಂಕ 26.08.22 ರಿಂದ ದಿನಾಂಕ29/08/22 ನೊಂದ ಬಾಲಕಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸದೆ, ಸಾರ್ವಜನಿಕರು ಧರಣಿ ಸತ್ಯಾಗ್ರಹ ಮಾಡಿದ ನಂತರ ದಿನಾಂಕ :30/08/22 ರಂದು164 ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಮಾಡಿಸಿರುತ್ತಾರೆ, ನೊಂದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿಸಿ ರಕ್ಷಣೆ ಒದಗಿಸುವುದಕ್ಕಿಂತಲೂ ಹೆಚ್ಚಾಗಿ ಆರೋಪಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿರುವುದು, ಮತ್ತು ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿಯವರು ಪ್ರಕರಣ ಕುರಿತು ಸರಣಿ ಸಭೆಯನ್ನು ನಡೆಸಿರುವುದು ಮತ್ತು ಮಠದ ಭಕ್ತರಿಗೆ ಮತ್ತು ಮಾಧ್ಯಮದವರೊಂದಿಗೂ ಮಾತನಾಡಿರುವುದನ್ನು ಪೊಲೀಸ್ ಸಿಬ್ಬಂದಿ ಎದುರಿಗೆ ನಡೆಯುತ್ತಿರುವುದನ್ನು ಮಾಧ್ಯಮದಲ್ಲಿ ನಾವು ನೋಡಿದ್ದೇವೆ.
ಪ್ರಕರಣಗಳು ತನಿಕಾ ಹಂತದಲ್ಲಿಯೇ ಆಡಳಿತ ನಡೆಸುತ್ತಿರುವ ಸರ್ಕಾರದ ಪ್ರತಿನಿಧಿಗಳಾದ ಗೃಹ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಹೇಳಿಕೆಗಳನ್ನು ನೀಡುತ್ತಿರುವುದು ನೋಡಿದರೆ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ನ್ಯಾಯ ಸಿಗುವುದು ತುಂಬಾ ಕಷ್ಟ ಎಂದೇ ನಾವು ಭಾವಿಸಿದ್ದೇವೆ. ಆದುದರಿಂದ ಆರೋಪಿಗಳು ಅತ್ಯಂತ ಪ್ರಭಾವಿ ಸ್ಥಾನದಲ್ಲಿ ಇರುವುದರಿಂದ ಪೊಲೀಸರು ಪ್ರಾಥಮಿಕ ಹಂತದ ತನಿಖೆ ಮಾಡುವುದರಲ್ಲಿ ಎಡವಿದ್ದಾರೆ. ಆರೋಪಿಗಳನ್ನು ಈವರೆಗೂ ಬಂಧಿಸದೇ ಇರುವುದು ಹಲವಾರು ಅನುಮಾನಗಳಿಗೆ ಎಡೆಯಾಗಿದೆ.
ಬಹಳ ಮುಖ್ಯವಾಗಿ ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಐಪಿಎಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯಾತಿ ಗಣ್ಯ ವ್ಯಕ್ತಿಗಳು ಮಠದೊಂದಿಗೆ ಮತ್ತು ಸ್ವಾಮೀಜಿಯೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದು. ಸ್ವಾಮೀಜಿಯವರು ಕೊಡುವ ಬಸವ ಶ್ರೀ ಪ್ರಶಸ್ತಿ,ಬಸವ ಭೂಷಣ ಪ್ರಶಸ್ತಿ ಗಳನ್ನು ಅಧಿಕಾರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು, ಹಾಗೂ ಮುಖ್ಯಮಂತ್ರಿಯಾದಿಯಾಗಿ ಆರೋಪಿ ಸ್ಥಾನದಲ್ಲಿರುವ ಶಿವಮೂರ್ತಿ ಮುರಘಶರಣರಿಂದ ಪಡೆದುಕೊಂಡಿದ್ದು, ತನಿಕೆಯಲ್ಲಿ ಇವರು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಆದುದರಿಂದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಲ್ಲಿ ನಮ್ಮ ವಿನಯ ಪೂರ್ವಕವಾದ ಮನವಿ ಏನೆಂದರೆ ಸದರಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಾಗೂ ಈ ಪ್ರಕರಣವನ್ನು ಸಿ ಬಿ ಐ ಗೆ ವಹಿಸಿ ಗೌರವಾನ್ವಿತ ನ್ಯಾಯಾಲಯವೆ ಇದರ ಮೇಲ್ವಿಚಾರಣೆ ಮಾಡುವ ಮೂಲಕ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಿರ್ವಹಿಸುವ ಅಪ್ರಾಪ್ತ ವಯಸ್ಸಿನ ದಲಿತ ಮತ್ತು ಹಿಂದುಳಿದ ವರ್ಗದ ಬಾಲಕಿಯರಿಗೆ ರಕ್ಷಣೆ ಮತ್ತು ನ್ಯಾಯ ದೊರಕಿಸಿ ಕೊಡಬೇಕೆಂದು ನಾವು ವಿನಮ್ರಪೂರ್ವಕವಾಗಿ ತಮ್ಮಲ್ಲಿ ಪ್ರಾರ್ಥಿಸುತ್ತಿದ್ದೇವೆ.
ಗೌರವ ಪೂರ್ವಕ ವಂದನೆಗಳೊಂದಿಗೆ
ತಮ್ಮ ವಿಧೇಯ
ಹೆಚ್ಎಂ ವೆಂಕಟೇಶ್
ನೈಜ ಹೋರಾಟಗಾರರ ವೇದಿಕೆ
ದಿನಾಂಕ: 31/08/22
ಬೆಂಗಳೂರು.
ಪ್ರತಿಯನ್ನು : ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಸರ್ವೋಚ್ಚ ನ್ಯಾಯಾಲಯ ಭಾರತ ಸರ್ಕಾರ ನವದೆಹಲಿ
ಪ್ರತಿಯನ್ನು : ಅಡ್ವಕೇಟ್ ಜನರಲ್ ಕರ್ನಾಟಕ ರಾಜ್ಯ ಸರ್ಕಾರ
ಪ್ರತಿಯನ್ನು : ಲೋಕಾಯುಕ್ತ ರು ಕರ್ನಾಟಕ ಲೋಕಾಯುಕ್ತ