ಅಂಬರೀಶ್ ಅವರ ಕನಸು, ಗುರಿ, ಉದ್ದೇಶಗಳನ್ನು ಸಾಕಾರಗೊಳಿಸುವ ಸಲುವಾಗಿ ಡಾ. ಅಂಬರೀಶ್ ಫೌಂಡೇಷನ್ ಚಾರಿಟಿ ಟ್ರಸ್ಟ್‌ನ್ನು ಲೋಕಾರ್ಪಣೆ ಮಾಡಿದ್ದೇವೆ. ಆ ಮೂಲಕ ಜನಮುಖಿ ಹಾಗೂ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಮಂಡ್ಯ (ನ.25): ಅಂಬರೀಶ್ ಅವರ ಕನಸು, ಗುರಿ, ಉದ್ದೇಶಗಳನ್ನು ಸಾಕಾರಗೊಳಿಸುವ ಸಲುವಾಗಿ ಡಾ. ಅಂಬರೀಶ್ ಫೌಂಡೇಷನ್ ಚಾರಿಟಿ ಟ್ರಸ್ಟ್‌ನ್ನು ಲೋಕಾರ್ಪಣೆ ಮಾಡಿದ್ದೇವೆ. ಆ ಮೂಲಕ ಜನಮುಖಿ ಹಾಗೂ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ನಗರದ ಸಂಜಯ ಚಿತ್ರಮಂದಿರದ ಆವರಣದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿ ಸಂಘದ ವತಿಯಿಂದ ಅಂಬರೀಶ್ ಅವರ ಸಂಸ್ಮರಣೆ, ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ನಟಿಸಿರುವ ಬ್ಯಾಡ್ ಮ್ಯಾನರ್ಸ್ ಚಿತ್ರ ವೀಕ್ಷಿಸಿ ಮಾತನಾಡಿದರು.
ಅಂಬರೀಶ್ ಅವರು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅವರಿಗೆ ಬಹಳಷ್ಟು ಕನಸುಗಳು, ಆಸೆಗಳು ಇದ್ದವು. ಅವುಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಅಂಬರೀಶ್ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಧ್ಯೇಯದೊಂದಿಗೆ ಟ್ರಸ್ಟ್‌ನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು. ಈ ಟ್ರಸ್ಟ್‌ನ್ನು ಮಂಡ್ಯದಲ್ಲೇ ಲೋಕಾರ್ಪಣೆ ಮಾಡಬೇಕು ಎಂಬುದು ನಮ್ಮ ಆಸೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಟ್ರಸ್ಟ್ ಮೂಲಕ ಸಾಧಕರನ್ನು ಸನ್ಮಾನಿಸುವ ಮೂಲಕ ಟ್ರಸ್ಟ್‌ನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು.
ರೈತರು ಕಾವೇರಿ ಹೋರಾಟ ಕೈಬಿಡಿ: ಸಚಿವ ಚಲುವರಾಯಸ್ವಾಮಿ
ಅಂಬರೀಶ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅವರು ಮಾಡಿರುವಂತಹ ಕಾರ್ಯಗಳು ನಮ್ಮ ನಡುವೆ ಜೀವಂತವಾಗಿದೆ. ಅವುಗಳ ಮೂಲಕ ಅವರೂ ಸಹ ಜೀವಂತವಾಗಿದ್ದಾರೆ. ಅಂಬರೀಶ್ ಜೀವಿತಾವಧಿಯಲ್ಲಿ ಗಳಿಸಿರುವ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಎಂದೆಂದಿಗೂ ಶಾಶ್ವತವಾಗಿದೆ. ಅಭಿಮಾನಿಗಳು ಅವರಿಗೆ ಗೌರವದಿಂದ ಕಲಿಯುಗ ಕರ್ಣ ಎಂದು ಬಿರುದು ನೀಡಿದ್ದಾರೆ. ಅದಕ್ಕೆ ಅವರು ಎಂದಿಗೂ ಅಪವಾದವಾಗದ ರೀತಿಯಲ್ಲಿ ನಡೆದುಕೊಂಡಿದ್ದಾರೆ . ಜಿಲ್ಲೆ ಸೇರಿದಂತೆ ರಾಜ್ಯದಲ್ಲೆಡೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ನಾನು ಎಲ್ಲಿ ಹೋದರೂ ನೆನೆಯುವಂತಹ ಸ್ಥಿತಿಯನ್ನು ನಾನು ನೋಡಿದ್ದೇನೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರಸಿಂಗ್ ಧೋನಿ ಅವರ ಪೋಷಕರು ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸುತ್ತಿದ್ದುದ್ದನ್ನು ನೋಡಿದ ಅಂಬರೀಶ್ ಅವರು, ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಕ್ರಿಕೆಟ್ ಮಂಡಳಿಯವರನ್ನು ಸಂಪರ್ಕಿಸಿ ಧೋನಿ ಅವರಿಗೆ ೨ ಲಕ್ಷ ರು. ಚೆಕ್ ನೀಡಿ ಪ್ರೋತ್ಸಾಹಿಸಿದರು. ಇಂತಹ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ ಎಂದು ಹೇಳಿದರು. ಅಂಬರೀಶ್ ಅವರ ವಿರೋಧಿಗಳೂ ಸಹ ನಮ್ಮ ಮನೆಗೆ ಬಂದು ಸಹಾಯ, ಸಹಕಾರ ಕೇಳಿದರೆ ಒಮ್ಮೆಯೂ ಅವರು ಇಲ್ಲ ಎಂದಿಲ್ಲ. ಒಳ್ಳೆಯವರು, ಕೆಟ್ಟವರು ಎಂಬ ಭೇದ ಭಾವವಿಲ್ಲದೆ ಸಹಾಯ ಮಾಡುತ್ತಿದ್ದರು ಎಂದು ನೆನೆಸಿಕೊಂಡರು.
ಅಂಬರೀಶ್ ಅವರು ನಡೆದ ಹಾದಿಯಲ್ಲೇ ನಾವೂ ನಡೆಯಬೇಕೆಂಬ ಉದ್ದೇಶದಿಂದ ಡಾ.ಅಂಬರೀಶ್ ಫೌಂಡೇಷನ್ ಚಾರಿಟಿ ಟ್ರಸ್ಟ್ ಸ್ಥಾಪಿಸಿದ್ದು, ಆ ಮೂಲಕ ಒಂದಷ್ಟು ಸಮಾಜ ಸೇವೆ ಮಾಡಲು ನಿರ್ಧರಿಸಿದ್ದೇವೆ. ಅದರಂತೆ ಖ್ಯಾತ ವೈದ್ಯ ಡಾ. ಶಂಕರೇಗೌಡ, ಮಮತೆಯ ಮಡಿಲು ಅರುಣಕುಮಾರಿ, ಕ್ರೀಡಾಪಟು ಶಿಲ್ಪ ಅವರಿಗೆ ತಲಾ ೫೦ ಸಾವಿರ ರು. ಪುರಸ್ಕಾರ ನೀಡಿ ಗೌರವಿಸಿದ್ದೇವೆ. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ನಡೆಸುವುದಾಗಿ ತಿಳಿಸಿದರು.
ಖ್ಯಾತ ಚರ್ಮರೋಗ ತಜ್ಞ ಡಾ. ಶಂಕರೇಗೌಡ ಮಾತನಾಡಿ, ಪ್ರಸ್ತುತ ರಾಜಕಾರಣಿದಲ್ಲಿ ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಅಂಬರೀಶ್ ಅವರು ಸಾಧನೆ ಮಾಡಿದ್ದಾರೆ. ಆದ್ದರಿಂದಲೇ ಅವರು ಜನಮಾನಸದಲ್ಲಿ ಉಳಿಯಲು ಸಾಧ್ಯವಾಗಿದೆ. ತಮ್ಮನ್ನು ಗೌರವಿಸಿ ನೀಡಿರುವ ೫೦ ಸಾವಿರ ರು. ನಗದು ಪುರಸ್ಕಾರವನ್ನು ಮುನ್ಸಿಪಲ್ ಶಾಲೆಯ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದರು.
ಎಂಪಿ ಚುನಾವಣೆವರೆಗೂ ಸರ್ಕಾರದ ಜಾತಿಗಣತಿ ನಾಟಕ: ಎಚ್‌ಡಿಕೆ
ಚಿತ್ರನಟರಾದ ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, ಮುಖಂಡರಾದ ಮದನ್, ಹನಕೆರೆ ಶಶಿಕುಮಾರ್, ಬಿ.ವಿವೇಕಾನಂದ, ಅರವಿಂದ್ ಇತರರರಿದ್ದರು. ಇದಕ್ಕೂ ಮುನ್ನ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಸಂಜಯ ಚಿತ್ರಮಂದಿರದವರೆಗೆ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರ ಭಾವಚಿತ್ರಗಳನ್ನು ಜಾನಪದ ಕಲಾವಿದರ ಮೆರವಣಿಗೆ ನಡೆಯಿತು.