ದಾವಣಗೆರೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರ ಫಯಾಜ್‌ವುಲ್ಲಾ ವಶಕ್ಕೆ; ಉಗ್ರರರೊಂದಿಗೆ ನಂಟು?

By Kannadaprabha News  |  First Published Jul 21, 2023, 6:08 AM IST

ಐವರು ಶಂಕಿತ ಎಲ್‌ಇಟಿ ಉಗ್ರರ ಬಂಧನ ಬೆನ್ನಲ್ಲೇ ದಾವಣಗೆರೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಗುರುವಾರ ಸಿಸಿಬಿ ವಶಕ್ಕೆ ಪಡೆದಿದೆ.


ಬೆಂಗಳೂರು/ದಾವಣಗೆರೆ (ಜು.21): ಐವರು ಶಂಕಿತ ಎಲ್‌ಇಟಿ ಉಗ್ರರ ಬಂಧನ ಬೆನ್ನಲ್ಲೇ ದಾವಣಗೆರೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಗುರುವಾರ ಸಿಸಿಬಿ ವಶಕ್ಕೆ ಪಡೆದಿದೆ.

ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆಯ ಆಜಾದ್‌ ನಗರದ ನಿವಾಸಿ ಫಯಾಜ್‌ವುಲ್ಲಾ ಅಲಿಯಾಸ್‌ ಫಯಾಜ್‌ (30) ಸಿಸಿಬಿ ಬಲೆಗೆ ಬಿದ್ದಿದ್ದು, ಇದುವರೆಗೆ ತನಿಖೆಯಲ್ಲಿ ಶಂಕಿತರ ಉಗ್ರರ ಬಂಧನಕ್ಕೂ ಫಯಾಜ್‌ಗೂ ನಂಟು ಪತ್ತೆಯಾಗಿಲ್ಲ. ಅಕ್ರಮ ಶಸ್ತ್ರಾಸ್ತ್ರ ಮಾರಾಟ ಸಂಬಂಧ ಪ್ರತ್ಯೇಕ ಪ್ರಕರಣದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.

Latest Videos

undefined

ಶಂಕಿತ ಉಗ್ರನ ಮನೇಲಿ 4 ಸಜೀವ ಗ್ರೆನೇಡ್‌ ವಶಕ್ಕೆ!

ಹಲವು ವರ್ಷಗಳಿಂದ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ಫಯಾಜ್‌ ನಿರತನಾಗಿದ್ದು, ಆತನ ಮೇಲೆ ಹಳೇ ಪ್ರಕರಣಗಳಿವೆ. ಬೆಂಗಳೂರಿನ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾಗ ಬಂಧಿತರಾದ ಶಂಕಿತ ಉಗ್ರರ ಬಳಿ ನಾಡಾ ಪಿಸ್ತೂಲ್‌ಗಳು ಪತ್ತೆಯಾಗಿದ್ದವು. ಹೀಗಾಗಿ ನಗರದಲ್ಲಿ ಹಳೇ ಶಸ್ತ್ರಾಸ್ತ್ರ ಪೂರೈಕೆದಾರರ ಮಾಹಿತಿ ಕಲೆ ಹಾಕಿದಾಗ ಫಯಾಜ್‌ ಸುಳಿವು ಸಿಕ್ಕಿತು. ಆದರೆ ಆತನಿಗೂ ಶಂಕಿತ ಉಗ್ರರಿಗೆ ಸಂಪರ್ಕ ಇದ್ದ ಬಗ್ಗೆ ಪುರಾವೆ ಸಿಕ್ಕಿಲ್ಲ. ಕೆಲ ದಿನಗಳಿಂದ ಬೆಂಗಳೂರು ತೊರೆದು ದಾವಣಗೆರೆಯಲ್ಲಿ ತನ್ನ ಕುಟುಂಬದ ಜತೆ ಫಯಾಜ್‌ ನೆಲೆಸಿದ್ದು, ಸ್ಥಳೀಯವಾಗಿ ಬಡಗಿ ಕೆಲಸ ಮಾಡಿಕೊಂಡು ಆತ ಜೀವನ ಸಾಗಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಮಗಳೂರಲ್ಲಿ ಬೇರೊಬ್ಬನನ್ನು ಹಿಡಿದು ಸಿಸಿಬಿ ಪ್ರಮಾದ!

ಶಂಕಿತರ ಉಗ್ರರಿಗೆ ಹಣಕಾಸು ನೆರವು ನೀಡಿದ ವ್ಯಕ್ತಿ ಬಂಧನ ಕಾರ್ಯಾಚರಣೆ ವೇಳೆ ಚಿಕ್ಕಮಗಳೂರಿನಲ್ಲಿ ಸಿಸಿಬಿ ಪೊಲೀಸರು ಗುರುವಾರ ಭಾರಿ ಯಡವಟ್ಟು ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನ ಹೋಂ ಸ್ಟೇನಲ್ಲಿ ಶಂಕಿತ ಉಗ್ರರ ಜತೆ ನಂಟು ಹೊಂದಿದ್ದ ವ್ಯಕ್ತಿ ಇರುವಿಕೆ ಬಗ್ಗೆ ಮಾಹಿತಿ ಸಿಸಿಬಿಗೆ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ, ಸ್ಥಳೀಯ ಪೊಲೀಸರ ಸಹಕಾರದಲ್ಲಿ ಆ ಹೋಂ ಸ್ಟೇ ಮೇಲೆ ದಾಳಿ ನಡೆಸಿದೆ. ಆದರೆ ತಾವು ವಶಕ್ಕೆ ಪಡೆಯಬೇಕಿದ್ದ ವ್ಯಕ್ತಿ ಬದಲಿಗೆ ಬೇರೊಬ್ಬನನ್ನು ಸುಪರ್ದಿಗೆ ಪಡೆದು ತೀವ್ರ ಮುಜುಗರಕ್ಕೊಳಗಾಗಿದೆ. ವಿಚಾರಣೆ ಬಳಿಕ ತಪ್ಪಿನ ಅರಿವಾಗಿ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

Suspected terrorist bengaluru: ಉಗ್ರರ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚನೆ

ತಮ್ಮ ಕುಟುಂಬದ ಜತೆ ವಿಹಾರಕ್ಕೆ ಬೆಂಗಳೂರಿನ ಮೂಲದ ವ್ಯಕ್ತಿಯೊಬ್ಬರು ತೆರಳಿದ್ದರು. ನಗರದಲ್ಲಿ ಸಿಕ್ಕಿಬಿದ್ದಿದ್ದ ಐವರು ಶಂಕಿತ ಉಗ್ರರಿಗೆ ಹಣಕಾಸು ನೆರವು ನೀಡಿದ ಅನುಮಾನಕ್ಕೆ ಗುರಿಯಾದ ವ್ಯಕ್ತಿಯ ಹೆಸರು ಹಾಗೂ ಕುಟುಂಬದ ಜತೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯ ಹೆಸರುಗಳು ಒಂದೇ ಆಗಿದ್ದವು. ಹೀಗಾಗಿ ತಪ್ಪು ಕಲ್ಪನೆ ಮೇರೆಗೆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಶಂಕಿತ ಉಗ್ರರಿಗೂ ಆ ವ್ಯಕ್ತಿಗೂ ಸಂಬಂಧವಿಲ್ಲ ಎಂಬುದು ಖಚಿತವಾಯಿತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

click me!