ನೆರೆ ಪರಿಹಾರ ಸಿಗದೆ ವಿಶೇಷ ಚೇತನ ಯುವತಿ ಆತ್ಮಹತ್ಯೆ!

By Suvarna NewsFirst Published Feb 22, 2020, 7:30 AM IST
Highlights

ನೆರೆ ಪರಿಹಾರ ಸಿಗದೆ ಅಂಗವಿಕಲೆ ಆತ್ಮಹತ್ಯೆ!| ಸಾಲ, ಬೆಳೆನಷ್ಟದಿಂದ ರೈತರು ಪ್ರಾಣ ಕಳೆದುಕೊಳ್ಳುವುದು ಆಯ್ತು| ಇದೀಗ ಸರ್ಕಾರಕ್ಕೆ ಹೊಸ ಸಮಸ್ಯೆ| ಬಿದ್ದ ಮನೆ ದುರಸ್ತಿಗೆ ಹೆಚ್ಚಿನ ಪರಿಹಾರಕ್ಕಾಗಿ ಡೀಸಿ ಕಚೇರಿ ಅಲೆದಿದ್ದ ಮಂಜುಳಾ| ಸಿಗದ್ದಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ| ಆತ್ಮಹತ್ಯೆ ಮಾಡಿಕೊಂಡ ಮಂಜುಳಾ ಕಲ್ಲೂರ

ಧಾರವಾಡ[ಫೆ.22]: ಸಾಲಬಾಧೆ, ಬೆಳೆನಷ್ಟದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು, ಇದು ರಾಜಕೀಯ ದಾಳವಾಗಿ ಪರಿವರ್ತನೆಗೊಳ್ಳುವುದು, ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುವುದು, ಸರ್ಕಾರಗಳು ಇಕ್ಕಟ್ಟಿಗೆ ಸಿಲುಕುವುದು ಆಯ್ತು, ಇದೀಗ ನೆರೆ ಸಂತ್ರಸ್ತರ ವಿಷಯದಲ್ಲೂ ಇದೇ ರೀತಿಯ ವಿದ್ಯಮಾನಗಳು ಜರುಗುವ ಆತಂಕ ಎದುರಾಗಿದೆ.

ನೆರೆ ಪರಿಹಾರ ವಿತರಣೆ, ಪುನರ್ವಸತಿಯಲ್ಲಿ ಆಗುತ್ತಿರುವ ವಿಳಂಬ, ಗೊಂದಲಗಳು ರಾಜ್ಯದಲ್ಲಿ ಮುಂದುವರಿದಿದ್ದು, ಧಾರವಾಡದಲ್ಲಿ ಸಂತ್ರಸ್ತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಕುಸಿದಿದ್ದ ಮನೆಗೆ ಹೆಚ್ಚಿನ ಪರಿಹಾರ ಕೋರಿ ಮೂರು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳಿಗೆ ದುಂಬಾಲು ಬಿದ್ದಿದ್ದ ಅಂಗವಿಕಲೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ನಗರದ ಕೆ.ಸಿ. ಪಾರ್ಕ್ನಲ್ಲಿ ಶುಕ್ರ​ವಾರ ಸಂಭ​ವಿ​ಸಿದೆ.

ತಾಲೂಕಿನ ದುಬ್ಬನಮರಡಿಯ ಮಂಜುಳಾ ಕಲ್ಲೂರ (33) ಆತ್ಮಹತ್ಯೆಗೆ ಶರಣಾದ ನತದೃಷ್ಟೆ. ಇವರ ಸಹೋದರಿ ಹಾಗೂ ಸಹೋದರ ಸಹ ಇವರಂತೆ ಕುಬ್ಜರು. ಇವರ ತಂದೆಯೂ ದೇಹದ ಬಲಭಾಗ ಸ್ವಾಧೀನ ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಗೆ ಹೆಚ್ಚಿನ ಪರಿಹಾರ ಬರಬಹುದು, ಅದರಿಂದ ಬೀದಿಗೆ ಬಂದಿರುವ ತಮ್ಮ ಕುಟುಂಬಕ್ಕೆ ಕನಿಷ್ಠ ನೆರಳಾದರೂ ಲಭಿಸೀತು ಎಂದು ಮಂಜುಳಾ ಜಿಲ್ಲಾಧಿಕಾರಿ ಕಚೇರಿಗೆ ಕೆಲ ದಿನಗಳಿಂದ ಅಲೆದಾಟ ನಡೆಸಿದ್ದರು. ಆದರೆ, ಪರಿಹಾರದ ವಿಚಾರದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ, ಉದಾಸೀನತೆಗೆ ಬೇಸತ್ತು ಕೊನೆಗೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ.

ಬಡ ಕುಟುಂಬ: ತೀವ್ರ ಬಡತನದಲ್ಲಿದ್ದ ಮಂಜುಳಾ ಕಲ್ಲೂರರ ಕುಟುಂಬದ ಕುಸಿದಿರುವ ಮನೆಗೆ ಕೇವಲ .50 ಸಾವಿರ ಪರಿಹಾರ ಸಿಕ್ಕಿತ್ತು. ಇಷ್ಟುಪರಿಹಾರ ಸಾಲುವುದಿಲ್ಲ, ಮನೆ ಪೂರ್ತಿ ಬಿದ್ದು ಹೋಗಿದ್ದು ಹೆಚ್ಚಿನ ಪರಿಹಾರ ಕೊಡಬೇಕೆಂದು ಎರಡ್ಮೂರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. 20 ದಿನಗಳ ಹಿಂದೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು. ಜೊತೆಗೆ ಕಳೆದ ಸೋಮವಾರವಷ್ಟೇ ಜಿಲ್ಲಾಧಿಕಾರಿಗಳನ್ನು ಮತ್ತೆ ಭೇಟಿ ಮಾಡಿ ತಮ್ಮ ಕುಟುಂಬದ ಸಂಕಷ್ಟಗಳನ್ನು ಮಂಜುಳಾ ಹೇಳಿಕೊಂಡಿದ್ದರು.

ಈ ಕುರಿತು ಫೆ.18ರಂದು ವಿಶೇಷ ವರದಿಯನ್ನೂ ಪ್ರಕಟಿಸಿತ್ತು. ಮನೆ ಬಿದ್ದಿದ್ದು ಹೆಚ್ಚಿನ ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಪದೇ ಪದೇ ಮನವಿ ಮಾಡಿದರೂ ಸಿಗದ ಪರಿಹಾರ ಹಾಗೂ ಕಿತ್ತು ತಿನ್ನುವ ಬಡತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಸಹೋದರ ಕಲ್ಲಪ್ಪ ಲೋಕೂರ ಹೇಳುತ್ತಾರೆ.

ಸದ್ಯ ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜುಬೇರ್‌ ಅಹಮ್ಮದ್‌, ತಹಸೀಲ್ದಾರ್‌ ಸಂತೋಷ್‌ ಬಿರಾದರ್‌ ಹಾಗೂ ಉಪ ನಗರ ಪೊಲೀಸರು ಭೇಟಿ ನೀಡಿ ಮಂಜುಳಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಮಂಜುಳಾ ಅವರ ಮನೆ ಹಾನಿ ಕುರಿತಂತೆ ಕಳೆದ ಜನವರಿ ತಿಂಗಳಲ್ಲಿ ಪರಿಶೀಲನೆಗೆ ನೋಡಲ್‌ ಅಧಿಕಾರಿಗಳು ಹೋಗಿ ವರದಿ ನೀಡಿದ್ದಾರೆ. ಅದರಂತೆ ಈಗಾಗಲೇ ಸಿ ಕೆಟಗರಿಯಡಿ .50 ಸಾವಿರ ಪರಿಹಾರ (ಮನೆಗಳು ಭಾಗಶಃ ಕುಸಿದರೆ, ಸಿ ಕೆಟಗರಿ, ಪೂರ್ಣ ಕುಸಿದರೆ ಬಿ ಕೆಟಗರಿಯಡಿ ಪರಿಹಾರ ವಿತರಣೆ) ಸಹ ನೀಡಲಾಗಿತ್ತು. ಹೀಗಾಗಿ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಈ ಮೊದಲೇ ತಿಳಿಸಲಾಗಿತ್ತು. ಇಷ್ಟಾಗಿಯೂ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದು ತಮಗೂ ಬೇಸರ ಮೂಡಿಸಿದೆ ಎಂದು ಉಪ ವಿಭಾಗಾಧಿಕಾರಿ ಜುಬೇರ್‌ ಅಹಮ್ಮದ್‌ ತಿಳಿಸಿದರು. ಆತ್ಮಹತ್ಯೆ ಕುರಿತು ಉಪ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾವಿನ ತನಿಖೆ ನಡೆಯುತ್ತಿದೆ.

ಸರ್ಕಾರ, ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಲಿ

ಆರು ತಿಂಗಳ ಹಿಂದಿನ ಭೀಕರ ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ನೆರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಸಕಾಲಕ್ಕೆ ಲಭಿಸಬೇಕಿದೆ. ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಿದೆ. ಪರಿಹಾರ ಸಿಗುವುದಿಲ್ಲ, ಈ ಪರಿಹಾರ ಏತಕ್ಕೂ ಸಾಲಲ್ಲ ಎನ್ನುವ ಜಿಗುಪ್ಸೆ, ಹತಾಶæಯಿಂದ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಸಂತ್ರಸ್ತರು ಕೈಹಾಕುವುದನ್ನು ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಹಾರ ವಿತರಣಾ ಕಾರ್ಯವನ್ನು ಚುರುಕುಗೊಳಿಸಬೇಕಿದೆ. ಕೆಲ ಪ್ರಕರಣಗಳನ್ನು ಮಾನವೀಯ ನೆಲೆಯಲ್ಲಿ ನೋಡಿ ಹೆಚ್ಚಿನ ಪರಿಹಾರ ನೀಡಬೇಕಿದೆ.

click me!