ಕೊರೋನಾ ಲಸಿಕೆ ಪಡೆದುಕೊಳ್ಳಲು ನಾನು ಸಿದ್ಧ ಎಂದು ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಯಾವಾಗ ಸೂಚಿಸುತ್ತಾರೋ ಆಗ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ.
ಬೆಂಗಳೂರು (ಜ.17): ಕೊರೋನಾ ಲಸಿಕೆ ಪಡೆಯಲು ನಾನು ಸಿದ್ಧನಿದ್ದೇನೆ. ನನಗೆ ಲಸಿಕೆ ಪಡೆಯಲು ಯಾವಾಗ ಸೂಚಿಸುತ್ತಾರೋ ಆಗ ಖಂಡಿತಾ ಲಸಿಕೆ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಲಸಿಕೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಇಷ್ಟುಕಡಿಮೆ ಅವಧಿಯಲ್ಲಿ ಲಸಿಕೆ ಲಭ್ಯವಾಗಿರುವುದು ಸಂತಸದ ಸಂಗತಿ. ಇದಕ್ಕಾಗಿ ಸಂಶೋಧಕರಿಗೆ, ಕೊರೋನಾ ವಾರಿಯರ್‌ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ನಮ್ಮ ಸಮ್ಮುಖದಲ್ಲೇ ಬಿಡದಿ ಮೂಲದ ಕೆ. ನಾಗರತ್ನಾ ಎಂಬುವವರು ಲಸಿಕೆ ಪಡೆದರು. ಹೀಗಾಗಿ ಲಸಿಕೆ ಕುರಿತು ಯಾರೂ ಆತಂಕಪಡಬೇಕಿಲ್ಲ ಎಂದು ಹೇಳಿದರು.
ಬೆಂಗ್ಳೂರಿನ 8 ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ...
ಈ ವೇಳೆ ನೀವು ಯಾವಾಗ ಲಸಿಕೆ ಪಡೆಯುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಲಸಿಕೆ ಪಡೆಯಲು ಸಿದ್ಧನಿದ್ದೇನೆ. ಅವರು (ಆರೋಗ್ಯ ಇಲಾಖೆ ಮಾರ್ಗ ಸೂಚಿ) ಯಾವಾಗ ಲಸಿಕೆ ಪಡೆಯಲು ಹೇಳುತ್ತಾರೋ ಆಗ ಖಂಡಿತಾ ಲಸಿಕೆ ಪಡೆಯುತ್ತೇನೆ. ಲಸಿಕೆಯ ಸುರಕ್ಷತೆಯ ಬಗ್ಗೆ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕಾಗಿಯೇ ಡಾ.ಸುದರ್ಶನ್ ಬಲ್ಲಾಳ್ ಸೇರಿದಂತೆ ಆರೋಗ್ಯ ಕ್ಷೇತ್ರದ ಹಲವು ಗಣ್ಯರು ಲಸಿಕೆ ಪಡೆದಿದ್ದಾರೆ ಎಂದರು.