ಸ್ವತಃ ಲಸಿಕೆ ಪಡೆದು ಧೈರ್ಯ ತುಂಬಿದ ಹಿರಿಯ ವೈದ್ಯರು!

Published : Jan 17, 2021, 07:35 AM IST
ಸ್ವತಃ ಲಸಿಕೆ ಪಡೆದು ಧೈರ್ಯ ತುಂಬಿದ ಹಿರಿಯ ವೈದ್ಯರು!

ಸಾರಾಂಶ

 ಮೊದಲ ಲಸಿಕೆ ಪಡೆಯಬೇಕಿದ್ದ ಡಿ-ಗ್ರೂಪ್‌ ಸಿಬ್ಬಂದಿಗಿದ್ದ ಆತಂಕ ದೂರ ಮಾಡಲು ಮುಂದಾದ ಹಿರಿಯ ವೈದ್ಯರು| ಸ್ವತಃ ಲಸಿಕೆ ಪಡೆದು ಧೈರ್ಯ ತುಂಬಿದ ಹಿರಿಯ ವೈದ್ಯರು!

ಬೆಂಗಳೂರು(ಜ.17): ಕೊರೋನಾ ಲಸಿಕೆ ಕುರಿತು ಜನಸಾಮಾನ್ಯರು ಹಾಗೂ ಮೊದಲ ದಿನ ಮೊದಲ ಲಸಿಕೆ ಪಡೆಯಬೇಕಿದ್ದ ಡಿ-ಗ್ರೂಪ್‌ ಸಿಬ್ಬಂದಿಗಿದ್ದ ಆತಂಕ ದೂರ ಮಾಡುವ ಸಲುವಾಗಿ ಖುದ್ದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌, ವೈರಾಣು ತಜ್ಞ ಡಾ.ವಿ. ರವಿ ಸೇರಿದಂತೆ ರಾಜ್ಯದ ತಜ್ಞ ವೈದ್ಯರು ಶನಿವಾರವೇ ಲಸಿಕೆ ಪಡೆದಿದ್ದಾರೆ.

ಇನ್ನು ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ-ಗ್ರೂಪ್‌ ನೌಕರರು ಮುಂದೆ ಬಾರದ ಹಿನ್ನೆಲೆಯಲ್ಲಿ ಡಾ.ಅಸ್ಮತ್‌ ಎಂಬುವವರೇ ಮೊದಲ ಲಸಿಕೆ ಪಡೆದಿದ್ದಾರೆ. ಈ ಮೂಲಕ ಡಿ-ಗ್ರೂಪ್‌ ನೌಕರರಿಗೆ ವಿಶ್ವಾಸ ಮೂಡಿಸಿದ್ದಾರೆ.

ವಿಕ್ಟೋರಿಯಾ ಆವರಣದ ಪಿಎಂಎಸ್‌ಎಸ್‌ವೈ ಆಸ್ಪತ್ರೆ ಲಸಿಕಾ ಕೇಂದ್ರದಲ್ಲಿ ಡಾ.ಎಂ.ಕೆ. ಸುದರ್ಶನ್‌, ಮಣಿಪಾಲ್‌ ಆಸ್ಪತ್ರೆ ಅಧ್ಯಕ್ಷ ಸುದರ್ಶನ್‌ ಬಲ್ಲಾಳ್‌, ವೈರಾಣು ತಜ್ಞ ಡಾ.ವಿ. ರವಿ, ನರವಿಜ್ಞಾನ ವೈದ್ಯ ಡಾ. ನಾಗೇಶ್‌, ಪ್ಲಾಸ್ಟಿಕ್‌ ಸರ್ಜರಿ ವೈದ್ಯ ಡಾ. ಸುಶಾಂತ್‌ ಸೇರಿದಂತೆ ಹಲವು ಕ್ಷೇತ್ರಗಳ ತಜ್ಞರು ಮೊದಲ ದಿನವೇ ಲಸಿಕೆ ಪಡೆದರು. ಈ ಮೂಲಕ, ನಾವೂ ಕೊರೋನಾ ಲಸಿಕೆಯನ್ನು ಪಡೆದಿದ್ದು ಲಸಿಕೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಷ್ಟೇಕೆ ಸೂಜಿ ಚುಚ್ಚುವುದು ಸಹ ಗೊತ್ತಾಗುವುದಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗ ತಪ್ಪದೇ ಲಸಿಕೆ ಪಡೆಯಿರಿ ಎಂದು ತಜ್ಞ ವೈದ್ಯರು ಜನಸಾಮಾನ್ಯರಿಗೆ ಕರೆ ನೀಡಿದರು.

ಲಸಿಕೆ ಪಡೆಯಿರಿ- ಡಾ.ವಿ. ರವಿ:

ಪಿಎಂಎಸ್‌ಎಸ್‌ವೈ ಆಸ್ಪತ್ರೆ ಲಸಿಕಾ ಕೇಂದ್ರದಲ್ಲಿ ತಜ್ಞ ವೈದ್ಯರೊಂದಿಗೆ ಲಸಿಕೆ ಪಡೆದ ಡಾ.ವಿ. ರವಿ, ನಾನು ಕೊರೋನಾ ಲಸಿಕೆಯನ್ನು ಪಡೆದಿದ್ದು ಲಸಿಕೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಷ್ಟೆಏಕೆ ಸೂಜಿ ಚುಚ್ಚುವುದು ಸಹ ಗೊತ್ತಾಗುವುದಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗ ತಪ್ಪದೇ ಲಸಿಕೆ ಪಡೆಯಿರಿ ಎಂದು ಹೇಳಿದರು.

ಲಸಿಕೆ ಸುರಕ್ಷತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರು ತಲೆಕೆಡಿಸಿಕೊಳ್ಳಬಾರದು. ವ್ಯಾಕ್ಸಿನ್‌ ತಯಾರು ಮಾಡಿರುವ ವಿಧಾನ ಎಲ್ಲವೂ ಚೆನ್ನಾಗಿದೆ. ಎಲ್ಲಾ ಹಂತದ ಕ್ಲಿನಿಕಲ್‌ ಟ್ರಯಲ್‌ ಮುಗಿಸಿಯೇ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಅವಕಾಶ ಸಿಕ್ಕಾಗ ಲಸಿಕೆ ಪಡೆದುಕೊಳ್ಳಿ. ಹಾಗಂತ, ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷ್ಯವನ್ನೂ ಮಾಡಬೇಡಿ. ಈ ಹಿಂದೆ ಹೇಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಿರೋ ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮುಂದುವರೆಸಿ ಎಂದು ಸಲಹೆ ನೀಡಿದರು.

ಹಲವು ಕೇಂದ್ರಗಳಲ್ಲಿ ಲಸಿಕೆ ಪಡೆದ ಮುಖ್ಯಸ್ಥರು:

ಮೊದಲ ದಿನವಾದ ಶನಿವಾರ 243 ಲಸಿಕಾ ಕೇಂದ್ರಗಳಲ್ಲೂ ಮೊದಲ ಲಸಿಕೆಯನ್ನು ಸ್ವಚ್ಛತಾ ಕಾರ್ಮಿಕರು ಅಥವಾ ಆಸ್ಪತ್ರೆಯ ಡಿ-ದರ್ಜೆ ಸಿಬ್ಬಂದಿಗೆ ನೀಡಲು ಕರೆ ನೀಡಲಾಗಿತ್ತು. ಬಹುತೇಕ ಕಡೆ ಮೊದಲ ಲಸಿಕೆಯನ್ನು ಡಿ-ದರ್ಜೆ ಸಿಬ್ಬಂದಿಗೆ ನೀಡಲಾಗಿದೆ. ಒಂದೆರಡು ಕಡೆ ಮಾತ್ರ ಡಿ-ದರ್ಜೆ ಸಿಬ್ಬಂದಿ ಹಿಂದೇಟು ಹಾಕಿದ್ದು ಅವರಿಗೆ ಆತ್ಮವಿಶ್ವಾಸ ತುಂಬಲು ಆ ಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಲಸಿಕೆ ಪಡೆದಿದ್ದಾರೆ. ಉಳಿದಂತೆ ಎಲ್ಲಾ ಕಡೆಯೂ ಮೊದಲ ಲಸಿಕೆ ಡಿ-ದರ್ಜೆ ಸಿಬ್ಬಂದಿ ಪಡೆದ ಬಳಿಕ ಆಯಾ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ತಜ್ಞ ವೈದ್ಯರು ಪಡೆದು ಉಳಿದವರಿಗೆ ಪ್ರೋತ್ಸಾಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಲಸಿಕೆ ಸಂಪೂರ್ಣ ಸುರಕ್ಷಿತ

ನಾನು ಲಸಿಕೆ ಪಡೆದು ಅರ್ಧಗಂಟೆ ನಿಗಾದಲ್ಲಿದ್ದೆ. ಲಸಿಕೆ ಕೇವಲ 0.5 ಎಂ.ಎಲ್‌. ಆಗಿರುವುದರಿಂದ ಇಂಜೆಕ್ಷನ್‌ ನೀಡುವುದು ಸಹ ಗೊತ್ತಾಗುವುದಿಲ್ಲ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಲಸಿಕೆ ಪಡೆಯಲು ಆತಂಕ ಪಡಬೇಕಾಗಿಲ್ಲ.

- ಡಾ.ಎಂ.ಕೆ. ಸುದರ್ಶನ್‌, ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ

ಯಾವುದೇ ಸಮಸ್ಯೆಯಾಗಿಲ್ಲ

ನನಗೆ 56 ವರ್ಷವಾಗಿದ್ದರೂ ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದೆ. ಲಸಿಕೆ ಪಡೆದು ಎರಡು ಗಂಟೆ ಕಳೆದರೂ ಯಾವುದೇ ಸಮಸ್ಯೆ ಆಗಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಅಲರ್ಜಿ, ಆರೋಗ್ಯ ಸಮಸ್ಯೆ ಉಂಟಾದರೆ ಮಾಹಿತಿ ನೀಡಲು ತಿಳಿಸಿದ್ದಾರೆ,

- ಡಾ.ನಾಗೇಶ್‌, ನರವಿಜ್ಞಾನ ತಜ್ಞ ವೈದ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ