
ಬೆಂಗಳೂರು (ಅ.29): ಐಎಂಎ ಬಹುಕೋಟಿ ವಂಚನೆ ಹಗರಣ ಕುರಿತು ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಹಮ್ಮದ್ ಮನ್ಸೂರ್ ಖಾನ್‌ಗೆ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆದುಕೊಳ್ಳಲು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬಹುಕೋಟಿ ವಂಚನೆ ಆರೋಪದಲ್ಲಿ ಜೈಲು ಸೇರಿದ್ದ ಮಹಮ್ಮದ್ ಮನ್ಸೂರ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್, ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ ಹಲವು ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ.
‘ಅರ್ಜಿದಾರರು ಈಗಾಗಲೇ ತನ್ನ ಪಾಸ್‌ಪೋರ್ಟ್‌ನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೀಗಿರುವಾಗ ವಿದೇಶಕ್ಕೆ ಹೋದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂಬ ಸರ್ಕಾರಿ ವಕೀಲರ ವಾದ ಒಪ್ಪಲಾಗದು.ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಅರ್ಜಿದಾರರು ಹೇಳುತ್ತಿಲ್ಲ. ಸಾಕ್ಷ್ಯಾಧಾರ ಇಲ್ಲ ಎಂದು ಜಾಮೀನು ನೀಡುವಂತೆಯೂ ಕೋರಿಲ್ಲ. ಆದರೆ ಬಂದೀಖಾನೆ ಮುಖ್ಯವೈದ್ಯಾಧಿಕಾರಿಗಳು ನೀಡಿರುವ ವೈದ್ಯಕೀಯ ವರದಿಯಲ್ಲಿ ಅರ್ಜಿದಾರರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅನಾರೋಗ್ಯ ದೃಷ್ಟಿಯನ್ನು ಪರಿಗಣಿಸಿ ಜಾಮೀನು ನೀಡಲಾಗುತ್ತಿದೆ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
IMA ವಂಚನೆ: CBIಗೆ ಸಿಕ್ತು ಸೀಕ್ರೆಟ್ ಡೈರಿ; ಬಂಡವಾಳ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ
ಷರತ್ತುಗಳು: 5 ಲಕ್ಷ ರು.ಗಳ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರು ಶ್ಯೂರಿಟಿ. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು. ಸಾಕ್ಷ್ಯಗಳ ನಾಶ ಪಡಿಸಬಾರದು. ಸಂಸ್ಥೆಯ ಆಸ್ತಿಗಳನ್ನು ಪರಭಾರೆ ಮಾಡಬಾರದು. 15 ದಿನಕ್ಕೆ 1 ಬಾರಿ ಇ.ಡಿ. ಕಚೇರಿಗೆ ಭೇಟಿ ನೀಡಿ ಸಹಿ ಹಾಕಬೇಕು. ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ವಾದ-ಪ್ರತಿವಾದ:
‘ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಆರೋಪಿ, ಹಲವು ವರ್ಷಗಳಿಂದ ಮಧುಮೇಹ, ರಕ್ತದೊತ್ತಡ, ಬೆನ್ನು ಮೂಳೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೃದಯ ಸಂಬಂಧಿ ಶಶತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಗರಣ ಆರೋಪ ಕೇಳಿಬಂದ ಕೂಡಲೇ ವಿದೇಶದಿಂದ ಬಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕರಿಸಿದ್ದಾರೆ. ತನ್ನ ಪಾಸ್ ಪೋರ್ಟ್‌ನ್ನು ತನಿಖಾಧಿಕಾಗಳ ವಶಕ್ಕೆ ನೀಡಿದ್ದಾರೆ. 2019ರ ಆಗಸ್ಟ್ 1 ರಿಂದ ನ್ಯಾಯಾಂಗ ವಶದಲ್ಲಿದ್ದಾರೆ. ತನಿಖೆಗೆ ಬೇಕಾದ ಎಲ್ಲ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯ ಅಂಶ ಪರಿಗಣಿಸಿ ಜಾಮೀನು ನೀಡಿದಲ್ಲಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗಲಿದೆ’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
‘ಇ.ಡಿ. (ಜಾರಿ ನಿರ್ದೇಶನಾಲಯ) ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ವಿರುದ್ಧ ಸಾವಿರಾರು ಕೋಟಿ ರು.ಗಳ ಹಗರಣ ನಡೆಸಿರುವ ಆರೋಪವಿದೆ. ತನಿಖಾಧಿಕಾರಿಗಳು ಸಾಕಷ್ಟುಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಹೀಗಿರುವಾಗ ಆರೋಪಿಗೆ ಜಾಮೀನು ನೀಡಿದಲ್ಲಿ ಸಂಸ್ಥೆಯ ಆಸ್ತಿ ಪರಭಾರೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು’ ಎಂದು ಮನವಿ ಮಾಡಿದರು.
ವಾದ- ಪ್ರತಿವಾದ ಆಲಿಸಿ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ