ರಾತ್ರಿ ಕೆಲಸ - ಹಗಲು ಓದು : ಮೈನ್ಸ್‌ ಕಾರ್ಮಿಕ ಇದೀಗ ಲೆಕ್ಕ ಪರಿಶೋಧಕ..!

By Web DeskFirst Published Jan 28, 2019, 10:16 AM IST
Highlights

ಮೈನ್ಸ್‌ ಕಂಪನಿಯೊಂದರಲ್ಲಿ ಕಾರ್ಮಿಕನಾಗಿದ್ದ ಇದೀಗ ಲೆಕ್ಕಪರಿಶೋಧಕ! ಚಾರ್ಟ್‌ರ್ಡ್‌ ಅಕೌಂಟೆಂಟ್‌(ಸಿಎ) ಆಗಬೇಕು ಎಂಬ ತನ್ನ ಕನಸಿಗೆ ಅಡ್ಡಿಯಾದ ಕಿತ್ತು ತಿನ್ನುವ ಬಡತನವನ್ನು ಮೆಟ್ಟಿನಿಂತು ಕೊನೆಗೂ ತನ್ನ ಜೀವನದ ಧ್ಯೇಯ ಸಾಕಾರಗೊಳಿಸಿ ಕೊಂಡಿರುವ ಆಜೀಸಾಬ್‌ ಎಂಬ ಯುವಕನೋರ್ವನ ಯಶೋಗಾಥೆ.

ಬಳ್ಳಾರಿ :  ಸಾಧನೆಯ ತುಡಿತದ ಮುಂದೆ ಬಡತನವೂ ಬಡಕಲಾಗುತ್ತದೆ ಎಂಬುದಕ್ಕೆ ಸಂಡೂರಿನ ಈ ಯುವಕನ ಬದುಕೇ ಅದ್ಭುತ ನಿದರ್ಶನ. ಮೈನ್ಸ್‌ ಕಂಪನಿಯೊಂದರಲ್ಲಿ ಕಾರ್ಮಿಕನಾಗಿದ್ದ ಇದೀಗ ಲೆಕ್ಕಪರಿಶೋಧಕ! ಚಾರ್ಟ್‌ರ್ಡ್‌ ಅಕೌಂಟೆಂಟ್‌(ಸಿಎ) ಆಗಬೇಕು ಎಂಬ ತನ್ನ ಕನಸಿಗೆ ಅಡ್ಡಿಯಾದ ಕಿತ್ತು ತಿನ್ನುವ ಬಡತನವನ್ನು ಮೆಟ್ಟಿನಿಂತು ಕೊನೆಗೂ ತನ್ನ ಜೀವನದ ಧ್ಯೇಯ ಸಾಕಾರಗೊಳಿಸಿ ಕೊಂಡಿರುವ ಆಜೀಸಾಬ್‌ ಎಂಬ ಯುವಕನೋರ್ವನ ಯಶೋಗಾಥೆ ಇದು.

ಐದಾರು ದಿನಗಳ ಹಿಂದೆಯಷ್ಟೇ ಪ್ರಕಟವಾದ ಸಿಎ ಪರೀಕ್ಷೆ ಫಲಿತಾಂಶ ಅಜೀಸಾಬ್‌ ತೇರ್ಗಡೆ ಹೊಂದಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮೆರೆದಿದ್ದಾರೆ.

ಈ ಹಠವಾದಿ ಆಜೀಸಾಬ್‌ ಮೂಲತಃ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕನಕನಹಳ್ಳಿ ಗ್ರಾಮದ ನಿವಾಸಿ. ಆದರೆ, ಎಸ್ಸೆಸ್ಸೆಲ್ಸಿ ಪಾಸಾದ ಬಳಿಕ ನಿರಂತರವಾಗಿ ಕಾಡಿದ ಬರದಿಂದ ತತ್ತರಿಸಿ ಹೋದ ಕುಟುಂಬಕ್ಕೆ ಆಸರೆಯಾಗಲು ಬೆಂಗಳೂರಿಗೆ ತೆರಳಿ ಪೇಂಟರ್‌ ಒಬ್ಬರ ಬಳಿ ಎರಡು ವರ್ಷ ಕೆಲಸ ಮಾಡಿದರು. ಬಳಿಕ ಹೆಚ್ಚು ಕೂಲಿ ಸಿಗಬಹುದು ಎಂಬ ಕಾರಣಕ್ಕೆ ಗೆಳೆಯರೊಬ್ಬರ ಸಹಾಯದಿಂದ ಬಳ್ಳಾರಿ ಜಿಲ್ಲೆ ಸಂಡೂರಿಗೆ ಬಂದು ಕಂಪನಿಯೊಂದರಲ್ಲಿ ಎರಡು ವರ್ಷ ಹೆಲ್ಪರ್‌ ಕೆಲಸ ಮಾಡಿದರು. ಪಿಯುಸಿ ಪ್ರವೇಶ ಪಡೆದು ಪರೀಕ್ಷೆಯಲ್ಲೂ ಉತ್ತೀರ್ಣರಾದರು.

ಬೆಳಗ್ಗೆ ಕಾಲೇಜು, ರಾತ್ರಿ ಪಾಳಿ ಕೆಲಸ:

ಬಿಕಾಂ ಸೇರಿದ ಬಳಿಕ ರಾತ್ರಿಪಾಳಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಲೇಬರ್‌ ಕೆಲಸ ತೊರೆದು, ಸೆಕ್ಯೂರಿಟಿ ಗಾರ್ಡ್‌ ಆಗಿ ಸೇರಿಕೊಂಡರು. ಅವರ ಬಡತನ ಹಾಗೂ ಓದುವ ಆಸಕ್ತಿ ಕಂಡು ಕಾಲೇಜಿನವರೂ ಸಹಕಾರ ನೀಡಿದರು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ, ನಿರಂತರ ಅಧ್ಯಯನ, ಪರಿಶ್ರಮದಿಂದ ಉತ್ತಮ ಅಂಕ ಗಳಿಸಿ ಬಿಕಾಂ ಪದವಿ ಪಡೆದರು. ಏತನ್ಮಧ್ಯೆ ಬಳ್ಳಾರಿಯ ಲೆಕ್ಕಪರಿಶೋಧಕ ರಾಜಶೇಖರ್‌ ಅವರ ಸಂಪರ್ಕವಾಗಿ ತಾನು ಸಿಎ ಆಗಬೇಕೆಂಬ ಮನದಿಂಗಿತ ಬಿಚ್ಚಿಟ್ಟರು ಆಜೀಸಾಬ್‌. ಯುವಕನ ನೈಜ ಆಸಕ್ತಿ ಗುರುತಿಸಿದ ರಾಜಶೇಖರ್‌, ಓದಿಗೆ ಒಂದಷ್ಟುಆರ್ಥಿಕ ನೆರವು ಸೇರಿದಂತೆ ತೇರ್ಗಡೆಯಾಗಲು ಮಾರ್ಗದರ್ಶನ ನೀಡುತ್ತಾರೆ. 2013ರಲ್ಲಿ ಸಿಎ ಪರೀಕ್ಷೆ ಎದುರಿಸಿದ ಆಜೀಸಾಬ್‌ ಮೊದಲು ಹಾಗೂ ಎರಡನೇ ಬಾರಿಗೆ ಅನುತ್ತೀರ್ಣಗೊಂಡರೂ, ಮೂರನೇ ಯತ್ನದಲ್ಲಿ ಉತ್ತೀರ್ಣಗೊಂಡು ಕೊನೆಗೂ ತಮ್ಮ ಸಿಎ ಆಗಬೇಕು ಎಂಬ ಗುರಿ ಸೇರಿದ್ದಾರೆ.

ಓದಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಕಂಡುಕೊಂಡಿದ್ದೇನೆ. ಒಂದೆಡೆ ಕೆಲಸ ಮಾಡುತ್ತಲೇ ಓದಿ ಸಿಎ ಆಗಬೇಕು ಎಂಬ ಕನಸು ನನಸಾಗಿಸಿಕೊಂಡಿದ್ದೇನೆ. ಎಲ್ಲ ಬಡ ವಿದ್ಯಾರ್ಥಿಗಳಿಗೂ ಇದು ಸಾಧ್ಯವಿದೆ.

ಆಜೀಸಾಬ್‌, ಸಿಎ ಪರೀಕ್ಷೆ ಉತ್ತೀರ್ಣಗೊಂಡ ಯುವಕ

ವರದಿ :  ಕೆ.ಎಂ. ಮಂಜುನಾಥ

click me!