ವಾಲ್ಮೀಕಿ ಹಗರಣ ಬೆನ್ನಲ್ಲೇ ವಕ್ಫ್‌ ಮಂಡಳಿಯಲ್ಲೂ ₹4 ಕೋಟಿ ಅಕ್ರಮ ವರ್ಗಾವಣೆ!

By Kannadaprabha NewsFirst Published Jul 15, 2024, 6:39 AM IST
Highlights

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್‌ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ದೊಡ್ಡ ವಿವಾದವಾಗಿರುವಾಗಲೇ, ರಾಜ್ಯ ವಕ್ಫ್‌ ಮಂಡಳಿಯಲ್ಲೂ ಇಂತಹುದೇ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು (ಜು.15): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್‌ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ದೊಡ್ಡ ವಿವಾದವಾಗಿರುವಾಗಲೇ, ರಾಜ್ಯ ವಕ್ಫ್‌ ಮಂಡಳಿಯಲ್ಲೂ ಇಂತಹುದೇ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ವಕ್ಫ್‌ ಮಂಡಳಿಯ ಗಮನಕ್ಕೆ ತರದೆ ಖಾತೆಯಿಂದ ನಾಲ್ಕು ಕೋಟಿ ರು. ಹಣ ವರ್ಗಾವಣೆ ಮಾಡಿದ ಆರೋಪದಡಿ ರಾಜ್ಯ ವಕ್ಫ್‌ ಮಂಡಳಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿರುದ್ಧ ನಗರದ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Videos

ರಾಜ್ಯ ವಕ್ಫ್‌ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಅಹಮ್ಮದ್‌ ಅಬ್ಬಾಸ್‌ ನೀಡಿದ ದೂರಿನ ಮೇರೆಗೆ ರಾಜ್ಯ ವಕ್ಫ್‌ ಮಂಡಳಿ ಮಾಜಿ ಸಿಇಒ ಝುಲ್ಫಿಕರುಲ್ಲಾ ವಿರುದ್ಧ ಎಫ್‌ಐಆರ್‌ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಲ್ಮೀಕಿ, ಮುಡಾ ಹಗರಣ ಬೆನ್ನಲ್ಲೇ ಈಗ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಪತ್ತೆ!

ದೂರಿನಲ್ಲಿ ಏನಿದೆ?

ರಾಜ್ಯ ವಕ್ಫ್‌ ಮಂಡಳಿಯ ಕಲಬುರಗಿ ದರ್ಗಾಕ್ಕೆ ಸೇರಿದ ಆಸ್ತಿಯನ್ನು ರಾಜ್ಯ ಸರ್ಕಾರವು ಒತ್ತುವರಿ ಮಾಡಿದ್ದ ಹಿನ್ನೆಲೆಯಲ್ಲಿ ಮಂಡಳಿಗೆ 2.29 ಕೋಟಿ ರು. ನೀಡಿತ್ತು. ಅಂತೆಯೆ ಮುಜರಾಯಿ ಇಲಾಖೆಯು ಮಂಡಳಿಗೆ 1.79 ಕೋಟಿ ರು. ನೀಡಿತ್ತು. ಈ ಮೂಲಕ ಬಂದ ಒಟ್ಟು 4 ಕೋಟಿ ರು. ಹಣವನ್ನು ರಾಜ್ಯ ವಕ್ಫ್ ಮಂಡಳಿಯು ಬೆನ್ಸನ್ ಟೌನ್‌ನ ಇಂಡಿಯನ್‌ ಬ್ಯಾಂಕ್‌ನಲ್ಲಿ ಹೊಂದಿರುವ ಉಳಿತಾಯ ಖಾತೆಗೆ ಜಮೆ ಮಾಡಲಾಗಿತ್ತು.

ನಿಶ್ಚಿತ ಠೇವಣಿ ಇರಿಸಲು ಹಣ ವರ್ಗಾವಣೆ:

ಈ ಸಂದರ್ಭದಲ್ಲಿ ಅಂದಿನ ವಕ್ಫ್‌ ಮಂಡಳಿ ಸಿಇಒ ಝುಲ್ಫಿಕರುಲ್ಲಾ 2016ರ ನವೆಂಬರ್‌ 26ರಂದು ವಕ್ಫ್‌ ಮಂಡಳಿಯು ಚಿಂತಾಮಣಿಯ ವಿಜಯ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ ಎರಡು ಚೆಕ್‌ಗಳ ಮುಖಾಂತರ ಈ ಹಣ ವರ್ಗಾಯಿಸಿದ್ದರು. ಈ ಹಣವನ್ನು ನಿಶ್ಚಿತ ಠೇವಣಿ ಇರಿಸುವಂತೆ ಬ್ಯಾಂಕ್‌ಗೆ ಸೂಚಿಸಿದ್ದರು. ಈ ಹಣ ವರ್ಗಾವಣೆ ಹಾಗೂ ನಿಶ್ಚಿತ ಠೇವಣಿಗೆ ಸೂಚಿಸಿರುವ ವಿಚಾರವನ್ನು ಝುಲ್ಫಿಕರುಲ್ಲಾ ವಕ್ಫ್‌ ಮಂಡಳಿ ಗಮನಕ್ಕೆ ತಂದಿರಲಿಲ್ಲ. ಇದರಿಂದ ವಕ್ಫ್‌ ಮಂಡಳಿಗೆ 8.03 ಕೋಟಿ ರು. ನಷ್ಟವಾಗಿತ್ತು.

ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿಲ್ಲ:

ಈ ನಡುವೆ 2022ರ ಮಾರ್ಚ್‌ 31ರಂದು ವಕ್ಫ್‌ ಮಂಡಳಿ ಸಭೆಯಲ್ಲಿ ಈ ಹಣ ವರ್ಗಾವಣೆ ವಿಚಾರ ಚರ್ಚೆಗೆ ಬಂದಿದ್ದು, ಮಂಡಳಿಗೆ ನಂಬಿಕೆ ದ್ರೋಹ ಮಾಡಿ ಆರ್ಥಿಕ ನಷ್ಟವನ್ನುಂಟು ಮಾಡಿರುವ ಮಾಜಿ ಸಿಇಒ ಝುಲ್ಫಿಕರುಲ್ಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಣ ವರ್ಗಾವಣೆ ಬಗ್ಗೆ ಝಲ್ಪಿಕರುಲ್ಲಾ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ನೋಟಿಸ್‌ಗೆ ಝುಲ್ಫಿಕರುಲ್ಲಾ ಸರಿಯಾದ ಉತ್ತರ ನೀಡಿರಲಿಲ್ಲ.

\ಕಾರ್ಯದರ್ಶಿ ಸೂಚನೆ ಮೇರೆಗೆ ದೂರು:

ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಾಗ, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಕಾರ್ಯದರ್ಶಿ ಅವರು ಮಂಡಳಿ ಮಾಜಿ ಸಿಇಒ ಝುಲ್ಫಿಕರುಲ್ಲಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ 2024ರ ಜೂನ್‌ 12ರಂದು ಸೂಚನೆ ನೀಡಿದ್ದಾರೆ ಎಂದು ರಾಜ್ಯ ವಕ್ಫ್‌ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಅಹಮ್ಮದ್‌ ಅಬ್ಬಾಸ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ವಾಲ್ಮೀಕಿ ನಿಗಮದ ₹20 ಕೋಟಿ ಎಲೆಕ್ಷನ್‌ಗೆ ಬಳಸಿದ್ದ ನಾಗೇಂದ್ರ?

ಈ ಸಂಬಂಧ ರಾಜ್ಯ ವಕ್ಫ್‌ ಮಂಡಳಿಯ ಮಾಜಿ ಸಿಇಒ ಝುಲ್ಫಿಕರುಲ್ಲಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!