
ಮೈಸೂರು[ಜ.10]: ನಿಗಮ-ಮಂಡಳಿ ನೇಮಕಾತಿ ವಿಷಯದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಸಮಾಧಾನಗೊಂಡಿರುವ ವಿಷಯಕ್ಕೆ ಸಂಬಂಧಿಸಿ ಹಾದಿ- ಬೀದಿಯಲ್ಲಿ ಮಾತನಾಡುವುದಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಡನೆ ಮಾತನಾಡಿ ಮುಂದಿನ ವಾರ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಮುಂಬರುವ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರವನ್ನು ಅದೇ ಸಭೆಯಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ, ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌ಗೂ ಯಾವುದೇ ಅಸಮಾಧಾನ ಇಲ್ಲ. ಅವರ ಜೊತೆಯೂ ಮಾತನಾಡುತ್ತೇನೆ. ರಾಜಕೀಯದಲ್ಲಿ ಯಾವಾಗಲೂ ಎಲ್ಲರೂ ಖುಷಿಯಾಗಿ ಇರುವುದಿಲ್ಲ. ಅಸಮಾಧಾನ ಇರುತ್ತದೆ ಎಂದರು.
ಮುಷ್ಕರ ಕಾಂಗ್ರೆಸ್ ಪ್ರೇರಿತ ಅಲ್ಲ:
ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳನ್ನು ಹೊರತುಪಡಿಸಿ ಉಳಿದ ಕಾರ್ಮಿಕ ಸಂಘಟನೆಗಳೆಲ್ಲಾ ಭಾಗಿಯಾಗಿವೆ. ಕಾರ್ಮಿಕರ ಮುಷ್ಕರ ನ್ಯಾಯಯುತವಾಗಿದೆ. ಕಾರ್ಮಿಕರ ಮುಷ್ಕರ ಕಾಂಗ್ರೆಸ್ ಪ್ರೇರಿತವಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮೇಲ್ವರ್ಗ ಮೀಸಲು ಗಿಮಿಕ್
ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲಾತಿ ನೀಡಬೇಕು ಎಂಬ ಮಸೂದೆ ಮಂಡನೆ ಬಿಜೆಪಿಯ ಚುನಾವಣಾ ಗಿಮಿಕ್. ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಬೇಕು ಎಂಬುದು ಸ್ವಾಗತಾರ್ಹ. ಆದರೆ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಬಿಜೆಪಿಯವರೇ ಈಗ ಮೀಸಲಾತಿ ಮಸೂದೆ ಮಂಡನೆಗೆ ಮುಂದಾಗಿರುವುದು ಕೇವಲ ಚುನಾವಣಾ ಗಿಮಿಕ್ ಅಷ್ಟೆ, ಬೇರೇನೂ ಅಲ್ಲ.
- ಸಿದ್ದರಾಮಯ್ಯ, ಮಾಜಿ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ