ಫೆಂಗಲ್ ಅಬ್ಬರ ತಗ್ಗಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು(ಡಿ.06) ಫೆಂಗಲ್ ಚಂಡಮಾರುತ ಕಾರಣ ಈಗಾಲೇ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲ ಜಿಲ್ಲೆಗಳು ಶಾಲಾ ಕಾಲೇಜುಗಳಿಗೆ ರಜೆ ಕೂಡ ಘೋಷಿಸಿತ್ತು. ಇದೀಗ ಫೆಂಗಲ್ ಅಬ್ಬರ ತಗ್ಗಿದೆ. ಆದರೆ ಮಳೆ ಕಡಿಮೆಯಾಗಿಲ್ಲ. ಕಳೆದೆ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ಕರ್ನಾಟಕ ಕೆಲ ಭಾಗದಲ್ಲಿ ಮಳೆಯಾಗಲಿದೆ ಎಂದಿದೆ. ಇದಕ್ಕೆ ಪೂರಕವಾಗಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿದೆ.
ಹವಾಮಾನ ಇಲಾಖೆ ಸೂಚನೆ ಪ್ರಕಾರ ಬೆಂಗಳೂರು, ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಹೇಳಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೆ, ಸಂಜೆಯಾಗುತ್ತಿದ್ದಂತೆ ಮಳೆಯಾಗುವ ಸಾಧ್ಯತೆಯನ್ನು ಇಲಾಖೆ ಸೂಚಿಸಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27°C ಮತ್ತು 19°C ಆಗಿರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಕೆಲ ಭಾಗದಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇನ್ನು ದಕ್ಷಿಣ ಕನ್ನಡದ ಬಹುತೇಕ ಭಾಗಗಗಳಲ್ಲಿ, ಪ್ರಮುಖವಾಗಿ ಉಡುಪಿ ಜಿಲ್ಲೆ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಡಿಸೆಂಬರ್ 9ರ ವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಡಿಸೆಂಬರ್ 9ರ ಬಳಿಕ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಡಿಸೆಂಬರ್ ತಿಂಗಳ ಚಳಿ ಮತ್ತೆ ಕಾಣಿಸಿಕೊಳ್ಳಲಿದೆ. ಡಿಸೆಂಬರ್ 6 ರಿಂದ 8ರ ವರೆಗೆ ಮೋಡ ಕವಿದ ವಾತಾವರಣ ಬೆಂಗಳೂರಿನಲ್ಲಿ ಇರಲಿದೆ. ಹೀಗಾಗಿ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ಹಾಗೂ ಗರಿಷ್ಠ 29 ಡಿಗ್ರಿ ಸೆಲ್ಶಿಯಸ್ ಇರಲಿದೆ ಎಂದಿದೆ. ಇನ್ನು ಡಿಸೆಂಬರ್ 9 ರಿಂದ 11 ಮಂಜು ಮುಸುಕಿದ ವಾತವಾರಣ ಇರಲಿದೆ. ಆದರೆ ಚಳಿ ಪ್ರಮಾಣ ನಿಧಾನಾಗಿ ಹೆಚ್ಚಾಗಲಿದೆ ಎಂದಿದೆ.
ಫೆಂಗಲ್ ಚಂಡಮಾರುತ ಪರಿಣಾಮದಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ವಿಶೇಷ ಅಂದರೆ ಈ ಬಾರಿಯ ಮಳೆಗಾಲದಲ್ಲಿ ಉತ್ತಮ ಮಳೆಯಾದ ಕಾರಣ ಕೆಆರ್‌ಎಸ್ ಜಲಾಶ ಭರ್ತಿಯಾಗಿತ್ತು. ಇದೀಗ ಸೈಕ್ಲೋನ್ ಪರಿಣಾಮ 2ನೇ ಬಾರಿಗೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಪ್ರಮುಖವಾಗಿ ಕೊಡುಗು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಭಾರಿ ಮಳೆಯಾದ ಕಾರಣ ಕೆಆರ್‌ಎಸ್ ಜಲಾಶಯ ವರ್ಷದಲ್ಲಿ 2ನೇ ಬಾರಿಗೆ ಭರ್ತಿಯಾಗಿದೆ. ಸದ್ಯ ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.8 ಅಡಿ ನೀರು ತುಂಬಿಕೊಂಡಿದೆ. ಹೀಗಾಗಿ ಈ ಬಾರಿ ಬೇಸಿಗೆ ಕಾಲದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಎರಡೇ ಬಾರಿಗೆ ರಾಜ್ಯದ ಜಲಾಶಗಳಿಗೆ ನೀರು ಹರಿದು ಬಂದಿರುವ ಕಾರಣ ನೀರಿನ ಸಮಸ್ಯೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದ ಬಹುತೇಕ ಜಲಾಶಗಳು ಶೇಕಡಾ79 ರಷ್ಟು ಭರ್ತಿಯಾಗಿದೆ
ತಮಿಳುನಾಡು, ಪುದುಚೇರಿ ಸೇರಿದಂತೆ ಕೆಲ ರಾಜ್ಯಳಲ್ಲಿ ಮಳೆ ಸಾಧ್ಯತೆ ಇದೆ. ಇನ್ನು ಹಿಮಾಚಲ ಪ್ರದೇಶದಲ್ಲೂ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.