ಬೆಂಗಳೂರಿನಲ್ಲಿ ಸ್ವ್ಯಾಬ್ ಸಂಗ್ರಹಿಸಿದ್ದ ಮುನೀಶ್ ಮೌದ್ಗಿಲ್| ವೈದ್ಯಕೀಯ ಹಿನ್ನೆಲೆ ಇಲ್ಲದ್ದಕ್ಕೆ ಪರ ವಿರೋಧ ತೀವ್ರ ಚರ್ಚೆ| ನೀವೇನು ಬಯಾಲಜಿ ಸ್ಟೂಡೆಂಟಾ? ನಿಮಗೆ ಸ್ವ್ಯಾಬ್ ತೆಗೆಯಲು ಅನುಮತಿ ಇದೆಯಾ? ಎಂದು ಪ್ರಶ್ನಿಸಿದ ಕೆಲವರು|
ಬೆಂಗಳೂರು(ಆ.26): ಐಎಎಸ್ ಅಧಿಕಾರಿ ಕೋವಿಡ್ ವಾರ್ ರೂಂ ಉಸ್ತುವಾರಿ ಮುನೀಶ್ ಮೌದ್ಗಿಲ್ ಅವರು ಕೊರೋನಾ ಪರೀಕ್ಷೆಗೆ ಸಾರ್ವಜನಿಕರ ಸ್ವ್ಯಾಬ್ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಮೌದ್ಗಿಲ್ ಅವರು ಮಾಡಿದ್ದು ಸರಿಯೇ ತಪ್ಪೇ ಎಂಬ ಚರ್ಚೆ ಆರಂಭವಾಗಿದೆ.
ಬೆಂಗಳೂರಿನ ವಿದ್ಯಾಪೀಠ ಆರೋಗ್ಯ ಕೇಂದ್ರದಲ್ಲಿ ಆ.22ರಂದು ಬಿಬಿಎಂಪಿ ಆರೋಗ್ಯ ಇಲಾಖೆ ಆಯೋಜಿಸಿದ್ದ ಸಾರ್ವಜನಿಕರಿಗೆ ಕೊರೋನಾ ಪರೀಕ್ಷಾ ಕಾರ್ಯಕ್ರಮದಲ್ಲಿ ಮುನೀಶ್ ಮೌದ್ಗಿಲ್ ಅವರು ಪಿಪಿಇ ಕಿಟ್ ಧರಿಸಿ ಸಾರ್ವಜನಿಕರ ಮೂಗು ಮತ್ತು ಗಂಟಲು ದ್ರವ ಸಂಗ್ರಹ ಮಾಡಿದ್ದರು. ಇದನ್ನು ಐಪಿಎಸ್ ಅಧಿಕಾರಿ ಡಿ.ರೂಪಾ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಕೂಡ ಮಾಡಿ, ಗಣೇಶ ಚತುರ್ಥಿಯ ಸಾರ್ವತ್ರಿಕ ರಜಾ ದಿನದಲ್ಲೂ ಅಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ಗಹಿಸುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯೂ ವ್ಯಕ್ತವಾಗಿತ್ತು.
undefined
ಒಂದೇ ದಿನ 8 ಸಾವಿರ ದಾಟಿದ ಪಾಸಿಟಿವ್ ಕೇಸ್ : ಸಾವಲ್ಲೂ ದಾಖಲೆ
ಇದರ ಬೆನ್ನಲ್ಲೇ, ವೈದ್ಯಕೀಯ ವಲಯದ ಅನುಭವ ಇಲ್ಲದ ಅಥವಾ ತರಬೇತಿಯನ್ನೂ ಪಡೆಯದೆ ಅಧಿಕಾರಿಯೊಬ್ಬರು ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರು ಮಾಡಬೇಕಾದ ಕೆಲಸ ಮಾಡುವುದು ಎಷ್ಟುಸರಿ, ಎಂಬ ಚರ್ಚೆ ಆರಂಭವಾಗಿದೆ.
ಮೌದ್ಗಿಲ್ ಅವರು ವೈದ್ಯಕೀಯ ಶಿಕ್ಷಣ, ವೃತ್ತಿ ಅಭ್ಯಾಸದ ಹಿನ್ನೆಲೆಯುಳ್ಳವರಲ್ಲ, ಬಾಂಬೆ ಐಐಟಿ ಪದವೀಧರರು. ಇಂಜಿನಿಯರಿಂಗ್ ಕ್ಷೇತ್ರದ ಹಿನ್ನೆಲೆಯುಳ್ಳ ಐಎಎಸ್ ಅಧಿಕಾರಿ ವೈದ್ಯರು ಮಾಡಬೇಕಾದ ಕೆಲಸ ಮಾಡಲು ಸಾಧ್ಯವೇ ಎಂದು ವೈದ್ಯಕೀಯ ವಲಯ, ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಗ್ರಾಸವಾಗಿದೆ.
ಕೆಲವರು ನೀವೇನು ಬಯಾಲಜಿ ಸ್ಟೂಡೆಂಟಾ? ನಿಮಗೆ ಸ್ವಾಬ್ ತೆಗೆಯಲು ಅನುಮತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಅವರು ಸ್ವ್ಯಾಬ್ ಸಂಗ್ರಹಿಸಿರುವುದು ಕ್ರಮ ಬದ್ಧವಾಗಿಲ್ಲ ಎಂಬ ಟೀಕೆಗಳೂ ವೈದ್ಯ ವಲಯದಲ್ಲಿ ವ್ಯಕ್ತವಾಗಿವೆ. ಅಲ್ಲದೆ, ತಾವು ಮಾತ್ರ ಪಿಪಿಇ ಕಿಟ್ ಧರಿಸಿ ಅಕ್ಕಪಕ್ಕ ಇರುವ ಇತರೆ ಸಿಬ್ಬಂದಿಗೆ ಕಿಟ್ ಏಕೆ ನೀಡಿಲ್ಲ ಎಂದು ಇನ್ನೂ ಕೆಲವರು ಪ್ರಶ್ನಿಸಿದ್ದಾರೆ.