Mahadayi Dispute: 1 ವರ್ಷದಲ್ಲಿ ಮಹದಾಯಿ ಜಾರಿ: ಕಾರಜೋಳ ಶಪಥ

By Kannadaprabha News  |  First Published Jan 3, 2023, 8:04 AM IST

ಕಳಸಾ-ಬಂಡೂರಿ ನಾಲಾ ಯೋಜನೆಗೆ ಒಂದು ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಒಂದು ವರ್ಷದೊಳಗಾಗಿ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ. ಇಲ್ಲದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.


ಬೆಂಗಳೂರು/ಬೆಳಗಾವಿ (ಜ.3) : ‘ಕಳಸಾ-ಬಂಡೂರಿ ನಾಲಾ ಯೋಜನೆ(Kalasa-banuri project)ಗೆ ಒಂದು ತಿಂಗಳಲ್ಲಿ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಒಂದು ವರ್ಷದೊಳಗಾಗಿ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ. ಇಲ್ಲದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದೇ ವೇಳೆ, ‘ಅಧಿಕಾರ ಸಿಕ್ಕಾಗ ಮಹದಾಯಿ ಯೋಜನೆ ಬಗ್ಗೆ ಕಾಂಗ್ರೆಸ್‌(Congress) ಗಮನ ನೀಡಲಿಲ್ಲ. ಯೋಜನೆಗೆ ಆಗ್ರಹಿಸಿದವರ ಮೇಲೆ ದಬ್ಬಾಳಿಕೆ ಮಾಡಿ ಹಿರಿಯರು, ಮಹಿಳೆಯರು ಎನ್ನದೆ ಲಾಠಿ ಚಾಜ್‌ರ್‍ ಮಾಡಿಸಿ ಚಿತ್ರಹಿಂಸೆ ಮಾಡಿದರು. ಅಂತಹವರು ಮಹದಾಯಿ ಯೋಜನೆ(Mahadayi project)ಗಾಗಿ ಜನಾಂದೋಲನ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದ್ದಾರೆ.

Tap to resize

Latest Videos

ಮಹದಾಯಿ: ಗೋವಾ ಮೂಲದ ಕೇಂದ್ರ ಸಚಿವ ರಾಜೀನಾಮೆ ಬೆದರಿಕೆ

ಸೋಮವಾರ ಬೆಂಗಳೂರಿನ ವಿಧಾನಸೌಧ(Vidhanasoudha)ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ(Central Water Power Commission)ವು ಹಸಿರು ನಿಶಾನೆ ತೋರಿದೆ. ದಿನಾಂಕ ಇಲ್ಲ, ಸಹಿ ಇಲ್ಲ ಎಂದು ಸುಳ್ಳು ಮಾಹಿತಿ ಹರಡುವ ಪ್ರಯತ್ನವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಪರಿಷ್ಕೃತ ಯೋಜನಾ ವರದಿಗೆ ಅನುಮೋದನೆ ದೊರಕಿದ್ದು, ಇದರಲ್ಲಿ ನಾವು ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಶತಾಯಗತಾಯ ಒಂದು ವರ್ಷದಲ್ಲಿ ಹುಬ್ಬಳ್ಳಿ-ಧಾರವಾಡ(Hubballi Dharwad) ನಗರಗಳಿಗೆ ಕುಡಿಯುವ ನೀರು ಪೂರೈಸುತ್ತೇವೆ ಎಂದು ಸ್ಪಷ್ಟಪಡಿಸಿದರು.

80ರ ದಶಕದಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಒಪ್ಪಿಗೆ ದೊರೆತಿರಲಿಲ್ಲ. ಬಳಿಕ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಯೋಜನೆಗೆ ಪೂರಕವಾಗಿ ಯಾವೊಂದು ಕ್ರಮವನ್ನೂ ಕೈಗೊಳ್ಳಲಿಲ್ಲ. ಸೋನಿಯಾಗಾಂಧಿ ಗೋವಾದಲ್ಲಿ ನಿಂತು ಕರ್ನಾಟಕಕ್ಕೆ ಮಹದಾಯಿಯಿಂದ ಒಂದು ಹನಿ ನೀರೂ ನೀಡಲ್ಲ ಎಂದಿದ್ದರು. ಆಗ ಬಾಯಿ ಮುಚ್ಚಿಕೊಂಡು ಇದ್ದವರು ಇಂದು ಹೋರಾಟ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಅಲ್ಲವೇ ಎಂದು ಪ್ರಶ್ನಿಸಿದರು.

2018 ಆಗಸ್ಟ್‌ ತಿಂಗಳಲ್ಲಿ ಗೋವಾಗೆ 24 ಟಿಎಂಸಿ, ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರಿಗೆ ಮಹದಾಯಿ ನ್ಯಾಯಾಧಿಕರಣ ಒಪ್ಪಿಗೆ ನೀಡಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸೀಮಿತ ಪ್ರದೇಶಗಳಿಗೆ 3.90 ಟಿಎಂಸಿ ಕುಡಿಯುವ ನೀರಿನ ಬಳಕೆಗೆ ಸಲ್ಲಿಸಿದ್ದ ಪರಿಷ್ಕೃತ ಯೋಜನಾ ವರದಿಗೆ ಇದೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಇದರಲ್ಲಿ ಅನಗತ್ಯ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಎಚ್‌.ಕೆ. ಪಾಟೀಲ್‌ ಬಾಯಲ್ಲಿ ಕಡುಬು ಇಟ್ಕೊಂಡಿದ್ದರಾ?:

ಬೆಳಗಾವಿ ನಗರದಲ್ಲಿ ಇದೇ ವಿಚಾರವಾಗಿ ಮಾತನಾಡಿದ ಕಾರಜೋಳ ಅವರು, ‘ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡಿಲ್ಲ. ಡೇಟ್‌ ಇಲ್ಲದ ಸುಳ್ಳು ಕಾಗದ ನೀಡಿದ್ದಾರೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ. ಮನಮೋಹನ ಸಿಂಗ್‌ ಸರ್ಕಾರ ಇದ್ದಾಗ ಡಿಪಿಆರ್‌ ಕ್ಲಿಯರ್‌ ಮಾಡಿಕೊಡಲು ಕಾಂಗ್ರೆಸ್‌ ಹೇಳಬೇಕಿತ್ತು. 2002ರಲ್ಲಿ ಮಹದಾಯಿ ಯೋಜನೆಗೆ ಅನುಮತಿ ಪಡೆದಿದ್ದೆವು. 2004ರಿಂದ 2014ರವರೆಗೆ ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದರು. ಆಗ ಹತ್ತು ವರ್ಷ ಕಾಂಗ್ರೆಸ್‌ನವರು ಏನು ಮಾಡಿದಿರಿ? ತಡೆಯಾಜ್ಞೆ ಇದ್ದರೆ ತೆರವುಗೊಳಿಸಬೇಕಿತ್ತಲ್ವಾ? ಆಗ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದಿರಾ ಅಥವಾ ಬೆರಳು ಚೀಪುತ್ತಾ ಕೂತಿದ್ದಿರಾ? ಎಂದು ಪ್ರಶ್ನಿಸಿದರು.

ಕಳಸಾ ಬಂಡೂರಿ ಯೋಜನೆ ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ಸಿಗರಿಗೂ ಆಹ್ವಾನ:

2014ಕ್ಕೆ ಮೋದಿ ಸರ್ಕಾರ ಬಂದ ಮೇಲೆ ಮಹದಾಯಿ ನ್ಯಾಯಾಧಿಕರಣ ಸಶಕ್ತಗೊಳಿಸಿತು. ಅದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಲಾಯಿತು. ಕಳಸಾ-ಬಂಡೂರಿಯಲ್ಲಿ ಒಟ್ಟಾರೆ ನಮಗೆ 3.9 ಟಿಎಂಸಿ ನೀರು ಕೊಟ್ಟಿದ್ದು ಇತಿಹಾಸ. ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಪಿಆರ್‌ಗೆ ಅನುಮೋದನೆ ನೀಡಿದೆ. ಇದು ಸುಳ್ಳು ದಾಖಲೆ, ದಿನಾಂಕ ಇಲ್ಲ ಎಂದು ಸುಖಾಸುಮ್ಮನೆ ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಒಂದು ತಿಂಗಳೊಳಗೆ ಕಳಸಾ-ಬಂಡೂರಿ ಯೋಜನೆ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಈ ವೇಳೆ ಕಾಂಗ್ರೆಸ್ಸಿನವರಿಗೂ ಆಹ್ವಾನ ನೀಡಲಾಗುವುದು ಎಂದರು.

click me!