Breaking: ಕನ್ನಡದ ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ

By Sathish Kumar KH  |  First Published Dec 16, 2024, 7:29 PM IST

ಪದ್ಮಶ್ರೀ ಪುರಸ್ಕೃತೆ, ಪರಿಸರ ಪ್ರೇಮಿ ತುಳಸಿ ಗೌಡ (86) ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ 30,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದ್ದರು.


ಉತ್ತರಕನ್ನಡ (ಡಿ.16): ಭಾರತದಲ್ಲಿ ಸಾಲು ಮರದ ತಿಮ್ಮಕ್ಕ ಅವರಂತೆಯೇ ಪರಿಸರ ಪ್ರೇಮಿ ಎಂದೇ ಖ್ಯಾತರಾಗಿರುವ ಕನ್ನಡ ನಾಡಿನ ತುಳಸಿ ಗೌಡ ಅವರು ಸ್ವಗೃಹದಲ್ಲಿ ಸೋಮವಾರ ನಿಧನರಾಗಿದ್ದಾರೆ.

ಭಾರತದ ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ (86) ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಸಂಜೆ ವೇಳೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು  ಬೆಳಸಿ ಪರಿಸರ ಪ್ರೇಮಿ ಎಂದೇ ಖ್ಯಾತವಾಗಿದ್ದರು.

ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಮೆಚ್ಚಿ ಭಾರತ ಸರ್ಕಾದರದಿಂದ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವಿಕರಿಸಿದ್ದರು. ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

click me!