
ಮಂಗಳೂರು (ಜೂ.19): ದೇಶದಲ್ಲೇ ಅತೀ ದೊಡ್ಡ ಭೂಗತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸ್ಥಾವರವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಈ ಭೂಗತ ಸುರಂಗದಲ್ಲಿ 80 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಅನಿಲವನ್ನು ಸಂಗ್ರಹಿಸುವುದು ಸಾಧ್ಯವಾಗಲಿದೆ.
ಭೂಗತ ಸಂಗ್ರಹ ವ್ಯವಸ್ಥೆಯ ಸುರಕ್ಷತೆ ಪರಿಶೀಲನೆಗಾಗಿ ಕಳೆದ ಮೇ 9ರಿಂದ ಜೂನ್ 6 ರವರೆಗೆ ನಡೆದ ಕ್ಯಾವರ್ನ್ ಆಕ್ಸೆಪ್ಟೆನ್ಸ್ ಟೆಸ್ಟ್-ಕ್ಯಾಟ್ ಕುರಿತು ಕಾಮಗಾರಿ ವಹಿಸಿರುವ ಮೇಘಾ ಎಂಜಿನಿಯರಿಂಗ್‌ನ ತಜ್ಞರು ತಿಳಿಸಿದ್ದು, ಯಾವುದೇ ತುರ್ತು ಸನ್ನಿವೇಶಗಳಲ್ಲಿ ದೇಶಕ್ಕೆ ಬೇಕಾದ ಅನಿಲ ಬೇಡಿಕೆಯನ್ನು ಈಡೇರಿಸಲು ಈ ಹೊಸ ಸೌಲಭ್ಯ ನೆರವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಮಂಗಳೂರಿನಲ್ಲಿ ಇದನ್ನು ಸ್ಥಾಪಿಸಿದೆ. ವಿಶಾಖಪಟ್ಟಣಂನಲ್ಲಿ ಕೂಡಾ ಇದೇ ರೀತಿಯ ಭೂಗತ ಸಂಗ್ರಹಣಾಗಾರವಿದೆ ಎಂದಿದ್ದಾರೆ.
ಈಗಾಗಲೇ ಮಂಗಳೂರಿನ ಪೆರ್ಮುದೆ (1.5 ಲಕ್ಷ ಮೆಟ್ರಿಕ್ ಟನ್) ಹಾಗೂ ಪಾದೂರಿನಲ್ಲಿ (2.5 ಲಕ್ಷ ಮೆಟ್ರಿಕ್ ಟನ್) ಭೂಗತ ತೈಲ ಸಂಗ್ರಹಣಾಗಾರಗಳಿವೆ. ಇದು 3ನೇ ಭೂಗತ ಸುರಂಗವಾಗಿದ್ದು, ಇದರಲ್ಲಿ ಎಲ್‌ಪಿಜಿ ಸಂಗ್ರಹಿಸಲಾಗುವುದು. ಸದ್ಯ ವಿಶಾಖಪಟ್ಟಣಂನಲ್ಲಿ ನಿರ್ಮಿಸಿರುವ ಎಲ್‌ಪಿಜಿ ಸಂಗ್ರಹಣಾಗಾರಕ್ಕೆ 60 ಸಾವಿರ ಟನ್ ಸಾಮರ್ಥ್ಯವಿದ್ದು. ಮಂಗಳೂರಿನದ್ದು 80 ಸಾವಿರ ಮೆಗಾಟನ್ ಸಾಮರ್ಥ್ಯದ ಮೂಲಕ ದೇಶದಲ್ಲೇ ಅತಿ ದೊಡ್ಡದಾಗಿದೆ.
₹800 ಕೋಟಿ ವೆಚ್ಚ: 2018ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಮುಂದಾಗಿದ್ದು, 2019 ರಿಂದ ಕಾಮಗಾರಿ ಆರಂಭಿಸಲಾಗಿದೆ. ನೆಲದಿಂದ 500 ಮೀಟರ್‌ನಷ್ಟುಆಳದಲ್ಲಿ ದೊಡ್ಡ ಕಲ್ಲನ್ನು ಕೊರೆದು ಸುರಂಗ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ₹800 ಕೋಟಿ ವೆಚ್ಚ ಮಾಡಲಾಗಿದೆ. ಈ ಸಂಗ್ರಹಣಾಗಾರಕ್ಕೆ ಸಮುದ್ರದಲ್ಲಿರುವ ತೇಲು ಜೆಟ್ಟಿ ಮೂಲಕ ಮುಂದಿನ ದಿನಗಳಲ್ಲಿ ಅನಿಲವನ್ನು ಪಂಪಿಂಗ್ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಪೈಪ್‌ಲೈನ್ ನಿರ್ಮಾಣವೂ ಪೂರ್ಣಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ