ಪತಿಯ ಚೆಕ್‌ ಬೌನ್ಸ್‌ ಆದರೆ ಪತ್ನಿ ವಿರುದ್ಧ ಕೇಸ್‌ ಇಲ್ಲ: ಹೈಕೋರ್ಟ್‌

By Kannadaprabha News  |  First Published Nov 4, 2022, 11:00 AM IST

ಪತಿಯ ಸಹಿಯಿರುವ ಚೆಕ್‌ ಬೌನ್ಸ್‌ ಆಗಿದ್ದಕ್ಕೆ ಪತ್ನಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್‌


ಬೆಂಗಳೂರು(ನ.04): ಪತಿಯ ಸಹಿಯಿರುವ ಚೆಕ್‌ ಬೌನ್ಸ್‌ ಆಗಿದ್ದಕ್ಕೆ ಪತ್ನಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಗೃಹಿಣಿಯೊಬ್ಬರ ವಿರುದ್ಧ ದಾಖಲಿಸಿದ್ದ ಚೆಕ್‌ ಬೌನ್ಸ್‌ ದೂರು ರದ್ದುಪಡಿಸಿದೆ. ಬೆಂಗಳೂರಿನ ವೀಣಾಶ್ರೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ:

Tap to resize

Latest Videos

ಅರ್ಜಿದಾರೆ ವೀಣಾಶ್ರೀ, ಆಕೆಯ ಪತಿ ಹಾಗೂ ಅತ್ತೆ ಅವರು ಶಂಕರ್‌ ಎಂಬುವರಿಂದ ಒಂದಷ್ಟುಹಣ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತರಿಯಾಗಿ ವೀಣಾಶ್ರೀ ಪತಿ ಸಹಿಯಿರುವ ಚೆಕ್‌ ವಿತರಿಸಲಾಗಿತ್ತು. ಆ ಚೆಕ್‌ ಬೌನ್ಸ್‌ ಆದ ಕಾರಣ, 2017ರಲ್ಲಿ 22ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶಂಕರ್‌ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವೀಣಾಶ್ರೀ ತಮ್ಮ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಪೌರಸಂಸ್ಥೆ ನಾಮನಿರ್ದೇಶಿತರಿಗೆ ಎಂಎಲ್‌ಸಿ ಚುನಾವಣೆ ಮತ ಹಕ್ಕಿಲ್ಲ: ಹೈಕೋರ್ಟ್

ಬೌನ್ಸ್‌ ಆಗಿರುವ ಚೆಕ್‌ಗೆ ತಾವು ಸಹಿ ಹಾಕಿಲ್ಲ. ಪತಿಯಷ್ಟೇ ಸಹಿ ಹಾಕಿರುವ ಕಾರಣ ತಮ್ಮನ್ನು ಅಭಿಯೋಜನೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರಕರಣದಲ್ಲಿ ಚೆಕ್‌ಗೆ ಅರ್ಜಿದಾರರು ಸಹಿ ಹಾಕಿಲ್ಲ. ವಿತರಿಸಲಾಗಿರುವ ಚೆಕ್‌ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಇಂತಹ ಸಂದರ್ಭದಲ್ಲಿ ಪತಿ ವಿತರಿಸಿದ ಚೆಕ್‌ನ ಬೌನ್ಸ್‌ ಪ್ರಕರಣದಲ್ಲಿ ಅರ್ಜಿದಾರೆಯನ್ನು ಆರೋಪಿ ಮಾಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರ ಪತಿ ಚೆಕ್‌ ನೀಡಿರುವುದಾಗಿ ದೂರುದಾರರೇ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದು, ಅವರು ಕಂಪನಿ, ಸಂಸ್ಥೆ ಅಥವಾ ಸಂಘವನ್ನು ಆರಂಭಿಸಿಲ್ಲ.
ಅರ್ಜಿದಾರ ವಿರುದ್ಧ 2017ರ ಡಿ.8ರಂದು 22ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾದ ದೂರು ರದ್ದುಪಡಿಸಿ, ಆದೇಶ ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
 

click me!