* ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿರುವ ಆದಾಯಮಿತಿ ಹೆಚ್ಚಳ
* ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ
* ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದ ವಸತಿ ಸಚಿವ ವಿ.ಸೋಮಣ್ಣ
ಬೆಂಗಳೂರು, (ಮಾ.14): ಕರ್ನಾಟಕದ ವಿವಿಧ ವಸತಿ ಯೋಜನೆಗಳಲ್ಲಿ (Housing Schemes) ಫಲಾನುಭವಿಗಳನ್ನು ಆಯ್ಕೆಗೆ ನಿಗದಿಪಡಿಸಿರುವ ಆದಾಯಮಿತಿ ಪ್ರಮಾಣವನ್ನು ಹೆಚ್ಚಳ ಮಾಡಿ ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.
ಶಾಸಕ ಸಿ.ಟಿ.ರವಿ (CT Ravi) ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯ ಮಿತಿಯನ್ನು 32 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಇನ್ನು ಮುಂದೆ ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಪ್ರಕಟಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟು ಜಾರಿ: ಸಚಿವ Prabhu Chauhan
ಬಜೆಟ್ ಮೇಲೆ ಉತ್ತರ ಕೊಡುವಾಗಿ ಸಿಎಂ ಬೊಮ್ಮಾಯಿ ಅವರು ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ ಆದಾಯ ಮಿತಿ ಪ್ರಮಾಣ ಹೆಚ್ಚಳ ಮಾಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈವರೆಗೂ ನಾವು ಗ್ರಾಮೀಣ ಭಾಗಗಳಲ್ಲಿ 32 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರ ರೂ. ಆದಾಯ ಮಿತಿಯನ್ನು ನೀಡಿದ್ದೆವು. ಮಾನದಂಡದ ಪ್ರಕಾರವಾಗಿ ನಿಗದಿಪಡಿಸಲಾಗಿತ್ತು ಎಂದು ಸಚಿವ ಸೋಮಣ್ಣ ಸಮರ್ಥಿಸಿಕೊಂಡರು.
ಈ ವೇಳೆ ಸಭಾಧ್ಯಕ್ಷರು ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟುಬಿಡಿ. ಈಗ ನಡೆಯುತ್ತಿರುವುದು ಅದೇ ತಾನೆ. ಸುಳ್ಳು ದಾಖಲೆಗಳನ್ನು ಕೊಟ್ಟರೆ ಸಾಕು ಫಲಾನುಭವಿಗಳನ್ನು ಹೇಗೋ ಆಯ್ಕೆ ಮಾಡುತ್ತಾರೆ. ಈಗ ಅದೇ ತಾನೆ ನಡೆಯುತ್ತಿರುವುದು ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ರಮೇಶ್‍ಕುಮಾರ್ ಪ್ರವೇಶಿಸಿ, ಈ ಹಿಂದೆಯೂ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ಆದಾಯ ಮಿತಿ ಹೆಚ್ಚಳ ಮಾಡಬೇಕೆಂದು ಚರ್ಚಿಸಲಾಗಿತ್ತು. ಸರ್ಕಾರ ಪರಿಶೀಲನೆ ಮಾಡುತ್ತದೆ ಎಂದು ಹೇಳಿದರೆ ಹೇಗೆ? ಒಂದು ಆದಾಯ ಮಿತಿ ಪ್ರಮಾಣವನ್ನು ಕಡಿಮೆಯಾದರೂ ಮಾಡಿ ಇಲ್ಲವೇ ಹೆಚ್ಚಳವಾದರೂ ಮಾಡಿ. ಸರ್ಕಾರ ಇಷ್ಟು ನಿಗದಿಪಡಿಸಿದರೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆಗ ಸೋಮಣ್ಣನವರು, ಇದು ನಾವು ನಿಗದಿಪಡಿಸಿಲ್ಲ. ಹಿಂದಿನ ಸರ್ಕಾರಗಳೇ ನಿಗದಿಪಡಿಸಿವೆ ಎಂದಾಗ ಬೇಸರಗೊಂಡ ಸ್ಪೀಕರ್, ನಿಮ್ಮ ಸರ್ಕಾರ ಬಂದು ಎರಡು ವರ್ಷವಾಗಿದೆ. ಇನ್ನು ಪರಿಶೀಲನೆ ಮಾಡಲಾಗುವುದು ಎಂದರೆ ಹೇಗೆ ಇದಕ್ಕೆ ಏನಾದರೂ ಮಾಡಿ ಇತ್ಯರ್ಥಪಡಿಸಿ. ಆದಾಯ ಮಿತಿಯನ್ನು ನಿಗದಿಪಡಿಸುವುದು ಕಂದಾಯ ಇಲಾಖೆ ಅಕಾರಿಗಳು. ಸಚಿವ ಅಶೋಕ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಲಹೆ ಮಾಡಿದರು.
ಈ ಹಂತದಲ್ಲಿ ಸಿ.ಟಿ.ರವಿ ಅವರು, ಗ್ರಾಮೀಣ ಭಾಗಗಳ ಫಲಾನುಭವಿಗಳಿಗೆ 1.20 ಲಕ್ಷ, ನಗರ ಪ್ರದೇಶಗಳಿಗೆ 3 ಲಕ್ಷ ಆದಾಯ ಮಿತಿ ಏಕೆ? ಎಲ್ಲರಿಗೂ ಒಂದೇ ಮಾನದಂಡ ಮಾಡಿ ಎಂದು ಒತ್ತಾಯಿಸಿದರು. ಆಗ ಸೋಮಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ನಾವು ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಕೆಲವು ಮಾನದಂಡಗಳನ್ನು ಅನುಸರಿಬೇಕು. ನಾನು ಶಾಸಕರ, ಎಲ್ಲರ ಅಭಿಪ್ರಾಯವನ್ನು ಗಮನಿಸಿದ್ದೇನೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯ ವರ್ಗದವರಿಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮಾನದಂಡವಿದೆ. ಇದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ಮುಖ್ಯಮಂತ್ರಿಗಳು ಬಜೆಟ್ ಮೇಲೆ ಉತ್ತರಿಸುವಾಗ ಇದಕ್ಕೆ ಸಂಕ್ಷಿಪ್ತವಾದ ಉತ್ತರ ನೀಡುತ್ತಾರೆ. ನಾನು ಕೂಡ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದೇನೆ. ಒಂದು ವಾರದೊಳಗೆ ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು.