'ಪಾಕ್ ಘೋಷಣೆ ನನ್ನ ಉದ್ದೇಶ ಆಗಿರಲಿಲ್ಲ, ನಾವೆಲ್ಲ ಭಾರತೀಯರೆಂದು ಹೇಳುವವಳಿದ್ದೆ'

By Kannadaprabha NewsFirst Published Feb 22, 2020, 7:54 AM IST
Highlights

ಪಾಕಿಸ್ತಾನ್‌ ಘೋಷಣೆ ನನ್ನ ಉದ್ದೇಶವಾಗಿರಲಿಲ್ಲ| ನಾವೆಲ್ಲ ಭಾರತೀಯರೆಂದು ಹೇಳುವವಳಿದ್ದೆ| ಆದರೆ ಮೊದಲೇ ಮೈಕ್‌ ಕಸಿದುಕೊಂಡರು: ಅಮೂಲ್ಯ

ಬೆಂಗಳೂರು[ಫೆ.22]: ‘ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗುವುದು ನನ್ನ ಉದ್ದೇಶವಾಗಿರಲಿಲ್ಲ. ಸಂಪೂರ್ಣ ಮಾತನಾಡಲು ಅವಕಾಶ ನೀಡಿದ್ದರೆ ಈ ರೀತಿ ಆಗುತ್ತಿರಲಿಲ್ಲ..!’

ಈ ರೀತಿ ಪೊಲೀಸರ ಬಳಿ ಹೇಳಿಕೆ ನೀಡಿರುವುದು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನ.

ಪೌರತ್ವ ತಿದ್ದುಪಡಿ (ಸಿಎಎ) ಕಾಯ್ದೆಯನ್ನು ವಿರೋಧಿಸುವವರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಟೀಕಾಕಾರರಿಗೆ ಉತ್ತರ ನೀಡುವ ಸಲುವಾಗಿ ಭಾಷಣದಲ್ಲಿ ಹಿಂದೂಸ್ತಾನ್‌ ಜಿಂದಾಬಾದ್‌ ಎಂದು ಕೂಗುತ್ತಾರೆ. ಈ ವೇಳೆ ನೆರೆದಿದ್ದವರೆಲ್ಲರೂ ಜೈಕಾರ ಕೂಗುತ್ತಾರೆ. ಆದರೆ, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದಾಗ ಸಭಿಕರೆಲ್ಲರೂ ಮೌನ ವಹಿಸುತ್ತಾರೆ. ಸಭಿಕರು ಮೌನವಹಿಸಿದಾಗ ಇದು ನಮ್ಮ ದೇಶಪ್ರೇಮ. ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದಾಗ ನೀವ್ಯಾರೂ ಧ್ವನಿ ಎತ್ತಲಿಲ್ಲ. ನಾವೆಲ್ಲರೂ ಭಾರತೀಯರು. ಹಿಂದೂಸ್ತಾನ್‌ ಜಿಂದಾಬಾದ್‌ ಎಂದು ಕೂಗಿ ಹೇಳುವ ಉದ್ದೇಶ ನನಗೆ ಇತ್ತು. ಆದರೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿದ ಕೂಡಲೇ ಮೈಕ್‌ ಕಸಿದುಕೊಂಡರು. ಸಂಪೂರ್ಣವಾಗಿ ಮಾತನಾಡಲು ಅವಕಾಶ ಕೊಡುವಂತೆ ವಿನಂತಿಸಿದೆ. ನನ್ನ ಮಾತನ್ನು ಯಾರೊಬ್ಬರೂ ಕೇಳಲಿಲ್ಲ ಎಂದು ಯುವತಿ ಹೇಳಿದ್ದಾಳೆ.

ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ

ಇದಾದ ನಂತರ ಮೈಕ್‌ ಇಲ್ಲದೇ ಮೂರು ಬಾರಿ ‘ಪಾಕಿಸ್ತಾನ ಜಿಂದಾಬಾದ್‌..ಹಿಂದುಸ್ತಾನ್‌ ಜಿಂದಾಬಾದ್‌!’ ಎಂದು ಒಟ್ಟಿಗೆ ಘೋಷಣೆ ಕೂಗಿದೆ. ಅಷ್ಟರಲ್ಲಿ ಆಯೋಜಕರು ಹಾಗೂ ಸಂಸದ ಅಸಾದುದ್ದೀನ್‌ ಒವೈಸಿ ಅವರು ಇಂತಹ ಮಾತನ್ನು ಕೇಳಲು ಸಾಧ್ಯವಿಲ್ಲವೆಂದು ಹೇಳಿ ನನ್ನನ್ನು ಸಭೆಯಿಂದ ಕಳುಹಿಸಿದರು ಎಂದು ಹೇಳಿಕೆ ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪರಪ್ಪನ ಜೈಲಿಗೆ ಅಮೂಲ್ಯ:

ಬಂಧಿತೆ ಅಮೂಲ್ಯಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಕಾರ್ಯಕ್ರಮದ ಆಯೋಜಕರು ಹಾಗೂ ವೇದಿಕೆಯಲ್ಲಿದ್ದವರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೂಲ್ಯ ಎಡಪಂಥೀಯ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದು, ಈ ಹಿಂದೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಳು. ಬಡವರಿಗೆ ಭೂ ಮತ್ತು ವಸತಿಗಾಗಿ ಹೋರಾಟ, ಲಂಚ ಮುಕ್ತ ಕರ್ನಾಟಕ, ಜಾಮಿಯ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹಾಗೂ ಜೆಎನ್‌ಯು ವಿವಿಯಲ್ಲಿನ ಗಲಾಟೆ ವಿರುದ್ಧ ಎಡಪಂಥೀಯ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾಳೆ. ಅಲ್ಲದೆ, ಕಳೆದ ಎರಡು ತಿಂಗಳಿಂದ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ರಾಜ್ಯದೆಲ್ಲೆಡೆ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.

'ಪಾಕಿಸ್ತಾನಕ್ಕೆ ಜಿಂದಾಬಾದ್‌ ಹೇಳಿರುವ ಅಮೂಲ್ಯಳನ್ನು ಗಲ್ಲಿಗೇರಿಸಬೇಕು'

ನನ್ನ ಹಿಂದೆ ಸಲಹಾ ಸಮಿತಿಯಿದೆ:

ಈ ಮಧ್ಯೆ ಅಮೂಲ್ಯ ಲಿಯೋನಾ ಮಾಧ್ಯಮವೊಂದರ ಮುಂದೆ ಹೇಳಿಕೆ ನೀಡಿದ ಹಳೆಯ ವಿಡಿಯೋ ಎಲ್ಲಡೆ ವೈರಲ್‌ ಆಗಿದೆ. ಆ ವಿಡಿಯೋದಲ್ಲಿ ‘ನನ್ನ ಹಿಂದೆ ತಜ್ಞರ ಸಲಹಾ ಸಮಿತಿ ಕೆಲಸ ಮಾಡುತ್ತಿದೆ. ನನಗೆ ಸಲ್ಲಿಸಬೇಕಾದ ಅಭಿನಂದನೆ ಅವರಿಗೆ ಸಲ್ಲಬೇಕು. ಪ್ರತಿಭಟನೆ, ಸಮಾವೇಶಗಳಲ್ಲಿ ಹೇಗೆ, ಯಾವ ವಿಷಯ ಮಾತನಾಡಬೇಕು ಎಂಬುದನ್ನು ಹಿರಿಯ ತಜ್ಞರು ತಿಳಿಸುತ್ತಾರೆ. ನನ್ನ ಜತೆ ಬೃಹತ್‌ ವಿದ್ಯಾರ್ಥಿಗಳ ಸಮೂಹವೇ ಇದೆ. ಬೆಂಗಳೂರು ಸ್ಟೂಡೆಂಟ್ಸ್‌ ಅಲಯನ್ಸ್‌ ಕೆಲಸ ಮಾಡುತ್ತಿದೆ. ನನ್ನನ್ನು ಹೊರಾಟದ ಮುಂಚೂಣಿಗೆ ಬಿಟ್ಟಿದ್ದಾರೆ. ನಿಜವಾದ ಹೀರೋ ಅವರೇ. ನಾನು ಮುಖ ಮಾತ್ರ’ ಎಂದು ಹಿಂದಿಯಲ್ಲಿ ಆಕೆ ಹೇಳಿದ್ದಾಳೆ.

click me!