
ಬೆಂಗಳೂರು (ಜೂ.02): ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಅವರ ವಿರುದ್ಧ ಬುಧವಾರ ಮತ್ತೊಂದು ದೂರನ್ನು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ನೀಡಿದ್ದು, ಅದರಲ್ಲಿ ರೂಪಾ ತಾವು ನಡೆಸಿರುವ ಅಕ್ರಮಕ್ಕೆ ಕಡತಗಳನ್ನು ಸರಿಪಡಿಸುವ, ನಾಶಪಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರೂಪಾ ಅವರು ಒಂದು ಹೊಸ ಇನೋವಾ ಕ್ರಿಸ್ಟಾಕಾರನ್ನು ಅವರ ಉಪಯೋಗಕ್ಕೆ, ಇನ್ನೊಂದು ಇನ್ನೋವಾ, ನಿಸಾನ್ ಸನ್ನಿ ಮತ್ತು ಒಂದು ದ್ವಿಚಕ್ರ ವಾಹನವನ್ನು ಮನೆಯ ಬಳಕೆಗೆ ಉಪಯೋಗಿಸಿ ನಿಗಮಕ್ಕೆ ಹೊರೆ ಮಾಡಿದ್ದಾರೆ. ಅಕ್ರಮ ನಡೆಸಿದ್ದಾರೆ ಎಂದು ನಾನು ಆರೋಪ ಮಾಡಿದ ಬಳಿಕ ಕಡತಗಳನ್ನು ತರಿಸಿಕೊಂಡು ಕೆಲವನ್ನು ತಿದ್ದಿ ಸರಿಪಡಿಸುವ, ಮತ್ತೆ ಕೆಲವನ್ನು ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
CCTV ವಿರೂಪಗೊಳಿಸಿರುವ ಆರೋಪ, ನಿಗಮದ ಅಧ್ಯಕ್ಷ ವಿರುದ್ಧ IPS ಡಿ. ರೂಪ ದೂರು
ಮೂರು ಕಾರಿಗೆ ಡೀಸೆಲ್ ಬಿಲ್ ಮಾಡಿಸಿಕೊಳ್ಳಲು ಅನುಕೂಲವಾಗಲಿ ಎಂದು 2 ವರ್ಷದಿಂದ ಕೆಲಸ ಮಾಡುತ್ತಿದ್ದ ಹಳೆಯ ಅಕೌಂಟೆಂಟ್ ಸುಭೇಶ್ ಅವರಿಗೆ ಕಿರುಕುಳ ನೀಡಿ ಓಡಿಸಿ ಶೋ ರೂಂನಲ್ಲಿ ಕ್ಯಾಶಿಯರ್ ಆಗಿದ್ದ ಶ್ರೀಧರ್ ಎಂಬ ವ್ಯಕ್ತಿಯನ್ನು ಅನಧಿಕೃತವಾಗಿ ಜಿ.ಎಂ. ಹುದ್ದೆಗೆ ನೇಮಕ ಮಾಡಿಕೊಂಡಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ವೈಯಕ್ತಿಕ ಕೆಲಸದ ಮೇಲೆ ತೆರಳುವಾಗ ವಿಮಾನದ ಟಿಕೆಟ್, ಹೋಟೆಲ್ ವಾಸ್ತವ್ಯ ಮತ್ತು ಕಚೇರಿಯ ಸಿಬ್ಬಂದಿಯ ಲೆಕ್ಕವನ್ನೂ ತೋರಿಸಿದ್ದಾರೆ. ಮೂವರು ಚಾಲಕರನ್ನು ನೇಮಿಸಿಕೊಂಡು ಸುಮಾರು 1.25 ಕೋಟಿಗೂ ಅಧಿಕ ಹಣವನ್ನು ನಿಗಮಕ್ಕೆ ಹೊರೆ ಮಾಡಿದ್ದಾರೆ. ಈ ಬಗ್ಗೆ ನಿಗಮದಲ್ಲಿ ದಾಖಲೆಗಳಿದ್ದು, ಪರಿಶೀಲನೆ ನಡೆಸಿ ರೂಪಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸ್ನೇಹಿತರಿಗೆ ಮಾತ್ರ ರಿಯಾಯಿತಿ: ನಿಗಮದ ಶೋ ರೂಂಗಳಲ್ಲಿ ವಿದೇಶದ ಮತ್ತು ಬೆಂಗಳೂರಿನ ಸ್ನೇಹಿತರಿಗೆ ಶೇ.30ರಷ್ಟುರಿಯಾಯಿತಿ ನೀಡಿದ್ದಾರೆ. ಹೀಗೆ ರಿಯಾಯಿತಿ ನೀಡಿದರೆ ಮಂಡಳಿಗೆ ತಿಳಿಸಬೇಕೆಂಬ ನಿಯಮವಿದೆ. ಆದರೆ ಇದನ್ನು ಮಂಡಳಿಯ ಗಮನಕ್ಕೆ ತಂದಿಲ್ಲ. ಕಚೇರಿಯ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಕ್ಕೆ ಕಳುಹಿಸುತ್ತಿದ್ದು, ಈ ಬಗ್ಗೆ ತನಿಖೆ ಆಗಬೇಕು. ಎರಡು ದಿನದಿಂದ ನನ್ನ ಕಚೇರಿಯ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Belagavi: ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಗಿಬಿದ್ದ ಮುಸ್ಲಿಂ ಮುಖಂಡರು!
ಟೆಂಡರ್ ಅನ್ನು 5 ಲಕ್ಷಕ್ಕೆ ಮಿತಿಗೊಳಿಸಿ ಕೆಟಿಪಿಪಿ ನಿಯಮ ಪಾಲಿಸದೆ ತುಂಡು ಗುತ್ತಿಗೆ ನೀಡಿ ಬೋರ್ಡ್ ಗಮನಕ್ಕೆ ತರದೆ ಬಿಲ್ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 75 ಲಕ್ಷ ಅನುದಾನ ಬರುತ್ತದೆ ಎಂದು ತಪ್ಪು ಮಾಹಿತಿ ನೀಡಿ ಹೈದರಾಬಾದ್‌ನಲ್ಲಿ ನಿಗಮದ ಶೋ ರೂಂ ಉದ್ಘಾಟನೆಗೆ 58 ಲಕ್ಷ ರು. ಖರ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಕಡತ ಕೇಳಿದರೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ