ಬೆಂಗಳೂರು (ನ.4) ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿರುವ ಕಾಶಿ ಯಾತ್ರೆಗೆ ಪ್ರವಾಸಿಗರನ್ನು ಕೊಂಡೊಯ್ಯುವ ‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ’ ರೈಲು ಸಂಪೂರ್ಣ ಸಿದ್ಧಗೊಂಡಿದ್ದು, ಗುರುವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪರಿಶೀಲಿಸಿದರು.
ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಪ್ರಕಟ,ಕರ್ನಾಟಕದ ಯಾತ್ರಾರ್ಥಿಗಳಿ ಸಹಾಯ ಧನ
ಪರಿಶೀಲನೆ ಬಳಿಕ ರೈಲ್ವೆ ಅಧಿಕಾರಿಗಳು, ಐಆರ್‌ಸಿಟಿಸಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನ.11ರಿಂದ ಆರಂಭವಾಗಲಿರುವ ಮೊದಲ ಕಾಶಿ ಯಾತ್ರೆ ಪ್ರವಾಸಕ್ಕೆ ಈಗಾಗಲೇ ಆಸನಗಳು ಭರ್ತಿಯಾಗಿರುವುದರಿಂದ ನ.23ಕ್ಕೆ ಎರಡನೇ ಪ್ರವಾಸ ಹಮ್ಮಿಕೊಳ್ಳಲು ಸೂಚಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್ ಗೌರವ್ ರೈಲು ಪ್ರಾರಂಭಿಸುತ್ತಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪಾತ್ರವಾಗಲಿದೆ. ನ.11ರಂದು ಹೊರಡುವ ಮೊದಲ ಪ್ರವಾಸ 8 ದಿನಗಳಾಗಿದ್ದು, ಈ ಯಾತ್ರೆಯಲ್ಲಿ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.
ಮೂರು ದಿನಗಳಲ್ಲಿಯೇ ಬುಕ್ಕಿಂಗ್ ಫುಲ್:
ಈಗಾಗಲೇ ಎರಡನೇ ಪ್ರವಾಸಕ್ಕೆ 100ಕ್ಕೂ ಹೆಚ್ಚು ಮಂದಿ ಬುಕ್ಕಿಂಗ್‌ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎ.ಸಿ.ಯ ವ್ಯವಸ್ಥೆಯನ್ನು ಮಾಡಲಾಗಿದೆ. ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಊಟ, ಉಪಾಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಪ್ರಧಾನಿ ಮೋದಿ ಚಾಲನೆ ಸಾಧ್ಯತೆ:
ಪ್ರಧಾನಿ ನರೇಂದ್ರ ಮೋದಿಯವರು ನ.11ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮಗಳ ಜೊತೆಯಲ್ಲಿಯೇ ನಮ್ಮ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲಿಗೂ ಚಾಲನೆ ನೀಡಲಿ ಎನ್ನುವುದು ನಮ್ಮ ಆಶಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದು, ಸದ್ಯದಲ್ಲೇ ಪ್ರಧಾನಿ ಕಾರ್ಯಾಲಯದಿಂದ ಒಪ್ಪಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಕರ್ನಾಟಕದ 30 ಸಾವಿರ ಭಕ್ತರಿಗೆ ಉಚಿತ ಕಾಶಿ ಯಾತ್ರೆ: ಸಚಿವೆ ಜೊಲ್ಲೆ
ರೈಲ್ವೆ ಬೋಗಿ ಮೇಲೆ ರಾಜ್ಯದ ದೇಗುಲಗಳ ಚಿತ್ರ
ಈ ರೈಲ್ವೆ 14 ಬೋಗಿಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಬೋಗಿಯ ಮೇಲೂ ರಾಜ್ಯದ ದೇವಸ್ಥಾನಗಳ ಛಾಯಾಚಿತ್ರಗಳನ್ನು ಹಾಕಲಾಗಿದೆ. ಪ್ರಮುಖವಾಗಿ ಹಂಪಿ ವಿರೂಪಾಕ್ಷ, ಕುಕ್ಕೆ ಸುಬ್ರಮಣ್ಯ, ಮೈಸೂರು ಚಾಮುಂಡೇಶ್ವರಿ, ಬೆಂಗಳೂರು ಬನಶಂಕರಿ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ, ಸಿಂಗಂಧೂರು ಚೌಡೇಶ್ವರಿ, ಬಾದಾಮಿ ಬನಶಂಕರಿ ದೇವಸ್ಥಾನ ಸೇರಿದಂತೆ 28 ದೇವಸ್ಥಾನಗಳ ಬ್ರಾಂಡಿಂಗ್ ಮಾಡಲಾಗಿದೆ. ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್ ಮೂಲಕ ಪ್ರಚಾರ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ಐಆರ್‌ಸಿಟಿಸಿ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.