
ಮಂಗಳೂರು ಜೈಲಿನಲ್ಲಿ ಹೈಡ್ರಾಮಾ! ಗುದದ್ವಾರದಲ್ಲೇ ಮೊಬೈಲ್ ಬಚ್ಚಿಟ್ಟಿದ್ದ ಕೈದಿ ಅಂದರ್!
ಮಂಗಳೂರು (ಮೇ.1) ಮಂಗಳೂರಿನ ಜಿಲ್ಲಾ ಕಾರಾಗೃಹದ ಮುಖ್ಯದ್ವಾರ. ಅಲ್ಲಿ ಭದ್ರತೆ ಎಂದರೆ ಉಕ್ಕಿನ ಕೋಟೆ ಇದ್ದಂತೆ. ಆದರೆ, ಆ ಕೋಟೆಯನ್ನೇ ಭೇದಿಸಲು ಕೈದಿಯೊಬ್ಬ ಮಾಡಿದ್ದ ಸ್ಕೆಚ್ ಕೇಳಿದರೆ ನೀವೂ ಬೆಚ್ಚಿಬೀಳ್ತೀರಾ! ಮೊಬೈಲ್ ಫೋನನ್ನು ಗುದದ್ವಾರದೊಳಗೆ ಬಚ್ಚಿಟ್ಟು ಜೈಲಿಗೆ ತರಲು ಹೋಗಿ ಆತ ಈಗ ಸಿಕ್ಕಿಬಿದ್ದಿದ್ದಾನೆ.
ಮೊಹಮ್ಮದ್ ತೋಹಿದ್ ಎಂಬ ಈ ಕೈದಿ ಕೇವಲ ಆರೋಪಿ ಮಾತ್ರವಲ್ಲ, ಭಲೇ ಕಿಲಾಡಿ ಕೂಡ ಹೌದು. ಏಪ್ರಿಲ್ 24ರಂದು ಅನಾರೋಗ್ಯದ ಕಾರಣದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಈತ, ಅಲ್ಲಿಂದ ಜೈಲಿಗೆ ಮರಳುವಾಗ ಬರಿಗೈಲಿ ಬರಲಿಲ್ಲ. ಜೈಲಿನ ಕಣ್ತಪ್ಪಿಸಿ ಹೊರಗಿನವರ ಸಂಪರ್ಕ ಸಾಧಿಸಲು ತನ್ನ ಗುದದ್ವಾರವನ್ನೇ ಗೋಡೌನ್ ಮಾಡಿಕೊಂಡಿದ್ದ ಆಸಾಮಿ!
ಏಪ್ರಿಲ್ 29ರ ಸಂಜೆ 5.15ರ ಸುಮಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತೋಹಿದ್ ಜೈಲಿನ ಗೇಟ್ ಬಳಿ ಬಂದಿದ್ದ. ಕರ್ತವ್ಯದಲ್ಲಿದ್ದ ಕೆಎಸ್ ಐಎಸ್‌ಎಫ್ ಸಿಬ್ಬಂದಿ ವಾಡಿಕೆಯಂತೆ ಮೆಟಲ್ ಡಿಟೆಕ್ಟರ್ ಹಿಡಿದು ತಪಾಸಣೆ ನಡೆಸುತ್ತಿದ್ದರು. ತೋಹಿದ್ ಮುಖದಲ್ಲಿ ಕಿಂಚಿತ್ತೂ ಭಯವಿರಲಿಲ್ಲ. ಆದರೆ, ಡಿಟೆಕ್ಟರ್ ಯಂತ್ರ ಆತನ ಗುದದ್ವಾರದ ಬಳಿ ಹೋಗುತ್ತಿದ್ದಂತೆ ಜೋರಾಗಿ 'ಬೀಪ್' ಸೌಂಡ್ ಮಾಡಲಾರಂಭಿಸಿತು!
ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ!
ಯಂತ್ರ ಕೂಗುತ್ತಿದ್ದಂತೆ ಸಿಬ್ಬಂದಿಗೆ ಅನುಮಾನ ಶುರುವಾಯಿತು. ಏನಿದೆ ಅಲ್ಲಿ? ಎಂದು ದಬಾಯಿಸಿ ವಿಚಾರಿಸಿದಾಗ ತೋಹಿದ್ ಬೆದರಿ ಸತ್ಯ ಬಾಯ ಬಿಟ್ಟಿದ್ದಾನೆ. "ಸಾರ್.. ಒಳಗಡೆ ಮೊಬೈಲ್ ಇದೆ" ಎಂದು ಆತ ಒಪ್ಪಿಕೊಂಡಾಗ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ.
ವೈದ್ಯರ ಕಾರ್ಯಾಚರಣೆ, ಪೊಲೀಸರ ಬಿಸಿ!*
ಜೈಲು ಅಧಿಕಾರಿಗಳು ತಕ್ಷಣ ಆತನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಹರಸಾಹಸ ಪಟ್ಟು ಆತನ ದೇಹದೊಳಗಿದ್ದ ಕೀ-ಪ್ಯಾಡ್ ಮೊಬೈಲನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಬರ್ಕೆ ಪೊಲೀಸರು ಈ 'ಕಿಲಾಡಿ' ಕೈದಿಯ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿದ್ದು, ಜೈಲಿನೊಳಗೆ ನೆಟ್‌ವರ್ಕ್ ಬೆಳೆಸಲು ಹೋದವನು ಈಗ ಲಾಕಪ್‌ನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ