
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಸೆ.03): ಮೂರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕೆನರಾ ಬ್ಯಾಂಕ್‌ನಲ್ಲಿ ಅಡಮಾನವಿಟ್ಟ 130.41 ಕೋಟಿ ರು. ಮೌಲ್ಯದ ಭತ್ತ ಅಕ್ರಮ ಮಾರಾಟ ಪ್ರಕರಣ ಕುರಿತು ಕೇಂದ್ರ ತನಿಖಾ ದಳದ (ಸಿಬಿಐ) ತನಿಖೆಗೆ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಶಿಫಾರಸು ಮಾಡಿದೆ.
ಈ ಸಂಬಂಧ ಸಿಬಿಐಗೆ ಪತ್ರ ಬರೆದಿರುವುದನ್ನು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದು, ಸಿಬಿಐ ನಿರ್ಧಾರದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಿಬಿಐ ತನಿಖೆಗೆ ಸ್ವೀಕರಿಸದೆ ಹೋದರೆ ತಾನೇ ತನಿಖೆ ಮುಂದುವರೆಸಲು ಸಹ ಸಿಐಡಿ ತೀರ್ಮಾನಿಸಿದೆ.
ಹುನಗುಂದ: ಪ್ರಾಂಶುಪಾಲರ ಆತ್ಮಹತ್ಯೆ, ಉನ್ನತ ತನಿಖೆಗೆ ಆಗ್ರಹ
ಸಿಂಧನೂರು ತಾಲೂಕಿನ ಉಗ್ರಾಣಗಳಲ್ಲಿ ದಾಸ್ತಾನು ಮಾಡಿದ್ದ ಭತ್ತಕ್ಕೆ ಸಾಲ ಪಡೆದಿದ್ದ ಸುಮಾರು 494 ಮಂದಿ, ಬಳಿಕ ಬ್ಯಾಂಕ್‌ಗೆ ಮಾಹಿತಿ ನೀಡದೆ ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದರು. ಈ ಬಗ್ಗೆ ರಾಯಚೂರಿನ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ (ಪ್ರಾದೇಶಿಕ) ಸತ್ಯಪ್ರಕಾಶ್ ಸಿಂಗ್ ದೂರು ನೀಡಿದ ದೂರಿನ ಮೇರೆಗೆ ರಾಯಚೂರು ಜಿಲ್ಲೆ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರವು ರಾಯಚೂರಿನ ಭತ್ತ ಅಕ್ರಮ ಮಾರಾಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ನಿರ್ಧಾರ ತೆಗೆದುಕೊಂಡಿತು. ಅಂತೆಯೇ ಎರಡು ವಾರಗಳ ಹಿಂದೆ ಪ್ರಕರಣವು ಸಿಐಡಿಗೆ ವರ್ಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ತನಿಖೆಗೆ ಶಿಫಾರಸು ಏಕೆ:
ಬ್ಯಾಂಕಿಂಗ್ ಹಣಕಾಸು ಅವ್ಯವಹಾರ ಸಂಬಂಧ 100 ಕೋಟಿ ರು.ಗಿಂತ ಮಿಗಿಲಾದ ಮೊತ್ತದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಅದರನ್ವಯ ಸಿಂಧನೂರು ತಾಲೂಕಿನ 130.41 ಕೋಟಿ ರು. ಮೌಲ್ಯದ ಅಡಮಾನವಿಟ್ಟ ಭತ್ತ ಮಾರಾಟ ಪ್ರಕರಣವನ್ನು ಕೂಡಾ ಸಿಬಿಐಗೆ ತನಿಖೆ ವಹಿಸುವಂತೆ ಶಿಫಾರಸು ಮಾಡಿ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿ ದಾಸ್ತಾನು ತೋರಿಸಿ ಕೋಟಿ ಸಾಲ:
ರೈತರಿಗೆ ಕೃಷಿ ಸರಕಿನ ಆಧಾರದ ಮೇಲೆ ದಾಸ್ತಾನು ಅಡಮಾನ ಸಾಲವನ್ನು ಕೆನರಾ ಬ್ಯಾಂಕ್ ನೀಡುತ್ತದೆ. ಈ ತರಹದ ಸಾಲಗಳ ಪ್ರಕ್ರಿಯೆಯಲ್ಲಿ ಬ್ಯಾಂಕ್ ನಿಯಮಗಳಡಿಯಲ್ಲಿ ಕಾರ್ಯನಿರ್ವಹಿಸುವ ವೇರ್‌ಹೌಸ್‌ಗಳು ಹಾಗೂ ರೂರಲ್ ಗೋಡಾನ್‌ಗಳನ್ನೊಳಗೊಂಡ ನಿಗದಿತ ಖಾಸಗಿ ವೇರ್‌ಹೌಸ್ ಯುನಿಟ್‌ಗಳು (ಇಪಿಎಸ್‌ಯು) ಕೃಷಿ ಸರಕಿನ ಗುಣಮಟ್ಟ, ಪ್ರಮಾಣ ಹಾಗೂ ಭದ್ರತೆಯ ಮಾಹಿತಿ ನೀಡುವ ಹೊಣೆ ಹೊತ್ತಿರುತ್ತವೆ. ಅಂತೆಯೇ ವೇರ್‌ಹೌಸ್ ರಸೀತಿಗಳ ಆಧಾರದ ಮೇಲೆ ಕೃಷಿ ಸರಕನ್ನು ಅಡಮಾನವಾಗಿಟ್ಟುಕೊಂಡು ಸಂಬಂಧಪಟ್ಟಕೃಷಿ ಸರಕಿನ ವ್ಯಕ್ತಿಗಳಿಗೆ ದಾಸ್ತಾನು ಅಡಮಾನ ಸಾಲ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕವಿತಾಳ, ಬಳಗಾನೂರು, ಮಸ್ಕಿ ಹಾಗೂ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 81 ಖಾಸಗಿ ವೇರ್‌ಹೌಸಗಳು ನೀಡಿದ ವೇರ್ ಹೌಸ್ ರಿಸಿಪ್‌್ಟ(ಡಬ್ಲ್ಯುಆರ್) ಆಧರಿಸಿ ಕೃಷಿ ಸರಕಿನ ಅಡಮಾನದ ಮೇಲೆ ಕೆನರಾ ಬ್ಯಾಂಕಿನಲ್ಲಿ 494 ಸಾಲಗಾರರು ಒಟ್ಟು 130.41 ಕೋಟಿ ಸಾಲ ಪಡೆದಿದ್ದರು. ಆದರೆ ಈ ಸಾಲವನ್ನು ಮರು ಪಾವತಿಸದೆ ಅಡಮಾನದ ದಾಸ್ತಾನಿನ ಜವಾಬ್ದಾರಿ ಹೊಂದಿದ್ದ ಖಾಸಗಿ ವೇರ್‌ಹೌಸ್‌ಗಳು ಹಾಗೂ ಸಂಬಂಧಪಟ್ಟ ಸಾಲಗಾರರು ಸೇರಿಕೊಂಡು ಅಕ್ರಮವಾಗಿ ಅಡಮಾವಿಟ್ಟಿದ್ದ ಭತ್ತವನ್ನು ಮಾರಾಟ ಮಾಡಿದ್ದರು. ಇದರಿಂದ ಬ್ಯಾಂಕಿಗೆ 185.31 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಕೆನರಾ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ (ಪ್ರಾದೇಶಿಕ) ಸತ್ಯಪ್ರಕಾಶ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ