ರೈತರು ಕಾವೇರಿ ಹೋರಾಟ ಕೈಬಿಡಿ: ಸಚಿವ ಚಲುವರಾಯಸ್ವಾಮಿ

Published : Nov 25, 2023, 08:43 PM IST
ರೈತರು ಕಾವೇರಿ ಹೋರಾಟ ಕೈಬಿಡಿ: ಸಚಿವ ಚಲುವರಾಯಸ್ವಾಮಿ

ಸಾರಾಂಶ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿಯನ್ನು ಕೈಬಿಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಮದ್ದೂರು (ನ.25): ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿಯನ್ನು ಕೈಬಿಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. ತಾಲೂಕಿನ ಸಾದೊಳಲು ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, 38 ದಿನಗಳವರೆಗೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಜಲಸಂಪನ್ಮೂಲ ಸಚಿವರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಜಲಾಶಯಗಳಲ್ಲಿ ನೀರು ಇದ್ದರೆ ತಾನೇ ಬಿಡೋಕೆ ಸಾಧ್ಯ. 

ನೀರಿನ ಪರಿಸ್ಥಿತಿ ಏನು ಇದೆ ಎನ್ನುವುದನ್ನೂ ನೋಡಬೇಕಿದೆ. ನಮ್ಮಲ್ಲಿ ನೀರು ಇದ್ದರೆ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಬೆಳೆಗೆ ನೀರು ಕೊಟ್ಟಿದ್ದೇವೆ. ಸದ್ಯಕ್ಕೆ ಕುಡಿಯಲು ಮಾತ್ರ ನೀರು ಇದೆ. ವಾಸ್ತವ ಪರಿಸ್ಥಿತಿಯನ್ನು ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರ ನಡುವೆಯೂ ನೀರು ಹರಿಸುವಂತೆ ಶಿಫಾರಸು ಮಾಡಿದರೆ ನೀರು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನೀರಿನ ಸಂಕಷ್ಟದ ನಡುವೆಯೂ ಕೆರೆಗಳನ್ನು ತುಂಬಿಸುವ, ಬೆಳೆಗಳಿಗೆ ನೀರು ಹರಿಸುವ ಮೂಲಕ ರೈತರ ಸಂಕಷ್ಟಕ್ಕೆ ಸಾಧ್ಯವಾದಷ್ಟು ಸ್ಪಂದಿಸಿದ್ದೇವೆ. ರೈತರ ಹಿತ ಕಾಪಾಡುವುದಕ್ಕೂ ಬದ್ಧರಾಗಿದ್ದೇವೆ. ಅದಕ್ಕಾಗಿ ರೈತರು ಕೂಡಲೇ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.

ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಪ್ರಕರಣ ಸಿಐಡಿಗೆ ವರ್ಗಾಯಿಸಿ ಎಡಿಜಿಪಿ ಆದೇಶ

ಕಾಂಗ್ರೆಸ್‌ನಿಂದ ಸೂಕ್ತ ಅಭ್ಯರ್ಥಿ ಕಣಕ್ಕೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಯಾರನ್ನಾದರೂ ನಿಲ್ಲಿಸಲಿ, ಕಾಂಗ್ರೆಸ್ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಅವರ ಪಕ್ಷದವರು ಆಯ್ಕೆ ಮಾಡುತ್ತಾರೆ. ಅವರು ಯಾರನ್ನಾದರೂ ಕಣಕ್ಕಿಳಿಸಬಹುದು ಎಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸಾಧ್ಯತೆ ಕುರಿತ ಪ್ರಶ್ನೆಗೆ ಬಗ್ಗೆ ಪ್ರತಿಕ್ರಿಯಿಸಿದರು. ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇರುವುದರಿಂದ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಕ್ಷೇತ್ರ ಬಿಟ್ಟುಕೊಡಬಹುದು. 

ಹಾಗಾಗಿ ಅವರು ಯಾರನ್ನು ಬೇಕಾದರೂ ಅಭ್ಯರ್ಥಿ ಮಾಡಬಹುದು. ಕಾಂಗ್ರೆಸ್ ಕೂಡ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಆದರೆ, ನನ್ನ ಪತ್ನಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಿಯೂ ಇಲ್ಲ, ಆ ಬಗ್ಗೆ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂಪಡೆದಿರುವುದು ಸರ್ಕಾರದ ತೀರ್ಮಾನ. ಈ ಹಿಂದಿನ ಸರ್ಕಾರ ಹೆಚ್ಚುವರಿಯಾಗಿ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಕಾನೂನು ತೊಡಕಿರುವ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಯದ್ದೇ ಅಂತಿಮ ನಿರ್ಧಾರ: ಜಾತಿ ಗಣತಿ ಸಂಬಂಧ ಒಕ್ಕಲಿಗೆ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಸಮುದಾಯದವರು ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ ಎಂದು ದೂರಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಗೆ ನಾವೂ ಹೋಗಿದ್ದೆವು. ಜಾತಿಗಣತಿ ವರದಿ ಕುರಿತಂತೆ ಸ್ವಾಮೀಜಿಯವರೂ ಕಳವಳ ವ್ಯಕ್ತಪಡಿಸಿದರು. ಸಮುದಾಯದ ಆಕ್ಷೇಪದ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಈ ವಿಷಯವಾಗಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸುರೇಶ್‌ಗೌಡ ಪಾಪದ ಹುಡುಗ: ಮಾಜಿ ಶಾಸಕ ಸುರೇಶ್‌ಗೌಡ ಅವರಿಗೆ ಜ್ಞಾನವೂ ಇಲ್ಲ, ಬುದ್ದಿವಂತಿಕೆಯೂ ಇಲ್ಲ. ಅವನೊಬ್ಬ ಪಾಪದ ಹುಡುಗ. ಅವನು ಏನೇನೋ ಮಾತಾಡುತ್ತಾನೆ. ಅದಕ್ಕೆಲ್ಲಾ ಉತ್ತರ ಕೊಡಲಾಗುವುದಿಲ್ಲ. ಆತನ ಬಗ್ಗೆ ನನ್ನನ್ನು ಏನೂ ಕೇಳಬೇಡಿ ಎಂದು ಖಾರವಾಗಿ ಹೇಳಿದರು.

ಎಂಪಿ ಚುನಾವಣೆವರೆಗೂ ಸರ್ಕಾರದ ಜಾತಿಗಣತಿ ನಾಟಕ: ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿ, ನಾನು ನನ್ನ ಸಂಸ್ಕಾರ ಮತ್ತು ನಾಲಿಗೆ ಹಾಳು ಮಾಡಿಕೊಳ್ಳುವುದಿಲ್ಲ. ಬಿಡದಿಯಲ್ಲಿ ಜಮೀನು ಎಷ್ಟು ಒತ್ತುವರಿಯಾಗಿದೆ ಎಂದು ಕುಮಾರಸ್ವಾಮಿ ಮೊದಲು ವಿವರ ಕೊಡಲಿ. ಚಲುವರಾಯಸ್ವಾಮಿ ಜಮೀನು ಎಲ್ಲೆಲ್ಲಿ ಇದೆ ಎಂದು ಏಜೆನ್ಸಿ ಬಿಟ್ಟು ಹುಡುಕಿಸುತ್ತಿದ್ದಾರೆ. ಅವರಿಗೆ ನನ್ನ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಸಹಿಸಲು ಆಗುತ್ತಿಲ್ಲ. ನನಗೂ ಅವರ ವೇದನೆ ನೋಡಿ ಅಯ್ಯೋ ಅನ್ನಿಸುತ್ತದೆ. ಬಾಯಿ ಬಂದ ಹಾಗೆ ಎಲ್ಲರ ಬಗ್ಗೆ ಲಘುವಾಗಿ ಮಾತನಾಡಬಾರದು. ಮುಖ್ಯಮಂತ್ರಿ ಆದವರು, ದೇಶ ಆಳ್ವಿಕೆ ಮಾಡಿದ ಕುಟುಂಬದವರು ಆಡುವ ಮಾತು ಹಿಡಿತದಲ್ಲಿರಬೇಕು ಎಂದು ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Bengaluru - ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ