ರಾಜ್ಯ ಸರ್ಕಾರವೇ ಈ ಬಗ್ಗೆ ನನಗೆ ಉತ್ತರ ಕೊಟ್ಟಿದೆ, ಎಸ್‌ಡಿಪಿಐ- ಬಿಜೆಪಿ ನಂಟಿನ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ
ಬೆಂಗಳೂರು(ಸೆ.30): ನನ್ನ ನೇತೃತ್ವದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಪಿಎಫ್‌ಐ ಮುಖಂಡರು, ಕಾರ್ಯಕರ್ತರ ಮೇಲಿನ ಯಾವುದೇ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿಲ್ಲ. ಈ ಬಗ್ಗೆ ಸರ್ಕಾರವೇ ಉತ್ತರ ನೀಡಿದೆ. ಈಗ ರಾಜಕೀಯ ದುರುದ್ದೇಶದಿಂದ ಜನರನ್ನು ದಾರಿ ತಪ್ಪಿಸಲು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅಲ್ಲದೆ, ಪಿಎಫ್‌ಐ ಮತ್ತು ಎಸ್‌ಡಿಪಿಐ ಚಟುವಟಿಕೆಗಳಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಬಿಜೆಪಿ ಮತ್ತು ಎಸ್‌ಡಿಪಿಐ (ಪಿಎಫ್‌ಐನ ರಾಜಕೀಯ ಪಕ್ಷ) ನಡುವಿನ ಒಳ ಒಪ್ಪಂದಗಳೇನು? ಯಾವ್ಯಾವ ಚುನಾವಣೆಯಲ್ಲಿ ಇವರಿಬ್ಬರ ನಡುವೆ ಯಾವ್ಯಾವ ರೀತಿಯ ಪರಸ್ಪರ ಸಹಕಾರ ಏರ್ಪಟ್ಟಿದೆ ಎಂಬ ಬಗ್ಗೆ ಹಾಲಿ ಹೈಕೊರ್ಚ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿಂದೆಯೇ ನಾನು ಬಿಜೆಪಿ ಸರ್ಕಾರಕ್ಕೆ ಈ ಬಗ್ಗೆ ನಾಲ್ಕು ಪತ್ರಗಳನ್ನು ಬರೆದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆಯೇ? ಯಾವುದೇ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತೇ ಎನ್ನುವ ಪ್ರಶ್ನೆ ಕೇಳಿದ್ದೆ. ಸರ್ಕಾರವೇ ನೀಡಿರುವ ಉತ್ತರದಲ್ಲಿ ಅಂತಹ ಯಾವುದೇ ಮೊಕದ್ದಮೆಗಳನ್ನು ಹಿಂದೆ ಪಡೆದಿರುವ ಉಲ್ಲೇಖಗಳೇ ಇಲ್ಲ. ಬದಲಿಗೆ ನಾನು ಮುಖ್ಯಮಂತ್ರಿ ಆಗಿದ್ದ ಸರ್ಕಾರದ ಅವಧಿಯಲ್ಲಿ ರೈತ, ದಲಿತ, ಕಾರ್ಮಿಕ, ಕಮ್ಯುನಿಸ್ವ್ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರುಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಮಾತ್ರ ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರ್ಕಾರವೇ ಉತ್ತರಿಸಿದೆ. ಆದರೆ ಈಗ ರಾಜಕೀಯ ದುರುದ್ದೇಶದಿಂದ ಸುಳ್ಳು ಹೇಳುತ್ತಿದೆ. ಇದನ್ನು ಖಂಡಿಸುತ್ತೇನೆ. ಈಗಲೂ ಯಾವುದಾದರೂ ಅಂತಹ ಪ್ರಕರಣಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಸ್ಥಿತಿ ಬೆಕ್ಕಿನಂತಾಗಿದೆ: ಅರುಣ್ ಸಿಂಗ್
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎಂದು ಬಿಜೆಪಿ ಪರಿವಾರದವರು ಹೇಳಿರುವುದೆಲ್ಲವೂ ಸುಳ್ಳಿನ ಭಜನೆಯಷ್ಟೆ. ಸಂಘ ಪರಿವಾರದ ಅಂಗಳದಲ್ಲೇ ಇರುವ ಪ್ರಮೋದ್ ಮುತಾಲಿಕ್ ಅವರೇ ಕೆಲ ದಿನಗಳ ಹಿಂದೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆ ಎಂದು ಹೇಳಿದ್ದಾರೆ. ಹಾಗೆಯೇ ಸಂಘ ಪರಿವಾರದ ಅಂಗಳದಲ್ಲೇ ಇರುವ ಸತ್ಯಜಿತ್ ಸುರತ್ಕಲ್ ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಬಿಜೆಪಿಯ ಬಿ ಟೀಮ್ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅವರ ಹೇಳಿಕೆಗಳನ್ನು ಬಿಜೆಪಿಯವರಾಗಲೀ, ಸಂಘ ಪರಿವಾರವಾಗಲೀ ಇದುವರೆಗೂ ಅಲ್ಲಗಳೆದಿಲ್ಲ. ಹಾಗಾದರೆ ಅವರು ಹೇಳಿದ್ದು ನಿಜ ತಾನೆ? ಪಿಎಫ್‌ಐ ಮತ್ತು ಎಸ್‌ಡಿಪಿಐ ಚಟುವಟಿಕೆಗಳಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ಇಡಿ ರಾಜ್ಯದ ಜನತೆಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ನಡುವಿನ ಒಳ ಒಪ್ಪಂದಗಳ ಬಗ್ಗೆ ಹಾಗೂ ಮುತಾಲಿಕ್ ಮತ್ತು ಸತ್ಯಜಿತ್ ಅವರ ಹೇಳಿಕೆಗಳ ಬಗ್ಗೆ ನ್ಯಾಯಯುತ ತನಿಖೆ ನಡೆಸಲಿ. ಬಿಜೆಪಿಯ ಅಸಲಿ ಮುಖ ಹೊರಬರುತ್ತದೆ ಎಂದು ಹೇಳಿದ್ದಾರೆ.