* ಬೊಮ್ಮಯಿ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ?
* ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ
* ಕೋರ್ಟ್ ಆದೇಶ ಪಾಲಿಸದವರ ಮೇಲೆ ಗುಂಡಿಟ್ಟು ಹೊಡೆಯುತ್ತೇನೆ
* ಗುಡುಗಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ, (ಜೂನ್.02):- ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು(ಗುರುವಾರ) ಮಾತನಾಡಿದ ಮುತಾಲಿಕ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡುದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಅನ್ನೊದನ್ನ ತೋರಿಸುತ್ತೇನೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ. ನನ್ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನ ಬಟಾ ಬಯಲು ಮಾಡ್ತೇವೆ. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳ್ತೇವೆ. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ. ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ ಎಂದರು.
Bagalkote: ಕೊಡಗಿನ ತ್ರಿಶೂಲ ದೀಕ್ಷೆ ತಪ್ಪೇನಲ್ಲ, ಅದೇನು ಕಾನೂನು ಬಾಹಿರವಲ್ಲ: ಪ್ರಮೋದ್ ಮುತಾಲಿಕ್
ಬೊಮ್ಮಯಿ ಯೋಗಿ ಆದಿತ್ಯ ನಾಥ್ ನೋಡಿ ಕಲಿತುಕೊಳ್ಳಿ
ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಬೊಮ್ಮಯಿ ಅಧಿಕಾರಕ್ಕೆ ಬಂದಾಗ ಖುಷಿ ಪಟ್ಟಿದ್ದೆವು. ಆದ್ರೆ ಇದೀಗ ತೀವ್ರ ನಿರಾಸೆಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಕಾರ್ಯವೈಖರಿ ಅಳವಡಿಸಿಕೊಳ್ಳಬೇಕು. ಕನಿಷ್ಠ 25% ಆದ್ರು ಯುಪಿ ಮಾದರಿ ಅಳವಡಿಸಿಕೊಳ್ಳಿ. ಬೊಮ್ಮಯಿ ಅವರೆ ನಿಮ್ಮ ಗಟ್ಸ್ ತಾಕತ್ತು ತೋರಿಸಿ. ಇಲ್ಲದಿದ್ದರೆ ನಿಮಗೆ ಮುಂದಿನ ಚುನಾವಣೆ ಕಷ್ಟವಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು. ಒಂದು ವರ್ಷದಿಂದ ನಿರಂತರವಾಗಿ ಲೌಡ್ ಸ್ಪೀಕರ್ ವಿಚಾರವಾಗಿ ಮಾತನಾಡಿದ್ದೇನೆ. ಬೆಳಗಿನ ಜಾವ ಯಾವುದೇ ಮಸೀದಿ, ಚರ್ಚೆ, ದೇವಸ್ಥಾನ ಮೇಲೆ ಮೈಕ್ ಅಳವಡಿಸಲು ಸರ್ಕಾರದ ಅನುಮತಿ ಪಡೆಯಬೇಕು ಅಂತ ಸರ್ಕಾರ ಹೇಳಿದೆ. ಸರ್ಕಾರದ ಅದೇಶ ಬಳಿಕವೂ ಒಂದೇ ಒಂದು ಮಸೀದಿ ಮೈಕ್ ಕೆಳಗಿಳಿಸಿಲ್ಲ, ಸರ್ಕಾರ ಏನ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರ ನಿಯಮಗಳನ್ನು ಇನ್ನೂ ಉಲ್ಲಂಘನೆ ಆಗುತ್ತಿದೆ. ಸರ್ಕಾರದ ಅದೇಶ ಕಸದ ಬುಟ್ಟಿಗೆ ಎಸೆಯಲಾಗಿದೆ. ಇದುವರೆಗೆ ಒಂದೇ ಒಂದು ಮೈಕ್ ಗೆ ಅನುಮತಿ ಕೋರಿ ಅರ್ಜಿ ಬಂದಿಲ್ಲ. ಸರ್ಕಾರ ಕೇವಲ ಅದೇಶ ಮಾಡಿದ್ರೆ ಮುಗಿತಾ? ಸರ್ಕಾರದ ನಿಯಮ ಪಾಲನೆ ಆಗುತ್ತಿಲ್ಲ ಎಂಬ ವಿಚಾರದಲ್ಲಿ ಯಾಕೆ ಮೌನ. ಇವತ್ತಿಗೂ ಮಸೀದಿ ಮೈಕ್ ಗಳಿಂದ ಶಾಲೆ, ಕಾಲೇಜು, ಆಸ್ಪತ್ರೆಯ ಎಲ್ಲದಕ್ಕೂ ತೊಂದರೆ ಆಗುತ್ತಿದೆ. ಇದೇ ತಿಂಗಳು 8 ತಾರೀಖು, ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಧರಣಿ ಕುಳಿತುಕೊಳ್ಳತ್ತೇವೆ. ಬಿಜೆಪಿ ಗೆದ್ದಿರೋದೆ ಹಿಂದೂಗಳಿಂದ, ಹಿಂದೂ ಕಾರ್ಯಕರ್ತರ ಶ್ರಮದಿಂದ. ಅಧಿಕಾರದ ಗದ್ದುಗೆ ಮೇಲೆ ಕೂತು ಮೆರೆಯುತ್ತಿದ್ದೀರಿ, ನಿಮಗೆ ಗೊತ್ತಿಲ್ವಾ? ನಿಮ್ಮನ್ನು ಮುಖ್ಯಮಂತ್ರಿ, ಗೃಹ ಮಂತ್ರಿ ಮಾಡಿದ್ದು ಕೆಲಸ ಮಾಡಲು. ಆದ್ರೆ ನಿಮ್ಮಲ್ಲಿ ಆ ತಾಕತ್ತು ಇಲ್ಲ? ಧಮ್ ಇಲ್ಲ? ಯಾಕೆ ಮಾಡಲಿಲ್ಲ. ಸುಪ್ರೀಂಕೋರ್ಟ್ ಅದೇಶದ ಇದ್ದಾಗ್ಯೂ, 15 ದಿನ ಗಡವು ನೀಡ್ತೀರಿ, ನಿಮ್ಮ 15 ದಿನದ ಗಡವು ಎಲ್ಲಿ ಹೋಯಿತು? ಏನ್ ಮಾಡಿದ್ರಿ..? ಎಂದು ರಾಜ್ಯ ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಕಾಶ್ಮೀರಿ ಹಿಂದೂಗಳ ಮೇಲಿನ ದಾಳಿ ತಡೆಯಿರಿ.
ಕಾಶ್ಮೀರಿ ಪಂಡಿತರ ಮೇಲೆ ದಾಳಿ ಮುಂದುವರಿದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾಶ್ಮೀರ ಚಲೋ ಹೋರಾಟ ಹಮ್ಮಿಕೊಳ್ಳೋದಾಗಿ ಎಚ್ಚರಿಸಿದ್ದಾರೆ. 32 ವರ್ಷಗಳಾಯಿತು. ಅಲ್ಲಿ ಇನ್ನೆಷ್ಟು ಹಿಂದೂಗಳ ಬಲಿಯಾಗಬೇಕು. ಕಾಶ್ಮೀರಿ ಪಂಡಿತರ ಸಾವು - ನೋವುಗಳು ಸಂಭವಿಸ್ತಿರೋದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಯಾಕೆ ದಾಳಿಕೋರರ ಮೇಲೆ ಗುಂಡು ಹೊಡೀತಿಲ್ಲಾ. ಯಾಕೆ ಅವರನ್ನು ಹದ್ದುಬಸ್ತಿನಲ್ಲಿ ಇಡಲಾಗ್ತಿಲ್ಲ ವಾಗ್ದಾಳಿ ನಡೆಸಿದರು.
ಕಾಶ್ಮೀರದಲ್ಲಿರೋ ಹಿಂದೂಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕು. ಕೇವಲ ಕಾಶ್ಮೀರಿ ಫೈಲ್ಸ್ ಸಿನೆಮಾ ತೋರಿಸಿ ನಾಟಕ ಮಾಡಿದ್ರೆ ನಡೆಯೋಲ್ಲ. ಕಾಶ್ಮೀರಿ ಫೈಲ್ಸ್ ಮತ್ತೆ ರಿಪೀಟ್ ಆಗ್ತಿದ್ದು, ಅದಕ್ಕೇನು ಮಾಡುತ್ತಿದ್ದೀರಿ. ಇದೇ ರೀತಿ ಹಿಂದೂಗಳ ಮೇಲಿನ ದಾಳಿಗಳು ಮುಂದುವರೆದರೆ ಚಲೋ ಕಾಶ್ಮೀರ ಹೋರಾಟ ಮಾಡ್ತೇವೆ. 370 ನೇ ವಿಧಿ ತೆಗೆದು ಜಮ್ಮು - ಕಾಶ್ಮೀರವನ್ನು ನಿಮ್ಮ ಕೈಯಲ್ಲಿ ಇಟ್ಟುಕೊಂಡಿದ್ದೀರಿ. ಯಾಕೆ ಪಾಕಿಸ್ತಾನಿಗಳು ಅಲ್ಲಿ ಬರ್ತಿದಾರೆ. ಯಾಕೆ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿಲ್ಲ. ದೇಶದ ಎಲ್ಲಿಯೇ ಹಿಂದೂಗಳ ಮೇಲೆ ದಾಳಿಗಳು ನಡೆದರೆ ಸುಮ್ಮನೇ ಕೂಡೋದಿಲ್ಲ. ಲಕ್ಷಾಂತರ ಜನರ ನೇತೃತ್ವದಲ್ಲಿ ಕಾಶ್ಮೀರಿ ಚಲೋ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.