
ಬೆಂಗಳೂರು(ಸೆ.03): ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) ತನ್ನ ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ‘ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ’ (ಎಫ್‌ಪಿಪಿಸಿಎ) ಹೆಸರಿನಲ್ಲಿ ಮತ್ತೊಂದು ವಿದ್ಯುತ್ ಶುಲ್ಕ ಹೆಚ್ಚಳ ಶಾಕ್ ನೀಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಎಫ್‌ಪಿಪಿಸಿಎ ಶುಲ್ಕವನ್ನು 50 ಪೈಸೆ ಬದಲಿಗೆ 1.15 ರು.ಗೆ ಹೆಚ್ಚಳ ಮಾಡಿ ಆದೇಶ ಮಾಡಿದೆ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ಶುಲ್ಕ ಹೆಚ್ಚಳದಿಂದ ಯಾವುದೇ ಹೊರೆಯಾಗುವುದಿಲ್ಲ. ಆದರೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಲ್ಲದ ಬಳಕೆದಾರರು ಹಾಗೂ ವಾಣಿಜ್ಯ ಬಳಕೆದಾರರಿಗೆ ಮತ್ತೆ ಬರೆ ಎಳೆದಂತಾಗಲಿದೆ.
Gruhajyoti scheme: ಮೊದಲ ದಿನವೇ 5 ಲಕ್ಷ ಫಲಾನುಭವಿಗಳಿಗೆ ಬೆಸ್ಕಾಂ ಶೂನ್ಯ ಬಿಲ್!
64 ಪೈಸೆಯಷ್ಟು ಹೆಚ್ಚುವರಿ ಶುಲ್ಕ:
ಅದರಂತೆ, ಸೆಪ್ಟೆಂಬರ್ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರು ವಿದ್ಯುತ್ ಶುಲ್ಕದ ಜತೆಗೆ 51 ಪೈಸೆ ಮಾತ್ರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿತ್ತು. ಇದೀಗ ಬೆಸ್ಕಾಂ ಕಂಪೆನಿಯು ತಿಂಗಳವಾರು ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಿದ್ದು, ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಲ್ಲಿ 27 ಪೈಸೆ, ಜೂನ್ ತಿಂಗಳಲ್ಲಿ 9 ಪೈಸೆ ಹಾಗೂ ಜುಲೈ ತಿಂಗಳಲ್ಲಿ 28 ಪೈಸೆ ಸೇರಿ 64 ಪೈಸೆಯಷ್ಟುಹೆಚ್ಚು ವಿದ್ಯುತ್ ಖರೀದಿ ವೆಚ್ಚ ತಗುಲಿರುವುದಾಗಿ ಹೇಳಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಬಳಕೆಯ ವಿದ್ಯುತ್ ಶುಲ್ಕದ ಜತೆಗೆ ಒಟ್ಟು 115 ಪೈಸೆ (1.15 ರು.) ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಸಂಗ್ರಹಿಸುವುದಾಗಿ ತಿಳಿಸಿದೆ. ಈ ಆದೇಶವು ಸೆಪ್ಟೆಂಬರ್ ತಿಂಗಳ ವಿದ್ಯುತ್ ಬಿಲ್‌ಗೆ ಸೀಮಿತವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಶುಲ್ಕ ಹೆಚ್ಚಳ ಆದೇಶ?
ಕೆಇಆರ್‌ಸಿಯ ಆದೇಶದಂತೆ 2023ರ ಜನವರಿಯಿಂದ ಮಾ.31ರವರೆಗಿನ ವಿದ್ಯುತ್ ಖರೀದಿ ವೆಚ್ಚದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು ಯುನಿಟ್‌ಗೆ 101 ಪೈಸೆಯಂತೆ ಇಂಧನ ಹೊಂದಾಣಿಕೆ ವೆಚ್ಚದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲು ಬೆಸ್ಕಾಂಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ತಿಂಗಳು 101 ಪೈಸೆ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಮೂರು ತಿಂಗಳ ಅವಧಿಯಲ್ಲಿ ಸಂಗ್ರಹಿಸಬೇಕಾಗಿದ್ದ ಶುಲ್ಕವನ್ನು ಆರು ತಿಂಗಳಿಗೆ ಹಂಚಿಕೆ ಮಾಡಲಾಗಿತ್ತು. ಇದರಡಿ ಬೆಸ್ಕಾಂ ಜುಲೈನಿಂದ ಸೆಪ್ಟೆಂಬರ್‌ವರೆಗೆ ಯುನಿಟ್‌ಗೆ 51 ಪೈಸೆ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಯುನಿಟ್‌ಗೆ 50 ಪೈಸೆಯಂತೆ ಎರಡು ತ್ರೈಮಾಸಿಕಗಳಲ್ಲಿ ತಲಾ ಅರ್ಧದಷ್ಟು ಶುಲ್ಕ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ