ರಾಜ್ಯದಲ್ಲಿ 482 ಕೊರೋನಾ ಕೇಸ್‌ ಹೈರಿಸ್ಕ್‌, ಹೆಚ್ಚಿದ ಆತಂಕ!

By Kannadaprabha NewsFirst Published Jun 22, 2020, 7:50 AM IST
Highlights

ರಾಜ್ಯದಲ್ಲಿ 482 ಕೊರೋನಾ ಕೇಸ್‌ ಹೈರಿಸ್ಕ್‌, ಹೆಚ್ಚಿದ ಆತಂಕ| - ಈತನಕ ಮೃತಪಟ್ಟಿರುವ 137ರಲ್ಲಿ ಹೆಚ್ಚಿನವರು ಹೈರಿಸ್ಕ್‌ ರೋಗಿಗಳು| 77 ಮಂದಿ ಐಸಿಯುನಲ್ಲಿ, 12 ಮಂದಿ ವೆಂಟಿಲೇಟರ್‌ನಲ್ಲಿ

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಜೂ.22): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದರ ನಡುವೆಯೇ 3,391 ಸಕ್ರಿಯ ಸೋಂಕಿತರ ಪೈಕಿ 482 ಮಂದಿ ಹೈರಿಸ್ಕ್‌ನಲ್ಲಿರುವುದಾಗಿ ವಾರ್‌ ರೂಂ ವಿಶ್ಲೇಷಣೆಯಲ್ಲಿ ಬಹಿರಂಗಗೊಂಡಿದೆ. ಪ್ರಸ್ತುತ ಮೃತಪಟ್ಟಿರುವ 137 ಮಂದಿಯಲ್ಲಿ ಬಹುತೇಕ ಸೋಂಕಿತರು ಹೈರಿಸ್ಕ್‌ನವರಾಗಿದ್ದು, ಹೈರಿಸ್ಕ್‌ ಸೋಂಕಿತರ ಸಂಖ್ಯೆ ಏರಿಕೆಯಾಗಿ ಆತಂಕ ಸೃಷ್ಟಿಸಿದೆ.

ಈ ಪೈಕಿ 77 ಮಂದಿ ಐಸಿಯುನಲ್ಲಿದ್ದು, 12 ಮಂದಿ ವೆಂಟಿಲೇಟರ್‌ ವ್ಯವಸ್ಥೆಯಲ್ಲಿದ್ದಾರೆ. ಭಾನುವಾರ 453 ಮಂದಿಗೆ ಸೋಂಕು ದೃಢಪಟ್ಟಿದ್ದು, ಹೈರಿಸ್ಕ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಈವರೆಗೆ ಮೃತಪಟ್ಟಿರುವ ಶೇ.72ರಷ್ಟು(100) ಮಂದಿ 50 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘಕಾಲೀನ ಸಮಸ್ಯೆಯಿಂದ ಬಳಲುತ್ತಿದ್ದವರು. ರಾಜ್ಯದಲ್ಲಿ ಐಎಲ್‌ಐ, ಸಾರಿ ಹಿನ್ನೆಲೆಯಿಂದ ಸೋಂಕಿತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪೈಕಿ 50 ವರ್ಷ ಮೇಲ್ಪಟ್ಟವಯಸ್ಸಿನ ವೃದ್ಧರು ಹಾಗೂ ಹೃದಯ ಸಮಸ್ಯೆ, ತೀವ್ರ ಉಸಿರಾಟ ಸಮಸ್ಯೆ, ಕಿಡ್ನಿ ಸಮಸ್ಯೆ, ಎಚ್‌ಐವಿ ಸೋಂಕಿನಂತಹ ದೀರ್ಘಕಾಲೀನ ಗಂಭೀರ ಕಾಯಿಲೆಗಳನ್ನು ಹೊಂದಿರುವವರನ್ನು ಹೈರಿಸ್ಕ್‌ ಪ್ರಕರಣಗಳೆಂದು ಪರಿಗಣಿಸಲಾಗುತ್ತಿದೆ. ಶನಿವಾರದವರೆಗೆ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ 482 ಮಂದಿ ಹೈರಿಸ್ಕ್‌ ಸೋಂಕಿತರನ್ನು ಪಟ್ಟಿಮಾಡಿರುವುದಾಗಿ ಕೊರೋನಾ ವಾರ್‌ ರೂಂನ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಕೊರೋನಾಕ್ಕೆ ಮತ್ತೊಂದು ಔಷಧ, ಸರ್ಕಾರದಿಂದಲೂ ಸಮ್ಮತಿ: ಬೆಲೆ ಎಷ್ಟು?

50 ವರ್ಷ ಮೇಲ್ಪಟ್ಟವರ 100 ಸಾವು:

ಪ್ರಸ್ತುತ ರಾಜ್ಯದಲ್ಲಿ ಉಂಟಾಗಿರುವ 137 ಸೋಂಕಿತರ ಸಾವಿನಲ್ಲಿ ಬರೋಬ್ಬರಿ 100 ಮಂದಿ 50 ವರ್ಷ ಮೇಲ್ಪಟ್ಟವರು. ಜತೆಗೆ ಕೊರೋನಾ ಸೋಂಕಿನೊಂದಿಗೆ ಅನ್ಯ ದೀರ್ಘಕಾಲೀನ ಸಮಸ್ಯೆಯುಳ್ಳವರು. ಸಾವಿನ ಸಮಯದಲ್ಲಿ ಇವರಲ್ಲಿ ಶೇ.80ರಷ್ಟುಮಂದಿಗೆ ಮಧುಮೇಹ ಪ್ರಮಾಣ 400 ದಾಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 70 ವರ್ಷ ಮೇಲ್ಪಟ್ಟ23 ಮಂದಿ, 60-70 ವರ್ಷದ 43 ಮಂದಿ, 50-60 ವರ್ಷದ 34 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ 40ರಿಂದ - 50 ವಯಸ್ಸಿನ 21, 30ರಿಂದ 40 ವರ್ಷದ 10, 20-30 ವರ್ಷದವರಲ್ಲಿ 6 ಸಾವು ಉಂಟಾಗಿದ್ದು, 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಅಗತ್ಯ ವ್ಯವಸ್ಥೆ ಮಾಡಲಾಗಿದೆ:

ಹೈರಿಸ್ಕ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಸಾವನ್ನಪ್ಪಿರುವ ಪ್ರಕರಣದಲ್ಲಿ 6 ಮಂದಿ ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದಾರೆ. ಜತೆಗೆ ತುಂಬಾ ವಿಳಂಬವಾಗಿ ಕರೆತರುವ ಮೂಲಕ ಆಸ್ಪತ್ರೆಗೆ ದಾಖಲಾದ ತಕ್ಷಣ ಮರಣ ಹೊಂದುವಂತಾಗುತ್ತಿದೆ. ಹೀಗಾಗಿ ಹಿರಿಯ ವಯಸ್ಕರು, ದೀರ್ಘಕಾಲೀನ ಸಮಸ್ಯೆಯುಳ್ಳವರು, ಐಎಲ್‌ಐ, ಉಸಿರಾಟದ ಸಮಸ್ಯೆ ಲಕ್ಷಣ ಉಳ್ಳವರನ್ನು ತ್ವರಿತವಾಗಿ ಫೀವರ್‌ ಕ್ಲಿನಿಕ್‌ಗೆ ಕರೆತಂದು ಪರೀಕ್ಷೆಗೆ ಒಳಪಡಿಸಬೇಕು. ತ್ವರಿತವಾಗಿ ಆಸ್ಪತ್ರೆಗೆ ಕರೆತಂದರೆ ಸೂಕ್ತ ಚಿಕಿತ್ಸೆ ನೀಡಬಹುದು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ಹೇಳುತ್ತಾರೆ.

ದೇಶದಲ್ಲಿ ದಾಖಲೆಯ 18840 ಜನಕ್ಕೆ ಕೊರೋನಾ, 404 ಮಂದಿ ಸಾವು!

ಇನ್ನು ರಾಜ್ಯದಲ್ಲಿ 983 ವೆಂಟಿಲೇಟರ್‌, 2002 ಐಸಿಯು, 6,584 ಆಕ್ಸಿಜನ್‌ ವ್ಯವಸ್ಥೆಯುಳ್ಳ ಹಾಸಿಗೆ ವ್ಯವಸ್ಥೆ ಇದೆ. ಈ ಪೈಕಿ ಶೇ.1.21ರಷ್ಟುಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಹೈರಿಸ್ಕ್‌ ಪ್ರಕರಣಗಳನ್ನು ನಿಭಾಯಿಸಲು ನಮ್ಮಲ್ಲಿ ವ್ಯವಸ್ಥೆಯಿದ್ದು, ತ್ವರಿತವಾಗಿ ಕರೆತಂದರೆ ಸೂಕ್ತ ಚಿಕಿತ್ಸೆ ನೀಡಬಹುದು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಅವರು ಹೇಳಿದರು.

click me!