ನಟ ದರ್ಶನ್‌ಗೆ ಬೆನ್ನು ನೋವು ಸಮಸ್ಯೆ ಕಾಣಿಸಿಕೊಂಡಿದ್ದು, ಪ್ಯಾರಾಲಿಸಿಸ್ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 3 ತಿಂಗಳು ಜಾಮೀನು ಕೋರಿ ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ನ್ಯಾಯಾಲಯ ನಾಳೆಗೆ ಆದೇಶ ಕಾಯ್ದಿರಿಸಿದೆ.
ಬೆಂಗಳೂರು (ಅ.29): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಸೆಂಟ್ರಲ್‌ಜೈಲಿನಲ್ಲಿರುವ ನಟ ದರ್ಶನ್‌ಗೆ ಹಲವು ದಿನಗಳಿಂದ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದೀಗ ಚಿಕಿತ್ಸೆ ಕೊಡಿಸದಿದ್ದರೆ ಪ್ಯಾರಾಲಿಸಿಸ್ ಹಾಗೂ ಮರಗಟ್ಟುವಿಕೆ (ನಂಬ್ನೆಸ್ ) ಆಗುವ ಸಾಧ್ಯತೆಯಿದೆ. ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು 3 ತಿಂಗಳು ಜಾಮೀನು ಕೊಡಬೇಕು ಎಂದು ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ವಾದ ಮಂಡಿಸಿದರು. ಆದರೆ, ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ನಾಳೆಗೆ ಆದೇಶವನ್ನು ಕಾಯ್ದಿರಿಸಿದ್ದಾರೆ.
ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು, ಬಳ್ಳಾರಿಯ ವಿಮ್ಸ್ ವೈದ್ಯರು ನೀಡಿದ್ದ ವೈದ್ಯಕೀಯ ವರದಿ ಹಾಗೂ ಅ.24ರಂದು ನಡೆಸಿದ ಎಂಆರ್‌ಐ ಸಕ್ಯಾನ್ ವರದಿ ಆಧರಿಸಿ ವಾದಮಂಡನೆ ಮಾಡಿದರು. ದರ್ಶನ್‌ಗೆ ಬೆನ್ನಿನ ನರದ L5 ಹಾಗೂ S1 ನಲ್ಲಿ ಸಮಸ್ಯೆ ಕಂಡು ಬಂದಿದೆ. ಸಾಂಪ್ರದಾಯಿಕ ಹಾಗೂ ಶಸ್ತ್ರಚಿಕಿತ್ಸೆ ಬಗ್ಗೆ ಚರ್ಚೆ ಮಾಡಲಾಗಿದೆ. ಸೊಂಟಕ್ಕೆ ಪಟ್ಟಿ ಕಟ್ಟಿ, ಔಷದ ನೀಡಿದಾಗ ಸಮಸ್ಯೆ ಸ್ವಲ್ಪ ಕಡಿಮೆ ಆಗಿದೆ. ಆದರೆ, ಮುಂದೆ ಆಗುವ ಮೂತ್ರ ನಿಯಂತ್ರಣ ಕಳೆದುಕೊಳ್ಳುವ ಹಾಗೂ ಪಾದ ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಇರುತ್ತದೆ. ಬಳ್ಳಾರಿಯಲ್ಲಿ ನ್ಯೂರೋ ನ್ಯಾವಿಗೇಷನ್ ಲಭ್ಯವಿಲ್ಲ. ಹೀಗಾಗಿ, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 3 ತಿಂಗಳ ಕಾಲ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.
undefined
ಇದನ್ನೂ ಓದಿ: 'ದರ್ಶನ್‌ಗೆ ಸ್ಟ್ರೋಕ್ ಆಗಬಹುದು..' ಹೈಕೋರ್ಟ್‌ಗೆ ತಿಳಿಸಿದ ಕಿಲ್ಲಿಂಗ್ ಸ್ಟಾರ್ ಪರ ವಕೀಲ
ಆದರೆ, ಇದಕ್ಕೆ ಪ್ರತಿವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು, ದರ್ಶನ್‌ಗೆ ಬೆಂಗಳೂರಿನ ವಿಕ್ಟೋರಿಯಾ ಅಥವಾ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬಹುದು. ವಿಕ್ಟೋರಿಯಾ ಹಾಗೂ ಬೌರಿಂಗ್‌ನ ಮೆಡಿಕಲ್ ಬೋರ್ಡ್ ನಲ್ಲಿ ತಪಾಸಣೆ ಆಗಲಿ. ಯಾವ ಆಪರೇಷನ್ ಮಾಡಬೇಕು.? ಎಷ್ಟು ದಿನ ಇನ್‌ಪೇಷಂಟ್ (ಒಳರೋಗಿ) ಆಗಬೇಕು ಎಂಬ ಬಗ್ಗೆ ವರದಿಯಲ್ಲಿ ತಿಳಿಸಿಲ್ಲ. ದರ್ಶನ್‌ಗೆ ಯಾವ ರೀತಿ ಚಿಕಿತ್ಸೆ ಬೇಕು ಎಂದು ಮೆಡಿಕಲ್ ಬೋರ್ಡ್ ತೀರ್ಮಾನ ಮಾಡಲಿ. ಬಳ್ಳಾರಿಯ ವಿಮ್ಸ್ ವೈದ್ಯರು ನೀಡಿರುವ ವರದಿ ಬಗ್ಗೆಯೂ ಅನುಮಾನ ಇದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು, ತಕ್ಷಣ ಚಿಕಿತ್ಸೆ ಪಡೆಯದಿದ್ದರಡ ನಂಬ್ನೆಸ್ ಹಾಗೂ ಪ್ಯಾರಲಿಸಿಸ್ ಆಗುವ ಸಾಧ್ಯತೆ ಇದೆ. ಎಲ್ 5,ಎಸ್ 1ನಲ್ಲಿ ಬಲ್ಜ್ ಆಗಿದ್ದು ಗಂಭೀರವಾದ ಸಮಸ್ಯೆ ಇದೆ. ಸ್ಪೈನಲ್ ಕಾರ್ಡ್ ನಲ್ಲಿ ಸಮಸ್ಯೆ ಇದೆ. ಹೀಗಾಗಿ ದರ್ಶನ್ ಗೆ ಸರ್ಜಿಕಲ್ ಚಿಕಿತ್ಸೆ ಅಗತ್ಯವಿದೆ. ಕನ್ಸರ್ವೇಟಿವ್ ಟ್ರಿಟ್ ಮೆಂಟ್ ನಿಂದ ನೋವು ಕಡಿಮೆ ಆಗಬಹುದು. ಆದರೆ ಸಮಸ್ಯೆ ಕ್ಲಿಯರ್ ಆಗಲ್ಲ. ಹೀಗಾಗಿ ಸರ್ಜಿಕಲ್ ಟ್ರಿಟ್ಮೆಂಟ್ ಅಗತ್ಯ ಇದೆ. ಎಲ್ 4, ಎಲ್ 5 ಡಿಸ್ಕ್ ಕೂಡ ಬಲ್ಜ್ ಆಗಿದೆ. ಈ ಸಮಸ್ಯೆ 2022ರಿಂದ ಸಮಸ್ಯೆ ಇತ್ತು. ಆದರೆ ಇತ್ತೀಚೆಗೆ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಚಿಕಿತ್ಸೆ ಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ದರ್ಶನ್ ಬೇಲ್‌ಗೆ ಸಹಾಯ ಮಾಡ್ತೀನಿ ಅವರು ಫ್ಯಾಮಿಲಿ ಸಂಪರ್ಕ ಮಾಡ್ಲಿ, ಆಗ ಸಂಜೆ ಶೆಡ್‌ಗೆ ಹೋಗ್ಬಾರ್ದು: ಲಾಯರ್ ಜಗದೀಶ್
ಯಾವ ಆಪರೇಷನ್ ಎಷ್ಟು ದಿನ ಅಂತ ಆಸ್ಪತ್ರೆಗೆ ಅಡ್ಮಿಟ್ ಆದ ಮೇಲೆ ಗೊತ್ತಾಗುತ್ತದೆ. ಬಳ್ಳಾರಿ ಆಸ್ಪತ್ರೆಯ ವರದಿಯನ್ನ ಸುಳ್ಳು ಎಂದು ಎಸ್ಪಿಪಿ ಹೇಗೆ ಹೇಳ್ತಾರೆ. ಆಪರೇಷನ್‌ಗಾಗಿ 3 ತಿಂಗಳ ಅವಕಾಶ ನೀಡಬೇಕು. ಯಾವಾಗ ಚಿಕಿತ್ಸೆ ಪಡೆಯಬೇಕು ಎಂದು ಕೊಂಡಿದ್ದಿರಿ? ಜಡ್ಜ್ ಕೇಳಿದ್ದಕ್ಕೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಯೋಚಿಸಲಾಗಿದೆ. ಅಪೋಲೋ ಆಸ್ಪತ್ರೆಗೆ ಅಡ್ಮಿಟ್ ಆದ ನಂತರ ಎಷ್ಟು ದಿನ ಆಗತ್ತೆ ಅನ್ನೋದು ಗೊತ್ತಾಗತ್ತದೆ ಎನ್ನುವ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ನೇರವಾಗಿ ನಿರಾಕರಣೆ ಮಾಡಿದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ನಟ ದರ್ಶನ್‌ಗೆ ಚಿಕಿತ್ಸೆ ಪಡೆಯವುದಕ್ಕೆ ಜಾಮೀನು ಮಂಜೂರು ಮಾಡುವ ಬಗ್ಗೆ ನಾಳೆಗೆ ಆದೇಶ ಕಾಯ್ದಿರಿಸಿದರು.