
ಮಯೂರ್ ಹೆಗಡೆ
ಬೆಂಗಳೂರು (ಜುಲೈ 9): ಮಕ್ಕಳಿಗಾಗಿ ಅಸ್ಥಿಮಜ್ಜೆ ಕಸಿ, ಅಂಗಾಂಗ ಕಸಿ ಶಸ್ತ್ರಚಿಕಿತ್ಸಾ ಘಟಕ ಸೇರಿ ಅತ್ಯಾಧುನಿಕ ಸೌಲಭ್ಯ ಇರುವ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ (ಐಜಿಐಸಿಎಚ್) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶೀಘ್ರ ಸೇವೆ ಲಭಿಸಲಿದೆ.
ಪ್ರಸ್ತುತ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ರಾಜ್ಯ, ಹೊರರಾಜ್ಯದಿಂದ ಪ್ರತಿದಿನ ಸರಾಸರಿ 500ಕ್ಕೂ ಅಧಿಕ ಮಕ್ಕಳು ತಪಾಸಣೆಗೆ ಒಳಪಡುತ್ತಿದ್ದಾರೆ. ಒಳರೋಗಿಗಳಾಗಿ ಸರಾಸರಿ 80 ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಆದರೆ, ಇಲ್ಲಿ ತುರ್ತು ಚಿಕಿತ್ಸಾ ವಿಭಾಗ ಸೇರಿ 450 ರಷ್ಟು ಹಾಸಿಗೆ ಮಾತ್ರ ಲಭ್ಯವಿದೆ. ಕೆಲ ವೇಳೆ ಹಾಸಿಗೆ ಕೊರತೆ ಕಾರಣಕ್ಕೆ ಒಂದೇ ಹಾಸಿಗೆಯಲ್ಲಿ ಎರಡು ಮಕ್ಕಳಿಗೆ ಚಿಕಿತ್ಸೆ ನೀಡಿದ ಉದಾಹರಣೆಗಳೂ ಇವೆ. ಚಿಕಿತ್ಸೆ ವಿಳಂಬವಾದ ದೂರುಗಳೂ ಬಂದಿವೆ. ಇವೆಲ್ಲದರ ನಡುವೆ ಈಗ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ತಲೆ ಎತ್ತಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರ 2019ರಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕಾಗಿ ಅನುದಾನ ನೀಡಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿತು. ಆದರೆ, ಕೋವಿಡ್-ಲಾಕ್‌ಡೌನ್‌ನಿಂದಾಗಿ ಕಾಮಗಾರಿ ವಿಳಂಬವಾಯಿತು. ಇದೀಗ ಸುಮಾರು ₹100 ಕೋಟಿ ವೆಚ್ಚದಲ್ಲಿ ಸೂಪರ್‌ಸ್ಪೆಷಾಲಿಟಿ ಬ್ಲಾಕ್‌ನ ಕಾಮಗಾರಿ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: Heart attacks in Children: ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್ ಬಳಕೆ ಕಾರಣ! KMCRI ಆಘಾತಕಾರಿ ವರದಿ ಬಹಿರಂಗ
8 ಮಹಡಿ ಸೂಪರ್ ಸ್ಪೆಷಾಲಿಟಿಯ ಈ ಬ್ಲಾಕ್ 450 ಹಾಸಿಗೆ ಸಾಮರ್ಥ್ಯ ಹೊಂದಿದೆ. 8ನೇ ಮಹಡಿಯಲ್ಲಿ ಅಸ್ಥಿಮಜ್ಜೆ ಕಸಿ (ಬಿಎಂಟಿ) ವಿಭಾಗ, 7ನೇ ಮಹಡಿ ಅಂಗಾಂಗ ಕಸಿ ವಿಭಾಗ ಇರಲಿದೆ. 6ನೇ ಮಹಡಿ ಸೇವಾ ವಲಯವಾಗಿ ಬಳಕೆಯಾದರೆ 5ನೇ ಮಹಡಿಯಲ್ಲಿ 50 ಹಾಸಿಗೆಗಳ ನವಜಾತ ತುರ್ತು ಚಿಕಿತ್ಸಾ ಘಟಕ, 4, 3, 2ನೇ ಮಹಡಿಯಲ್ಲಿ ವಾರ್ಡ್‌ಗಳು ಇರಲಿವೆ. ಇನ್ನು, 1ನೇ ಮಹಡಿಯಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗ, ಎಂಆರ್‌ಐ, ಸಿಟಿ ಸೇರಿ ಪ್ರಯೋಗಾಲಯ ಪರೀಕ್ಷಾ ವಿಭಾಗ ಇರಲಿದೆ. ತಳಮಹಡಿ ಪಾರ್ಕಿಂಗ್‌ಗೆ ಬಳಕೆ ಆಗಲಿದೆ ಎಂದು ಆಸ್ಪತ್ರೆ ತಿಳಿಸಿದೆ.
ಮಕ್ಕಳಿಗೆ ಅಸ್ಥಿಮಜ್ಜೆ ಕಸಿ ಘಟಕ:
ವಿಶೇಷವಾಗಿ ಅಸ್ತಿಮಜ್ಜೆ ಕಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ರಾಜ್ಯದ 2ನೇ ಅಸ್ಥಿಮಜ್ಜೆ ಕಸಿ ಘಟಕ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಜತೆಗೆ ಇದು ಮಕ್ಕಳಿಗೆ ಮಾತ್ರ ಸೇವೆ ನೀಡಲಿರುವುದು ವಿಶೇಷ. ಅದರಂತೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸಾ ಘಟಕವು ಮಕ್ಕಳ ಜೀವ ಉಳಿಸುವಲ್ಲಿ ಹೆಚ್ಚು ನೆರವಾಗುವುದಲ್ಲದೆ ಬಡವರಿಗೆ ಅನುಕೂಲ ಆಗಲಿದೆ.
ಖಾಸಗಿಯಲ್ಲಿ ಇವೆರಡು ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ. ಆದರೆ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಇನ್ನು ಗರ್ಭಾವಸ್ಥೆಯಲ್ಲೇ ಶಿಶುಗಳ ಆರೋಗ್ಯ ಸಮಸ್ಯೆ ಪತ್ತೆ ಮಾಡಿ ಆಗಲೇ ಚಿಕಿತ್ಸೆ ಒದಗಿಸುವ ಫೀಟಲ್ ಸೌಲಭ್ಯ, ಪ್ರಯೋಗಾಲಯ ನೂತನ ಕಟ್ಟಡಕ್ಕೆ ಸ್ಥಳಾಂತರ ಆಗಲಿದೆ. 2ನೇ ಹಂತದಲ್ಲಿ ಇಲ್ಲಿ ರೊಬಾಟಿಕ್ ಸೇವೆ ಆರಂಭಿಸುವ ಯೋಜನೆ ಇದೆ ಎಂದು ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಸಂಜಯ್ ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಕಟ್ಟಡ ಕಾಮಗಾರಿ ಮುಗಿದಿದೆ. ವೈದ್ಯಕೀಯ ಉಪಕರಣ, ಸಿಬ್ಬಂದಿ ನೇಮಕಕ್ಕೆ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿದು ಶೀಘ್ರ ಆಸ್ಪತ್ರೆ ಉದ್ಘಾಟನೆ ಆಗಲಿದೆ.
- ಡಾ.ಕೆ.ಎಸ್. ಸಂಜಯ್, ನಿರ್ದೇಶಕರು, ಐಜಿಐಸಿಎಚ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ