ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದೆ. ಈಗಾಗಲೇ ದಸರಾ ಹಬ್ಬದ ರಜೆ ಮುಗಿದಿದೆ. ಮತ್ತೆ ಬೆಂಗಳೂರು ಗಿಜಿಗಿಡುತ್ತಿದೆ. ಇದರ ನಡುವೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಎಚ್ಚರಿಕೆ ವಹಿಸಲು ಸೂಚಿಸಿದೆ.
ಬೆಂಗಳೂರು(ಅ.15) ಬಂಗಾಳ ಉಪಸಾಗರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಹವಾಮಾನ ಇಲಾಖೆ ಬೆಂಗಳೂರಿಗರಿಗೆ ಪ್ರಮುಖ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಈ ವಾರ ಭಾರಿ ಮಳೆಯಾಗಲಿದೆ. ಈಗಾಗಲೇ ಹವಾಮಾನ ಇಲಾಖೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಷ್ಟೇ ಅಲ್ಲ ಬೆಂಗಳೂರಿಗರು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಭಾರಿ ಮಳೆಯಿಂದ ಅವಾಂತರ ಸೃಷ್ಟಿಸಾಗುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಶಾಲಾ ಮಕ್ಕಳ ಬಗ್ಗೆ ತೀವ್ರ ಗಮನ ನೀಡುವಂತೆ ಸೂಚಿಸಲಾಗಿದೆ.
ಸದ್ಯ ಬೆಂಗಳೂರು ನಗರ ಹಾಗೂ ಸುತ್ತ ಮುತ್ತ ಭಾರಿ ಮಳೆಯಾಗಿದೆ. ಇದರ ಬೆನ್ನಲ್ಲೇ ನಗರದಲ್ಲಿ ಅಕ್ಟೋಬರ್ 16 ರಿಂದ 18ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸದ್ಯ ಯೆಲ್ಲೋ ಅಲರ್ಟ್ ನೀಡಿರುವ ಐಎಂಡಿ, 16 ರಿಂದ 18ರ ವರೆಗೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.
ವಿಶಾಲ ಸಹರಾ ಮರುಭೂಮಿಯಲ್ಲಿ ರಣಮಳೆಗೆ ಕಾರಣವೇನು? ಮುನಿಸಿಕೊಂಡಿದ್ಯಾ ಪ್ರಕೃತಿ? ಕಾದಿದ್ಯಾ ಆಪತ್ತು?
ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕು ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಇದರ ಪರಿಣಾಮ ರಸ್ತೆಗಳು ಜಲಾವೃತಗೊಳ್ಳಲಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಿದೆ. ಅಂಡರ್ ಪಾಸ್‌ನಲ್ಲಿ ಪ್ರಯಾಣ, ಮರಗಳ ಕೆಳಗೆ, ಕಂಪೌಂಡ್ ಪಕ್ಕದಲ್ಲಿ ಆಶ್ರ, ಹಳೇ ಕಟ್ಟಡ, ಗೇಟ್‌ಗಳ ಪಕ್ಕರದಲ್ಲಿ ಆಶ್ರಯ ಪಡೆಯುವುದು ಅಪಾಯಾಕಾರಿ ಎಂದು ಸೂಚಿಸಲಾಗಿದೆ.
ಬಂಗಾಳದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡು ಹಾಗೂ ಆಂಧ್ರ ಪ್ರದೇಶಕ್ಕಿಂತ ಕರ್ನಾಟಕಕ್ಕೆ ಹೆಚ್ಚಿನ ಮಳೆಯಾಗಲಿದೆ. ಮಳೆ ಪ್ರಮಾಣ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದಿದೆ. ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗುವ ಕಾರಣ ತಗ್ಗು ಪ್ರದೇಶದಲ್ಲಿರುವ ಜನರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ. ಇದೇ ವೇಳೆ ಬೆಂಗಳೂರು ಸೇರಿದಂತೆ ಭಾರಿ ಮಳೆಯಾಗುವ ಪ್ರದೇಶದ ಕುರಿತು ಹವಾಮಾನ ಇಲಾಖೆ ವರದಿ ನೀಡಲಿದೆ. ಈ ವರದಿ ಆಧರಿಸಿ ಶಾಲಾ ಮಕ್ಕಳಿಗೆ ರಜೆ ಘೋಷಿಸಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು ಮಾತ್ರವಲ್ಲ, ಮುಂದಿನ 4 ದಿನ ಕರ್ನಾಟಕದ ಕರಾವಳಿ ಭಾಗದಲ್ಲೂ ಭಾರಿ ಮಳೆಯಾಗಲಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಮುಂದಿನ ನಾಲ್ಕು ದಿನ ಮಳೆ ಪ್ರಮಾಣ ತೀವ್ರಗೊಳ್ಳಲಿದೆ ಎಂದಿದೆ. ಬೆಂಗಳೂರು ಸೇರಿದಂತೆ ಕೋಲಾರ , ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.