ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ ಮತ್ತು ಭಾರತೀಯ ವಿಚಾರವಂತರು ಧ್ವನಿ ಎತ್ತಬೇಕು ಎಂದು ಡಾ. ಅನಿರ್ಬನ್ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 2,010 ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಮತ್ತು ದುರ್ಗಾ ಪೂಜೆಗಳು ಕಡಿಮೆಯಾಗಿವೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಡಿ.12): ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ವಿಚಾರದಲ್ಲಿ ಭಾರತದ ವಿಚಾರವಂತರು ಧ್ವನಿ ಎತ್ತದಿದ್ದರೆ, ಅಲ್ಲಿನ ಹಿಂದೂಗಳ ಮೇಲಿನ ಅಕ್ರಮಣ, ಹಿಂಸಾಚಾರ ಹೆಚ್ಚಾಗಲಿದೆ ಎಂದು ನವದೆಹಲಿಯ ಡಾ.ಶಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಶನ್‌ನ ಅಧ್ಯಕ್ಷ ಡಾ. ಅನಿರ್ಬನ್ ಗಂಗೂಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಥನ ಬೆಂಗಳೂರು ವತಿಯಿಂದ ಬುಧವಾರ ಸಂಜೆ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬಾಂಗ್ಲಾದೇಶದಲ್ಲಿನ ಹಿಂದೂಗಳು: ವರ್ತಮಾನದ ಸ್ಥಿತಿಗತಿ, ಸವಾಲುಗಳು ಮತ್ತು ಮುಂದಿನ ಹಾದಿ’ ವಿಷಯದ ಕುರಿತು ಸಂವಾದ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಂಗ್ಲಾದ ಹಿಂದೂಗಳ ಮೇಲಿನ ದಾಳಿ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ಹಿಂದೂಗಳ ಮೇಲಿನ ಆಕ್ರಮಣ, ಹಿಂಸಾಚಾರ ಹೆಚ್ಚಾಗಲಿದೆ. ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ. ಅವರೀಗ ಭಾರತೀಯರು ನೆರವಿನ ಅಗತ್ಯವಿದೆ ಎಂದರು.
ಬಾಂಗ್ಲಾದಲ್ಲಿ ಇತ್ತೀಚಿಗೆ ಅಲ್ಪಸಂಖ್ಯಾತರ ಮೇಲೆ 2,010ಕ್ಕಿಂತ ಹೆಚ್ಚು ಆಕ್ರಮಣಗಳು ನಡೆದಿವೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಹಿಂದೂ ಉಪ ಕುಲಪತಿಗಳು, ಶಾಲಾ ಶಿಕ್ಷಕರು ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ ಮಾಡೋದ್ರಲ್ಲಿ ಏನರ್ಥ ಇದೆ? ರಾಮನಾಥ್ ರೈ
ಬಾಂಗ್ಲಾದಲ್ಲಿ ಇತ್ತೀಚೆಗೆ ಶೇ.9.5 ಹಿಂದೂಗಳ ಪ್ರಮಾಣ ಇಳಿಕೆಯಾಗಿದೆ. ಬಂಗಾಳದಲ್ಲಿ ದುರ್ಗಾ ಪೂಜಾ ಎಂಬುದು ವಿಶೇಷವಾಗಿದ್ದು, ಇಲ್ಲಿನ ಹಿಂದೂಗಳ ಧಾರ್ಮಿಕ ಆಚರಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಂಗ್ಲಾದಲ್ಲಿ 1,500 ದುರ್ಗಾ ಪೂಜೆಗಳು ಕಡಿಮೆಯಾಗಿದೆ. ಅಲ್ಲಿನ ಹಲವು ಶಿಕ್ಷಣ ಸಂಸ್ಥೆ ಗಳು ಇಸ್ಲಾಂ ಮೂಲಭೂತವಾದ ಬೋಧನೆಗಳತ್ತ ವಾಲುತ್ತಿವೆ. ಅಲ್ಲಿರುವ ಹಲವು ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳಾಗುತ್ತಿವೆ. ಅಲ್ಲಿನ ಬುಡಕಟ್ಟು ಗ್ರಾಮಗಳ ಮೇಲೆ ದಾಳಿ ನಡೆಸಿ ಅವರ ಜಾಗ ವಶಪಡಿಸಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಇನ್ನಾದರೂ ಧ್ವನಿ ಎತ್ತಿ ಅಲ್ಲಿನ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ ಎಂದು ಹೇಳಿದರು.
ಭಾರತದಿಂದ ಬಾಂಗ್ಲಾದೇಶಕ್ಕೆ ಹೇರಳವಾಗಿ ವಿದ್ಯುತ್ ಸೇರಿದಂತೆ ಹಲವು ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಿಚಾರಗಳನ್ನು ಇಟ್ಟುಕೊಂಡು ನಿಯಂತ್ರಣ ಹೇರಬಹುದಾಗಿದೆ ಎಂದರು.
ದೇಶದಲ್ಲಿನ ದಂಗೆಯಿಂದ ಅಧಿಕಾರ ಕಳೆದುಕೊಂಡ ವಿಶ್ವದ ಪ್ರಮುಖ ನಾಯಕರು
ಈ ವೇಳೆ ಮಂಥನ ಕರ್ನಾಟಕ ಸಂಸ್ಥೆಯ ದೇವದಾಸ್ ಬಾಳಿಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ.ಎಂ.ಜಯಪ್ರಕಾಶ್ ಸೇರಿದಂತೆ ಮೊದಲಾದವರಿದ್ದರು. ಕಾರ್ಯಕ್ರಮ ಪ್ರಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.