2 ಸಾವಿರ ವರ್ಷ ಇತಿಹಾಸ ಇರುವ ಕಲಾಸಿಪಾಳ್ಯದ ದೇವಾಲಯ | ನಂದಿ ಮೇಲೆ ಶಿವ- ಪಾರ್ವತಿ ಕುಳಿತ್ತಿರುವ ನಂದಿ ಭೃಂಗಿ ವಿಗ್ರಹ
ಬೆಂಗಳೂರು(ಜ.04): ಕಲಾಸಿಪಾಳ್ಯದ ಇತಿಹಾಸ ಪ್ರಸಿದ್ಧ ಕೋಟೆ ಜಲಕಂಠೇಶ್ವರಸ್ವಾಮಿ ದೇವಾಲಯದ ಸಮೀಪ ಮೈದಾನದಲ್ಲಿ ಭಾನುವಾರ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ಪುರಾತನ ವಿಗ್ರಹ ಹಾಗೂ ಮುದ್ದುಗುಂಡುಗಳು ಪತ್ತೆಯಾಗಿವೆ.
ಇಲ್ಲಿನ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಹೊಸ ಕಟ್ಟಡ ನಿರ್ಮಾಣ ಸಂಬಂಧ ಪಾಯ ತೆಗೆಯುವಾಗ ಮೊದಲಿಗೆ ಕಲ್ಯಾಣಿ ಪತ್ತೆಯಾಗಿದ್ದು, ಬಳಿಕ ಶಿವ-ಪಾರ್ವತಿ ನಂದಿ ಮೇಲೆ ಕುಳಿತಿರುವ ‘ನಂದಿ ಭೃಂಗಿ’ ವಿಗ್ರಹ ಮತ್ತು ಕಲ್ಲಿನ ಮದ್ದುಗುಂಡುಗಳು ಪತ್ತೆಯಾಗಿವೆ. ಈ ವಿಚಾರ ತಿಳಿದು ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕುತೂಹಲದಿಂದ ವಿಗ್ರಹ ಹಾಗೂ ಮದ್ದುಗುಂಡುಗಳನ್ನು ವೀಕ್ಷಣೆ ಮಾಡಿದರು.
ಈ ಕೋಟೆ ಜಲಕಂಠೇಶ್ವರ ದೇವಾಲಯಕ್ಕೆ ಸುಮಾರು ಎರಡು ಸಾವಿರ ವರ್ಷದ ಇತಿಹಾಸವಿದೆ. ಈ ದೇವಾಲಯದ ಸಮೀಪದ ಮೈದಾನದಲ್ಲಿ ಪಾಯ ತೆಗೆಯುವಾಗ ಪತ್ತೆಯಾದ ಕಲ್ಯಾಣಿಯಲ್ಲಿ ಈ ವಿಗ್ರಹ ಹಾಗೂ ಮದ್ದುಗುಂಡುಗಳು ಪತ್ತೆಯಾಗಿವೆ. ಈ ಕಲ್ಯಾಣಿ ದೇವಾಲಯಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ.
ವಿಗ್ರಹ ಹಾಗೂ ಮುದ್ದುಗುಂಡುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಕೋಟೆ ಜಲಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮೋಹನ್ ದೀಕ್ಷಿತ್ ಹೇಳಿದರು.